

ಶೃಂಗೇರಿ: ತಾಲೂಕಿನ ನೇರಳಕೂಡಿಗೆ ಸಮೀಪ ಶುಕ್ರವಾರ ಮಳೆಯಿಂದ 100 ಮೀಟರ್ ರಸ್ತೆ ಕೊಚ್ಚಿಹೋಗಿ ಕಂದಕ ನಿರ್ವಣವಾಗಿದೆ. ರಸ್ತೆ ಸಂಪೂರ್ಣ ಹಾಳಾಗಿರುವುದರಿಂದ ಸದ್ಯ ಅಲ್ಲಿಂದ ಯಾವುದೇ ವಾಹನ ಸಂಚರಿಸುವಂತಿಲ್ಲ. ತೀರ್ಥಹಳ್ಳಿಯಿಂದ ಬರುವವರು ಕಮ್ಮರಡಿ ಮಾರ್ಗವಾಗಿ ಶಾನುವಳ್ಳಿ, ಕಾವಡಿ ಕಡೆಯಿಂದ ಶೃಂಗೇರಿ ತಲುಪಬಹುದು. ಆಗುಂಬೆ ಕಡೆಯಿಂದ ಬರುವರು ಕೂಡ ಶಾನುವಳ್ಳಿ ಮೂಲಕ ಶೃಂಗೇರಿ ತಲುಪಲು ಸೂಚಿಸಲಾಗಿದೆ. ಬಿದರಗೋಡು, ಬೇಗಾರು, ಧರೇಕೊಪ್ಪ, ಹೊಳೆಕೊಪ್ಪ, ಹೊನ್ನವಳ್ಳಿ ಕಡೆ ಗ್ರಾಮಸ್ಥರು ರಸ್ತೆ ಕುಸಿತದಿಂದ ಶೃಂಗೇರಿಗೆ ಬರಲು ಬೇರೆ ಮಾರ್ಗ ಅನುಸರಿಸುವ ಸ್ಥಿತಿ ಉಂಟಾಗಿದೆ. ಶಾಸಕ ಟಿ.ಡಿ.ರಾಜೇಗೌಡ ರಸ್ತೆ ಕುಸಿತ ಹಾಗೂ ಮನೆ ಹಾನಿಗೆ ಒಳಗಾದ ಕೃಷಿಕ ಆಗುಂಬೆ ಗಣೇಶ್ ಹೆಗಡೆ ಅವರ ಮನೆಗೆ ಭೇಟಿ ನೀಡಿದರು. ಶೃಂಗೇರಿ 84.6, ಕಿಗ್ಗಾ 131.2 ಮಿಮೀ ಹಾಗೂ ಕೆರೆಕಟ್ಟೆಯಲ್ಲಿ 137 ಮಿಮೀ ಮಳೆಯಾಗಿದೆ.