ಮಳೆಯಿಂದ ಕೆಸರು ಗದ್ದೆಗಳಾದ ರಸ್ತೆಗಳು, ಜನ, ವಾಹನ ಸಂಚಾರಕ್ಕೆ ಭಾರಿ ತೊಂದರೆ

15ank news and photos 01(2)
Published on

ಆನೇಕಲ್: ತಾಲೂಕಿನ ವ್ಯಾಪ್ತಿಯಲ್ಲಿ ಮೂರು ದಿನಗಳಿಂದ ಮಳೆಯಾಗುತ್ತಿದೆ. ಇದರಿಂದಾಗಿ ಕೆಲವೆಡೆ ಮಣ್ಣು ರಸ್ತೆಗಳು ಕೆಸರು ಗದ್ದೆಯಂತಾಗಿದ್ದು, ಜನ, ವಾಹನ ಸಂಚಾರಕ್ಕೆ ಭಾರಿ ತೊಂದರೆಯುಂಟಾಗಿದೆ.

ಚಂದಾಪುರ ದೊಮ್ಮಸಂದ್ರ ಮುಖ್ಯರಸ್ತೆ ವಿಸ್ತರಣಾ ಕಾಮಗಾರಿ ಕಳೆದೆರಡು ವರ್ಷಗಳಿಂದ ಕುಂಟುತ್ತಾ ಸಾಗುತ್ತಿದೆ. ಮಳೆಯಿಂದಾಗಿ ರಸ್ತೆಯಲ್ಲಿ ಹೊಂಡ, ಗುಂಡಿಗಳು ನೀರು ಸಂಗ್ರಹಗೊಂಡಿದ್ದು, ವಾಹನ ಸವಾರರು ಅಪಘಾತಕ್ಕೀಡಾಗುವ ಪ್ರಕರಣಗಳು ಸಂಭವಿಸುತ್ತಿವೆ.

ಚಂದಾಪುರ ಕೆರೆಯಿಂದ ಹೀಲಲಿಗೆ ರೈಲ್ವೆ ಅಂಡರ್‌ಪಾಸ್‌ವರೆಗೆ ಅರ್ಧ ಕಿಮೀ ರಸ್ತೆ ಕ್ರಮಿಸಲು ಜನರು ಜೀವವನ್ನು ಕೈಯಲ್ಲಿ ಹಿಡಿದು ಓಡಾಡುವ ಸ್ಥಿತಿ ಇದೆ. ರಾತ್ರಿ ಸಮಯದಲ್ಲಂತೂ ಈ ರಸ್ತೆಯಲ್ಲಿ ಸಂಚರಿಸುವುದು ದುಸ್ಸಾಧ್ಯದ ಮಾತೇ ಸರಿ.

ಅತ್ತಿಬೆಲೆಯಿಂದ ಬಳ್ಳೂರು ಟಿ.ವಿ.ಎಸ್. ಕ್ರಾಸ್‌ವರೆಗಿನ ರಸ್ತೆ ಪರಿಸ್ಥಿತಿಯಂತೂ ಹೇಳುವಂತಿಲ್ಲ. ದೊಡ್ಡದೊಡ್ಡ ಗುಂಡಿಗಳು ನಿರ್ಮಾಣವಾಗಿವೆ. ಬೃಹತ್ ಗಾತ್ರದ ಲಾರಿಗಳು, ಟಿಪ್ಪರ್‌ಗಳು ಈ ರಸ್ತೆಯಲ್ಲಿ ಸಂಚರಿಸುವುದರಿಂದ, ಮೂರು ದಿನದಿಂದ ಪೂರ್ಣ ಕೆಸರು ಮಯವಾಗಿದೆ.

ಗಡಿ ಸಂಪರ್ಕ ರಸ್ತೆ ಸೋಲೂರು ಭಾಗದಲ್ಲಿ ಚತುಷ್ಪಥ ರಸ್ತೆ ನಿರ್ಮಾಣ ಕಾಮಗಾರಿ ಮಂದಗತಿಯಲ್ಲಿ ಸಾಗುತ್ತಿದೆ. ಈ ರಸ್ತೆಯಲ್ಲಿ ಓಡಾಡುವ ಜನರು ಅಧಿಕಾರಿಗಳಿಗೆ ಹಿಡಿಶಾಪ ಹಾಕುವಂತಾಗಿದೆ.

ಆನೇಕಲ್ ಪಟ್ಟಣದ ಗಿರಿಜಾಶಂಕರ ಬಡಾವಣೆಯ 9ನೇ ವಾರ್ಡ್‌ನ ಕೆಲವು ರಸ್ತೆಗಳು ಕೆಸರು ಗದ್ದೆಯಾಗಿವೆ. ರಾಜ್ಯದ ಗಡಿ ತಾಲೂಕು ಆಗಿದ್ದರೂ ಪಟ್ಟಣದ ಜನತೆ ಇಂದಿಗೂ ರಸ್ತೆಗಳ ಅಭಿವೃದ್ಧಿಗೆ ಗೋಗರೆಯುವ ಸ್ಥಿತಿ ಇದೆ.

ತುಂಬಿ ಹರಿಯುತ್ತಿದೆ ಒಳಚರಂಡಿ: ಆನೇಕಲ್‌ನ ಯಲ್ಲಮ್ಮ ದೇವಾಲಯದ ಬಳಿ 2 ವರ್ಷಗಳಿಂದ ಒಳಚರಂಡಿ ತುಂಬಿ ಕೊಳಚೆ ನೀರು ನಡು ರಸ್ತೆಯಲ್ಲಿ ಹರಿಯುತ್ತಿದೆ. ಈ ಬಗ್ಗೆ ಅಧಿಕಾರಿಗಳಿಗೆ ಸಾಕಷ್ಟು ಬಾರಿ ಮನವಿ ಮಾಡಿಕೊಂಡರೂ, ಏನೊಂದು ಪ್ರಯೋಜನವಾಗಿಲ್ಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net