ಮಳೆಯಿಂದ ನೆಲ ಕಚ್ಚಿದ ಫಸಲು

Published on

ಹನೂರು: ಫೆಂಗಲ್ ಚಂಡ ಮಾರುತದ ಪರಿಣಾಮ ಕಳೆದ 2 ದಿನಗಳಿಂದ ಸುರಿದ ಮಳೆಗೆ ತಾಲೂಕಿನ ಗಂಗನದೊಡ್ಡಿಯಲ್ಲಿ ರಾಗಿ, ಕಾಂಚಳ್ಳಿಯಲ್ಲಿ ಮುಸುಕಿನ ಜೋಳ, ಮಹದೇಶ್ವರಬೆಟ್ಟ ಸಮೀಪದ ಪಡಸಲನತ್ತ ಗ್ರಾಮದಲ್ಲಿ ರಾಗಿ ಹಾಗೂ ತೊಗರಿ ಫಸಲು ನೆಲಕಚ್ಚಿದೆ.

ಕಳೆದ ವರ್ಷ ಸಮರ್ಪಕ ಮಳೆಯಾಗದ ಪರಿಣಾಮ ತಾಲೂಕಿನ ರೈತರು ಕೃಷಿಯಲ್ಲಿ ನಷ್ಟವನ್ನು ಅನುಭವಿಸಿದ್ದರು. ಆದರೆ, ಈ ಬಾರಿ ಆರಂಭದಲ್ಲಿ ಉತ್ತಮ ಮಳೆಯಾಗಿದ್ದರಿಂದ ಖುಷ್ಕಿ ಜಮೀನಿನಲ್ಲಿ ರೈತರು ರಾಗಿ ಹಾಗೂ ಮುಸುಕಿನ ಜೋಳವನ್ನು ಬಿತ್ತನೆ ಮಾಡಿದ್ದರು. ತೆನೆಗಳು ಬಂದಿದ್ದು, ಕಟಾವಿನ ಹಂತದಲ್ಲಿದೆ. ಆದರೆ, ಕಳೆದ 2 ದಿನಗಳಿಂದ ಸುರಿದ ಗಾಳಿ ಮಳೆಗೆ ಗಂಗನದೊಡ್ಡಿಯಲ್ಲಿ ರೈತ ಚಿನ್ನಣ್ಣ ಎಂಬುವರು ಒಂದೂವರೆ ಎಕರೆಯಲ್ಲಿ ಬೆಳೆದಿದ್ದ ರಾಗಿ ಫಸಲು ಸಂಪೂರ್ಣ ನೆಲಕಚ್ಚಿದ್ದರೆ, ಕಾಂಚಳ್ಳಿಯಲ್ಲಿ ಚೆಲುವೇಗೌಡ ಹಾಗೂ ಈರೇಗೌಡ ಎಂಬುವರಿಗೆ ಸೇರಿದ ಒಂದು ಎಕರೆಯಲ್ಲಿನ ಮುಸುಕಿನ ಜೋಳದ ಫಸಲು ನೆಲಕ್ಕುರುಳಿದೆ. ಇನ್ನು ಪಡಸಲನತ್ತ ಗ್ರಾಮದ ನಾಗರಾಜು ಎಂಬುವರು ಒಂದು ಎಕರೆಯಲ್ಲಿ ಬೆಳೆದಿದ್ದ ರಾಗಿ ಹಾಗೂ ತೊಗರಿ ಫಸಲು ಹಾಳಾಗಿದ್ದು, ಕೈಗೆ ಬಂದ ತುತ್ತು ಬಾಯಿಗೆ ಬಾರದಂತಾಗಿದೆ. ಇದರಿಂದ ನಷ್ಟ ಉಂಟಾಗಿದೆ. ಆದ್ದರಿಂದ ಸಂಬಂಧಪಟ್ಟ ಅಧಿಕಾರಿಗಳು ಜಮೀನಿಗೆ ಭೇಟಿ ನೀಡಿ ಪರಿಶೀಲಿಸಿ ಸರ್ಕಾರದಿಂದ ಸೂಕ್ತ ಪರಿಹಾರ ದೊರಕಿಸಿ ಕೊಡುವುದಾಗಿ ಭರವಸೆ ನೀಡಿದರು.

ನೆಲಕ್ಕುರುಳಿದ ಕಾಂಪೌಂಡ್: ಪೊನ್ನಾಚಿಯಲ್ಲಿ ಜಿಲ್ಲೆಯಲ್ಲಿಯೇ ಹೆಚ್ಚು ಮಳೆ ಸುರಿದ ಗ್ರಾಮವಾಗಿದೆ. ಸದ್ಯ ಯಾವುದೇ ಅವಘಡಗಳು ಸಂಭವಿಸಿಲ್ಲ. ಆದರೆ, ವಿಪರೀತ ತೇವಾಂಶದಿಂದ ಸೋಮವಾರ ತಡರಾತ್ರಿ ಗ್ರಾಮದ ಶ್ರೀ ಬಸವೇಶ್ವರ ಸ್ವಾಮಿ ದೇಗುಲದ ಕಾಂಪೌಂಡ್ ನೆಲಕ್ಕುರುಳಿದೆ. ಕಳೆದ 2 ದಿನಗಳಿಂದ ಎಡೆಬಿಡದೇ ಸುರಿದ ಮಳೆಗೆ ತಾಲೂಕಿನ ಕೆಲವು ಕಡೆಗಳಲ್ಲಿ ರಾಗಿ ಹಾಗೂ ಮುಸುಕಿನ ಜೋಳದ ಫಸಲು ನೆಲಕಚ್ಚಿವೆ. ಇದರಿಂದ ರೈತರು ನಷ್ಟವನ್ನು ಅನುಭವಿಸುವಂತಾಗಿದೆ. ಆದ್ದರಿಂದ ಜಿಲ್ಲಾಡಳಿತ ಹಾಗೂ ತಾಲೂಕು ಆಡಳಿತ ಈ ಬಗ್ಗೆ ಗಮನಹರಿಸಿ ಉಂಟಾಗಿರುವ ನಷ್ಟಕ್ಕೆ ಸರ್ಕಾರದಿಂದ ಸೂಕ್ತ ಪರಿಹಾರ ದೊರಕಿಸಿ ಕೊಡುವಂತೆ ತಾಲೂಕು ರೈತ ಸಂಘದ ಅಧ್ಯಕ್ಷ ಅಮ್ಜಾದ್‌ಖಾನ್ ಒತ್ತಾಯಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net