ಮಳೆಯಿಂದ ಕುಸಿದ ರಸ್ತೆ ದುರಸ್ತಿ ಯಾವಾಗ?

07 upbr 1-Raste koret Article
Published on

ಉಪ್ಪಿನಬೆಟಗೇರಿ: ಆಗಸ್ಟ್​ನಲ್ಲಿ ಸುರಿದ ಭಾರಿ ಮಳೆಯಿಂದ ಉಪ್ಪಿನಬೆಟಗೇರಿ- ಹಾರೋಬೆಳವಡಿ ರಸ್ತೆಯಲ್ಲಿನ ಜಾಜಿ ಹಳ್ಳದ ಗೋಡೆ, ರಸ್ತೆ ಪಕ್ಕದ ಮಣ್ಣು ಕೊಚ್ಚಿ ಹೋಗಿದ್ದು, ಅಪಾಯವನ್ನು ಆಹ್ವಾನಿಸುತ್ತಿದೆ.

ಸವದತ್ತಿ, ಇನಾಮಹೊಂಗಲ, ಅಳಗವಾಡಿ, ನವಲಗುಂದ ಮತ್ತಿತರ ಊರುಗಳಿಗೆ ಸಂಪರ್ಕ ಕಲ್ಪಿಸುವ ಈ ಒಳರಸ್ತೆ ಕಿರಿದಾಗಿದೆ. ಹತ್ತು ವರ್ಷಗಳ ಹಿಂದೆ ಜಾಜಿ ಹಳ್ಳದಲ್ಲಿ ನೀರಿನ ಪ್ರಮಾಣ ಹೆಚ್ಚಾಗಿ ರಸ್ತೆ ಕುಸಿಯುತ್ತ ಸಾಗಿತ್ತು. ಅದನ್ನು ತಡೆಯಲು ರಸ್ತೆ ಅಗೆದು ನಾಲ್ಕು ದೊಡ್ಡ ಸಿಮೆಂಟ್ ಪೈಪ್​ಗಳನ್ನು ಹಾಕಿ ಅದರ ಮೇಲೆ ಡಾಂಬರೀಕರಣ ಮಾಡಲಾಗಿತ್ತು. ರಸ್ತೆ ಬದಿ ಸಿಮೆಂಟ್ ಗೋಡೆ ನಿರ್ವಿುಸಿ ಮಣ್ಣು ಹಾಕಲಾಗಿತ್ತು. ಆದರೆ, 2019ರ ಆಗಸ್ಟ್​ನಲ್ಲಿ ಸುರಿದ ಮಳೆಯಿಂದಾಗಿ ತಡೆಗೋಡೆ ಕುಸಿದಿದೆ. ಇದರಿಂದ ರಸ್ತೆಯಲ್ಲಿ ಮತ್ತೆ ಬಿರುಕು ಕಾಣಿಸುತ್ತಿದ್ದು, ಭಾರಿ ವಾಹನಗಳು ಸಂಚರಿಸಿದರೆ ರಸ್ತೆ ಮತ್ತಷ್ಟು ಕುಸಿದು ಅಪಘಾತ ಸಂಭವಿಸುವ ಸಾಧ್ಯತೆ ಇದೆ.

ರಸ್ತೆ ಅಕ್ಕಪಕ್ಕ ಜಾಲಿ ಕಂಟಿಗಳು ಬೆಳೆದಿವೆ. ಇದರಿಂದ ರಾತ್ರಿ ವೇಳೆ ಸಂಚರಿಸುವುದು ದುಸ್ತರವಾಗಿದೆ. ಎದುರಿನಿಂದ ಬರುವ ವಾಹನಗಳ ಬೆಳಕಿಗೆ ರಸ್ತೆ ಸರಿಯಾಗಿ ಗೋಚರಿಸುವುದಿಲ್ಲ. ಇನ್ನು ರೈತರು ಎತ್ತುಗಳೊಂದಿಗೆ ಹೊಲಕ್ಕೆ ಹೋಗುವಾಗ ಎಲ್ಲಿ ಎತ್ತುಗಳನ್ನು ಕಳೆದುಕೊಳ್ಳುತ್ತೇವೆಯೋ ಎಂಬ ಭೀತಿಯಲ್ಲಿಯೇ ಸಾಗುತ್ತಿದ್ದಾರೆ. ಅಲ್ಲದೆ, ಇಲ್ಲಿ ಸಂಚಾರಿ ನಿಯಮಗಳ ಸೂಚನಾ ಫಲಕಗಳನ್ನೂ ಅಳವಡಿಸಿಲ್ಲ. ಹೀಗಾಗಿ ಚಾಲಕರು ಬೇಕಾಬಿಟ್ಟಿಯಾಗಿ ವಾಹನ ಚಲಾಯಿಸಿಕೊಂಡು ಬರುವಾಗ ತಗ್ಗಿನಲ್ಲಿ ಬೀಳುವ ಸಂಭವವಿದೆ. ಕೂಡಲೆ ಪಿಡಬ್ಲ್ಯುಡಿ, ಜನಪ್ರತಿನಿಧಿಗಳು ಈ ರಸ್ತೆ ದುರಸ್ತಿಪಡಿಸಿ ಅನಾಹುತ ತಪ್ಪಿಸಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ಪ್ರವಾಹದಿಂದ ಉಪ್ಪಿನಬೆಟಗೇರಿ-ಹಾರೋಬೆಳವಡಿ ರಸ್ತೆಯಲ್ಲಿ ಕೊರೆತ ಉಂಟಾಗದೆ. ಇದರಿಂದ ಅಪಾಯ ಸಂಭವಿಸುವ ಲಕ್ಷಣಗಳು ಇವೆ. ಅಧಿಕಾರಿಗಳು ಕೂಡಲೆ ಈ ರಸ್ತೆಯನ್ನು ದುರಸ್ತಿ ಮಾಡಿಸಬೇಕು. | ಯಲ್ಲಪ್ಪ ಕಳ್ಳಿ ವಾಹನ ಚಾಲಕ

ಉಪ್ಪಿನಬೆಟಗೇರಿ- ಹಾರೋಬೆಳವಡಿ ಮಾರ್ಗದ ಹಳ್ಳದ ಬಳಿ ರಸ್ತೆ ಕೊರೆತ ಉಂಟಾಗಿದ್ದನ್ನು ಗಮನಿಸಿದ್ದೇನೆ. ರಸ್ತೆ ಅಭಿವೃದ್ಧಿಗೆ ಅನುದಾನಕ್ಕಾಗಿ ಪ್ರಸ್ತಾವನೆ ಸಲ್ಲಿಸಲಾಗಿದೆ. ಹಣ ಬಂದ ತಕ್ಷಣ ದುರಸ್ತಿ ಮಾಡಲಾಗುವುದು. ತಾತ್ಕಾಲಿಕವಾಗಿ ಅಲ್ಲಿ ಮಣ್ಣು ಹಾಕಿ ವಾಹನ ಸಂಚಾರಕ್ಕೆ ಅನುಕೂಲ ಕಲ್ಪಿಸಲಾಗುವುದು. | ಎನ್.ವಿ. ಪಾಟೀಲ ಎಇಇ, ಪಿಡಬ್ಲ್ಯುಡಿ, ಧಾರವಾಡ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net