

ವಿಜಯವಾಣಿ ಸುದ್ದಿಜಾಲ ಶಿಕಾರಿಪುರ
ತಾಲೂಕಿನಲ್ಲಿ ನಿರಂತರ ಮಳೆ ಸುರಿಯುತ್ತಿರುವ ಕಾರಣದಿಂದ ನಾಟಿ ಮಾಡಿದ ಭತ್ತಕ್ಕೆ ರಸಗೊಬ್ಬರ ಹಾಕಲು ತೊಂದರೆಯಾಗಿದೆ. ಕೆಲವೆಡೆ ಒಂದು ಬಾರಿ ರಸಗೊಬ್ಬರ ನೀಡಿದ್ದಾರೆ. ಆದರೆ ತೀವ್ರ ಮಳೆಯಿಂದಾಗಿ ಸಸಿಗಳು ಬೆಳವಣಿಗೆ ಕಂಡಿಲ್ಲ. ಹಾಗಾಗಿ ಇನ್ನೊಮ್ಮೆ ರಸಗೊಬ್ಬರ ನೀಡಬೇಕಿದೆ.
ಇದೇ ರೀತಿ ಮಳೆ ಮುಂದುವರಿದರೆ ಉತ್ತಮ ಇಳುವರಿ ನಿರೀಕ್ಷೆ ಅಸಾಧ್ಯ. ಆನಂತರ ಹಲವು ರೋಗಗಳು ಕಾಣಿಸಿಕೊಳ್ಳುತ್ತವೆ. ಸೆ.1ರಿಂದ ಮಳೆ ಬಿಡುವು ನೀಡಲಿದೆ ಎಂದು ಹವಾಮಾನ ಇಲಾಖೆ ಹೇಳುತ್ತಿದ್ದರೂ ಯಾವುದೇ ಲಕ್ಷಣಗಳು ಕಂಡುಬರುತ್ತಿಲ್ಲ.
ಸುಮಾರು 13 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಮೆಕ್ಕೆಜೋಳ ಬೆಳೆಯಲಾಗಿದೆ. ಮಳೆ ಮುಂದುವರಿದರೆ ಬೆಳೆಗಾರರಿಗೆ ಸಂಕಷ್ಟ ನಿಶ್ಚಿತ. 25 ಸಾವಿರ ಹೆಕ್ಟೇರ್ ಅಡಕೆ ಬೆಳೆಯುವ ಪ್ರದೇಶವಿದೆ. ಕೆಲವು ಕಡೆಗಳಲ್ಲಿ ಅಡಕೆ ಸಂಪೂರ್ಣ ಬಲಿಯದ ಕಾರಣ ಕೊಯ್ಲು ಆರಂಭವಾಗಿಲ್ಲ. ಮಳೆ ಮುಂದುವರಿದರೆ ಕೊಯ್ಲುಗೆ ಹಿನ್ನಡೆಯಾಗಿ ಮರದಲ್ಲಿಯೇ ಅಡಕೆ ಹಣ್ಣಾಗುವ ಸಾಧ್ಯತೆ ಇದೆ. ಜತೆಗೆ ಕೊಳೆರೋಗದ ಬಾಧೆ ಜಾಸ್ತಿಯಾಗುತ್ತಿದೆ. ತಾಲೂಕಿನಲ್ಲಿ ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷವೂ ನಿರೀಕ್ಷಿತ ಸಲು ಸಿಗುವ ಸಾಧ್ಯತೆ ಕಡಿಮೆ. ತೋಟಗಾರಿಕೆ ಬೆಳೆಗಳಿಗೆ 14 ಸಾವಿರ ರೈತರು, ಕೃಷಿ ಬೆಳೆಗೆ 13,350 ರೈತರು ಬೆಳೆ ವಿಮೆ ಮಾಡಿಸಿದ್ದಾರೆ.
ತಾಲೂಕಿನ ಮಳೆಯ ಪ್ರಮಾಣ
ಶಿಕಾರಿಪುರ ತಾಲೂಕಿನಲ್ಲಿ ಈ ಬಾರಿ ಶೇ.7ರಷ್ಟು ಮಳೆ ಕೊರತೆಯಾಗಿದೆ. ವರ್ಷದ 179.9 ಮಿಮೀ ವಾಡಿಕೆ ಮಳೆಗೆ 159.8 ಮಳೆಯಾಗಿದೆ. ಕಸಬಾ ಹೋಬಳಿಯಲ್ಲಿ 171ಮಿ.ಮೀಗೆ 199 ಮಿ.ಮೀ, ಅಂಜನಾಪುರ ಹೋಬಳಿಯಲ್ಲಿ 238 ಮಿ.ಮೀಗೆ 170.8 ಮಿ.ಮೀ, ಹೊಸೂರು ಹೋಬಳಿಯಲ್ಲಿ 140.4 ಮಿ.ಮೀಗೆ 101.6 ಮಿ.ಮೀ, ಉಡುಗಣಿ ಹೋಬಳಿಯಲ್ಲಿ 195.9 ಮಿ.ಮೀಗೆ 185 ಮಿ.ಮೀ, ತಾಳಗುಂದ ಹೋಬಳಿಯಲ್ಲಿ 198 ಮಿ.ಮೀಗೆ 170.9 ಮಿ.ಮೀ ಮಳೆಯಾಗಿದೆ.
ಕಾಲಕಾಲಕ್ಕೆ ಸರಿಯಾಗಿ ಮಳೆ ಬಾರದೇ ಇರುವುದರಿಂದ ಮೆಕ್ಕೆಜೋಳದ ಸಲು ಹಾನಿಗೀಡಾಗಿದೆ. ಈ ಬಗ್ಗೆ ತಾಲೂಕು ಆಡಳಿತ ಮತ್ತು ಕೃಷಿ ಇಲಾಖೆ ಬೆಳೆ ಹಾಳಾದ ಜಮೀನುಗಳಿಗೆ ತೆರಳಿ ಜಿಲ್ಲಾಕಾರಿ ಆದೇಶದಂತೆ ವರದಿ ಕಳಿಸುತ್ತೇವೆ. ಅಡಕೆ ಹೊರತುಪಡಿಸಿ ಉಳಿದ ಬೆಳೆ ವಿಮೆ ಪರಿಹಾರ ಜಮಾ ಆಗಿದ್ದು, ರೈತರಿಗೆ ಅನುಕೂಲವಾಗಿದೆ.
ಕಿರಣ್‌ಕುಮಾರ್ ಹರ್ತಿ, ಕೃಷಿ ಇಲಾಖೆ ಸಹಾಯಕ ನಿರ್ದೇಶಕ