ಮಳೆಯಿಂದ ಹಾನಿಗೊಳಗಾದ ಕುಟುಂಬಗಳಿಗೆ ರೆಡ್‌ಕ್ರಾಸ್ ಸಹಾಯ ಹಸ್ತ

ಮಳೆಯಿಂದ ಹಾನಿಗೊಳಗಾದ ಕುಟುಂಬಗಳಿಗೆ ರೆಡ್‌ಕ್ರಾಸ್ ಸಹಾಯ ಹಸ್ತ
Published on

ಹಾಸನ: ಜಿಲ್ಲಾ ಭಾರತೀಯ ರೆಡ್ ಕ್ರಾಸ್ ಘಟಕ, ಸಕಲೇಶಪುರ ತಾಲೂಕು ರೆಡ್ ಕ್ರಾಸ್ ಘಟಕದ ಸಹಯೋಗದೊಂದಿಗೆ ತಾಲೂಕಿನಲ್ಲಿ ಮಳೆಯಿಂದಾಗಿ ಹಾನಿಗೊಳಗಾದ ಮನೆಗಳಿಗೆ ತುರ್ತು ಸಹಾಯ ನೀಡುವ ಹಿನ್ನಲೆಯಲ್ಲಿ ಸಂಪೂರ್ಣ ಮನೆ ಹಾನಿಗೊಳಗಾದ ಕುಟುಂಬಗಳಿಗೆ ಪರಿಹಾರವಾಗಿ ಆಹಾರ ಸಾಮಾಗ್ರಿಗಳ ಕಿಟ್, ಒಂದು ದೊಡ್ಡ ಟಾರ್ಪಲ್. ಕುಟುಂಬಕ್ಕೆ ಅಡುಗೆ ಮಾಡಿಕೊಳ್ಳುವಷ್ಟು ಪಾತ್ರೆಗಳು ಹಾಸಿಗೆ ಹೊದಿಕೆಗಳು, ಸೊಳ್ಳೆ ಪರದೆ, ಸೋಪು, ಟವಲ್ ,ಪೇಸ್ಟ್, ಬ್ರೆಶ್ ಸೇರಿದಂತೆ ಅಗತ್ಯ ವಸ್ತುಗಳನ್ನ ವಿತರಿಸಲಾಯಿತು.
ಸಕಲೇಶಪುರ ತಾಲೂಕಿನ ತಹಸೀಲ್ದಾರ್ ಕಚೇರಿಯಿಂದ ಅಧಿಕೃತ ಮತ್ತು ಅನಧಿಕೃತ ಪೂರ್ಣ ಹಾನಿಗೊಳಗಾದ ಬಡತನ ರೇಖೆಗಿಂತ ಕೆಳಗಿರುವ ವ್ಯಕ್ತಿಗಳ ಮನೆಗಳನ್ನು ಅಯ್ಕೆ ಮಾಡಿಕೊಂಡು ತಾತ್ಕಾಲಿಕ ಪರಿಹಾರ ಸಾಮಗ್ರಿಗಳ ವಿತರಣಾ ಕಾರ್ಯಕ್ರಮವನ್ನು ಜಿಲ್ಲಾ ರೆಡ್ ಕ್ರಾಸ್ ಘಟಕದ ಸಭಾಪತಿ ಹೆಮ್ಮಿಗೆ ಮೋಹನ್ ರವರ ನೇತೃತ್ವದಲ್ಲಿ ತಾಲೂಕಿನ ಕಸಬಾ ಹೋಬಳಿ, ಬೆಳಗೊಡು, ಕೆ.ಹೊಸಕೋಟೆ ಹೋಬಳಿಗಳ ಕೆಲಗಳಲೆ, ಹೆಬ್ಬನಹಳ್ಳಿ, ಕೌಡಹಳ್ಳಿ, ಹೊಸಗದ್ದೆ, ಗೊಳಗೊಂಡ, ಶಾಂತಪುರ, ಜಾನಕೆರೆ, ಕೋಗರವಳ್ಳಿ ಗ್ರಾಮಗಳ ಒಟ್ಟು 10 ಬಡಕುಟುಂಬಗಳ ಮನೆಗಳ ಬಳಿ ಹೋಗಿ ಗ್ರಾಮಸ್ಥರ ಸಮ್ಮುಖದಲ್ಲಿ ಸಾಮಾಗ್ರಿಗಳನ್ನು ವಿತರಿಸಲಾಯಿತು.
ಉಳಿದ ತಾಲೂಕುಗಳಿಗೂ ರೆಡ್ ಕ್ರಾಸ್ ತಂಡ ಭೇಟಿ ನೀಡಿ ಪೂರ್ಣ ಹಾನಿಯಾಗಿರುವ ಮನೆಗಳನ್ನು ಗುರುತಿಸಿ ಅವರಿಗೆ ಮುಂದಿನ ಹತ್ತು ದಿನಗಳಲ್ಲಿ ಸಾಮಾಗ್ರಿಗಳನ್ನು ವಿತರಿಸಲಾಗುವುದು ಎಂದು ಸಭಾಪತಿಗಳು ತಿಳಿಸಿದ್ದಾರೆ.
ವಿತರಣಾ ಕಾರ್ಯಕ್ರಮದಲ್ಲಿ ಹಾಸನ ಜಿಲ್ಲಾ ಘಟಕದ ಕಾರ್ಯದರ್ಶಿ ಶಬೀರ್ ಅಹಮದ್, ಖಜಾಂಜಿ ಎಚ್.ಡಿ ಜಯೇಂದ್ರ ಕುಮಾರ್, ನಿರ್ದೇಶಕರಾದ ಕೆ.ಟಿ ಜಯಶ್ರೀ, ಎಲ್.ಎಸ್.ನಿರ್ಮಲ, ಜಯಪ್ರಕಾಶ್, ಗಿರೀಶ್, ಗಿರಿಗೌಡ ಸಂಚಾಲಕ ಹರ್ಷಿತ್ ಸಕಲೇಶಪುರ ತಾಲೂಕು ಘಟಕದ ಸಭಾಪತಿ ಶಾರದಾ ಗುರುಮೂರ್ತಿ, ಕಾರ್ಯದರ್ಶಿ ರೇಖಾ ಸುರೇಶ್, ನಿರ್ದೇಶಕ ಹರೀಶ್ ಮತ್ತಿತರರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net