ಮಳೆಯಿಂದ ನೀರಿನ ಪ್ರಮಾಣ ಹೆಚ್ಚಳ

16sor1 (2)
ಸೊರಬದ ಹಳ್ಳಿಯೊಂದರಲ್ಲಿ ಹಳ್ಳದಲ್ಲಿ ನೀರಿನ ಹರಿವು ಹೆಚ್ಚಾಗಿರುವುದು.
Published on

ಸೊರಬ: ತಾಲೂಕಿನಲ್ಲಿ ಮಳೆ ಬಿರುಸುಗೊಂಡಿದ್ದು ಕೆರೆಗಳು ಹಾಗೂ ನದಿಗಳ ನೀರಿನ ಪ್ರಮಾಣ ಹೆಚ್ಚಿದೆ. ಭಾನುವಾರ ಸ್ವಲ್ಪ ಪ್ರಮಾಣದಲ್ಲಿ ಸುರಿದ ಮಳೆ ಸೋಮವಾರ ಹೆಚ್ಚಾಗಿದೆ. ಜೂನ್ ತಿಂಗಳ ವಾಡಿಕೆ ಮಳೆ ಈ ವೇಳೆಗೆ 105 ಮಿ.ಮೀ ಆಗುತ್ತಿತ್ತು. ಈ ಬಾರಿ 95 ಮಿ.ಮೀ ಮಳೆಯಾಗಿದೆ.

ಮಳೆ ಬಿಡುವು ನೀಡಿದರೆ ಶುಂಠಿ, ಮಕ್ಕೆಜೋಳ ಬಿತ್ತನೆ ಮಾಡಲು ರೈತರು ಕಾಯುತ್ತಿದ್ದಾರೆ. ತಾಲೂಕಿನ ಜಡೆ ಹಾಗೂ ಆನವಟ್ಟಿ ಭಾಗಗಳಲ್ಲಿ ಪ್ರತಿವರ್ಷದಂತೆ ನಡೆಯಬೇಕಿದ್ದ ಕೂರಿಗೆ ಭತ್ತದ ಬಿತ್ತನೆ ಈ ಬಾರಿ ಮಳೆಯಿಂದಾಗಿ ಹೆಚ್ಚಿನ ಪ್ರಮಾಣದಲ್ಲಿ ಆಗಿಲ್ಲ. ಚಂದ್ರಗುತ್ತಿ ಹೋಬಳಿಯ ವರದಾ ನದಿ ಪಾತ್ರದ ಗ್ರಾಮಗಳಾದ ಕಡಸೂರು, ತಟ್ಟಿಕೆರೆ, ಕಾರೆಹೊಂಡ, ಬಂದಿಗೆ ಸೇರಿದಂತೆ ಹಲವು ಗ್ರಾಮಗಳಲ್ಲೂ ಭತ್ತ ಬಿತ್ತನೆ ಮಾಡಲು ಮಳೆ ಅವಕಾಶ ನೀಡಿಲ್ಲ. ಮುಂದಿನ ದಿನದಲ್ಲಿ ಮಳೆ ಹೆಚ್ಚಾದರೆ ಪ್ರವಾಹ ಎದುರಾಗಿ ನಾಟಿ ಕಾರ್ಯಕ್ಕೂ ಸಮಸ್ಯೆ ಉಂಟಾಗಲಿದೆ ಎಂಬ ಆಂತಕದಲ್ಲಿದ್ದಾರೆ ರೈತರು. ಕಡಸೂರು, ಹುಲ್ತಿಕೊಪ್ಪ, ಹೆಚ್ಚೆ ಆಂದವಳ್ಳಿ ಮೊದಲಾದ ಗ್ರಾಮಗಳಲ್ಲಿ ಬೇಸಿಗೆಯಲ್ಲಿ ಬೆಳೆದ ಜೋಳವನ್ನು ಇಂದಿಗೂ ಕಟಾವು ಮಾಡಲಾಗದೆ ಪರದಾಡುವ ಸ್ಥಿತಿ ಎದುರಾಗಿದೆ.

ಸೋಮವಾರ ಬೆಳಗ್ಗೆ ಮಳೆ ಹೆಚ್ಚಾದ ಕಾರಣ ತಾಲೂಕಿನ ವಿವಿಧ ಶಾಲೆಗಳಲ್ಲಿ ಕ್ಷೇತ್ರ ಶಿಕ್ಷಣಾಕಾರಿಗಳ ನಿರ್ದೇಶನದಂತೆ ಹಲವು ಶಾಲೆಗಳಿಗೆ ರಜೆ ನೀಡಲಾಗಿತ್ತು. ಮಳೆಯಿಂದ ಹೆಚ್ಚಿನ ಜನರು ಹೊರಬಾರದ ಕಾರಣ ಬ್ಯಾಂಕ್ ಹಾಗೂ ಸರ್ಕಾರಿ ಕಚೇರಿಗಳು, ಬಸ್ ನಿಲ್ದಾಣಗಳಲ್ಲಿ ಜನದಟ್ಟಣೆ ಇರಲಿಲ್ಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net