ಮಳೆಯಿಂದ ಬೀದಿಗೆ ಬಿದ್ದ ಕುಟುಂಬ

22-pnp 2
Published on

ಪಾಂಡವಪುರ: ತಾಲೂಕಿನ ಬೇಬಿ ಗ್ರಾಮದಲ್ಲಿ ಇತ್ತೀಚೆಗೆ ಸುರಿದ ಮಳೆಗೆ ಮನೆ ಕಳೆದುಕೊಂಡ ಕುಟುಂಬವೊಂದು ಕೊಟ್ಟಿಗೆಯಲ್ಲಿ ಟಾರ್ಪಾಲು ಕಟ್ಟಿಕೊಂಡು ಜೀವನ ಸಾಗಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.


ಶಿವಯ್ಯ ಎಂಬುವರು ವಾಸವಿದ್ದ ಮನೆ ಇತ್ತೀಚೆಗೆ ಸುರಿದ ಭಾರಿ ಮಳೆಗೆ ಛಾವಣಿ ಸಮೇತ ಕುಸಿದು ಬಿದ್ದಿದೆ. ಕೃಷಿ ಕಾರ್ಮಿಕರಾಗಿರುವ ಶಿವಣ್ಣ ಅವರಿಗೆ ಮನೆ ಮರು ನಿರ್ಮಾಣ ಮಾಡಿಕೊಳ್ಳುವಷ್ಟು ಆರ್ಥಿಕವಾಗಿ ಸಬಲರಾಗಿಲ್ಲದ ಕಾರಣ ಕೊಟ್ಟಿಗೆಯಲ್ಲಿ ಹಸುಕರುಗಳೊಂದಿಗೆ ಜೀವನ ಸಾಗಿಸುತ್ತಿದ್ದಾರೆ.


ಶಿವಯ್ಯ ಅವರಿಗೆ ಇಬ್ಬರು ಮಕ್ಕಳಿದ್ದು, ಒಬ್ಬ ಮಗ ಇಟ್ಟಿಗೆ ಕೂಯ್ಯುವ ಕಾಯಕ ನಿರ್ವಹಿಸುತ್ತಿದ್ದಾನೆ. ಆದರೆ ಮಳೆ ಕಾರಣಕ್ಕಾಗಿ ಕೆಲಸವೂ ಸಿಗುತ್ತಿಲ್ಲ. ಮಗಳಿಗೆ ಮದುವೆಯಾಗಿದ್ದು, ಬಾಣಂತಿಯಾಗಿರುವ ಕಾರಣ ಗೋಡೆ ಕುಸಿದಿರುವ ಮನೆಯೊಳಗೆ ಹಸುಗೂಸಿನೊಂದಿಗೆ ಜೀವಭಯದಿಂದ ಕಾಲ ಕಳೆಯುತ್ತಿದ್ದಾರೆ.


ಕೂಲಿ ಮಾಡಿಕೊಂಡು ಬರುವ ಆದಾಯದಲ್ಲಿ ದೈನಂದಿನ ಜೀವನ ನಡೆಸುತ್ತಿದ್ದ ಕುಟುಂಬವನ್ನು ಮಳೆ ಬೀದಿಗೆ ತಂದು ಬಿಟ್ಟಿದೆ. ಕುಸಿದಿರುವ ಮನೆಯ ಗೋಡೆಯನ್ನು ತಕ್ಕ ಮಟ್ಟಿಗಾದರೂ ದುರಸ್ತಿ ಮಾಡಿಕೊಳ್ಳುವುದಕ್ಕೂ ಅವರ ಬಳಿ ಹಣವಿಲ್ಲ. ಮಗನಿಗೂ ಕೆಲಸವಿಲ್ಲ. ಜತೆಗೆ ಮಗಳಿಗೆ ಬಾಣಂತನ ಮಾಡಬೇಕು. ಈ ಸಮಸ್ಯೆಗಳ ನಡುವೆ ಮನೆ ನಿರ್ಮಾಣ ಮಾಡುವುದು ಕನಸಿನ ಮಾತು. ಹೀಗಾಗಿ ತಾಲೂಕು ಆಡಳಿತ ಮತ್ತು ಜಿಲ್ಲಾಡಳಿತ ಇವರ ಕಷ್ಟಕ್ಕೆ ಸ್ಪಂದಿಸಿ ಪರಿಹಾರ ನೀಡಿದರೆ ಸಾಧ್ಯವಾದಷ್ಟು ಮಟ್ಟಿಗೆ ಮನೆ ಕಟ್ಟಿಕೊಳ್ಳಬಹದು ಎಂಬ ನಿರೀಕ್ಷೆಯಲ್ಲಿ ಶಿವಯ್ಯ ಅವರ ಕುಟುಂಬ ಕಾಲ ಕಳೆಯುತ್ತಿದೆ.


ಶಿವಯ್ಯ ಅವರ ತಾಯಿಯ ತಾಯಿ (ಅಜ್ಜಿ) ಹೆಸರಿನಲ್ಲಿ ಮನೆ ಇದೆ. ಕಂದಾಯ ಇಲಾಖೆ ಅಧಿಕಾರಿಗಳು ಬಂದು ಪರಿಶೀಲನೆ ಮಾಡಿಕೊಂಡು ಹೋಗಿದ್ದಾರೆ. ಮನೆಯ ಒಡೆತನ ಇರುವವರ ಅಗತ್ಯ ದಾಖಲಾತಿ ಒದಗಿಸುವಂತೆ ಕುಟುಂಬ ವರ್ಗಕ್ಕೆ ಸೂಚಿಸಿದ್ದಾರೆ. ಆದರೆ ಶಿವಯ್ಯ ಅವರ ಅಜ್ಜಿ ಮರಣ ಹೊಂದಿ ನಾಲ್ಕೈದು ದಶಕಗಳು ಕಳೆದಿರುವ ಹಿನ್ನೆಲೆಯಲ್ಲಿ ಮರಣ ಪ್ರಮಾಣ ಪತ್ರ ಕುಟುಂಬದವರ ಬಳಿ ಇಲ್ಲ. ಈಗ ಅಧಿಕಾರಿಗಳು ಕೇಳುವ ದಾಖಲಾತಿ ನೀಡಲು ಸಾಧ್ಯವಾಗಿಲ್ಲ. ಆದರೆ ತಾಲೂಕು ಆಡಳಿತ ಮಾನವೀಯತೆ ದೃಷ್ಟಿಯಿಂದ ತಕ್ಷಣ ಕ್ರಮ ಕೈಗೊಂಡು ಪರಿಹಾರ ಒದಗಿಸಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ಪಾಂಡವಪುರ ತಾಲೂಕಿನ ಬೇಬಿ ಗ್ರಾಮದ ಶಿವಯ್ಯ ಅವರ ಮನೆಗೆ ಭೇಟಿ ನೀಡಿ ಪರಿಶೀಲಿಸಲಾಗಿದೆ. ವಂಶವೃಕ್ಷ ಸೇರಿದಂತೆ ಅಗತ್ಯ ದಾಖಲೆಗಳನ್ನು ಒದಗಿಸಿದರೆ ಸರ್ಕಾರದಿಂದ ಸಿಗಬಹುದಾದ ಪರಿಹಾರ ಒದಗಿಸಲು ಕ್ರಮ ಕೈಗೊಳ್ಳಲಾಗುವುದು.ಮಾದೇಶ್ ಕುಮಾರ್, ಕಂದಾಯ ನಿರೀಕ್ಷಕ, ಚಿನಕುರಳಿ ಹೋಬಳಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net