

ವಿಜಯವಾಣಿ ಸುದ್ದಿಜಾಲ ಧಾರವಾಡ
ಜಿಲ್ಲೆಯಲ್ಲಿ ನಿರಂತರ ಮಳೆಯಿಂದ ಭಾನುವಾರ (ಜು.23)ವರೆಗೆ ಜಿಲ್ಲೆಯ ವಿವಿಧ ತಾಲೂಕಿನ ಗ್ರಾಮಗಳಲ್ಲಿನ 24 ಮನೆಗಳಿಗೆ ಹಾನಿಯಾಗಿದ್ದು, ಗೋಡೆ ಕುಸಿತದಿಂದ 1 ಜಾನುವಾರು ಮೃತಪಟ್ಟಿದೆ ಎಂದು ಜಿಲ್ಲಾಡಳಿತ ತಿಳಿಸಿದೆ.
ಈ ಕುರಿತು ಪ್ರಕಟಣೆ ನೀಡಿರುವ ಜಿಲ್ಲಾಡಳಿತ, ಮಳೆಯಿಂದ ಧಾರವಾಡ ತಾಲೂಕಿನಲ್ಲಿ 2, ಹುಬ್ಬಳ್ಳಿ ಗ್ರಾಮೀಣದಲ್ಲಿ 1, ಅಳ್ನಾವರ ತಾಲೂಕಿನಲ್ಲಿ 2, ಹುಬ್ಬಳ್ಳಿ ಶಹರ ತಾಲೂಕಿನಲ್ಲಿ 2, ಕುಂದಗೋಳ ತಾಲೂಕಿನಲ್ಲಿ 6, ಅಣ್ಣಿಗೇರಿ ತಾಲೂಕಿನಲ್ಲಿ 5, ನವಲಗುಂದ ತಾಲೂಕಿನಲ್ಲಿ 3 ಮತ್ತು ಕಲಘಟಗಿ ತಾಲೂಕಿನಲ್ಲಿ 1 ತೀರ್ವ ಹಾಗೂ 2 ಭಾಗಶಃ ಸೇರಿ ಜಿಲ್ಲೆಯ 8 ತಾಲೂಕುಗಳಲ್ಲಿ 24 ಮನೆಗಳು ಭಾಗಶಃ ಹಾನಿಯಾಗಿವೆ. ಶನಿವಾರ ರಾತ್ರಿಯಿಂದ ಸುರಿದ ಮಳಗೆ ಅಳ್ನಾವರ ತಾಲೂಕಿನ ಹೊನ್ನಾಪುರ ಗಾಮದ ಸಿದ್ದಪ್ಪ ಭೀಮಪ್ಪ ನಾಯ್ಕ ಅವರ ದನದ ಕೊಟ್ಟಿಗೆ ಕುಸಿದು 1ಎಮ್ಮೆ ಮೃತಪಟ್ಟಿದೆ.
ಗ್ರಾಮ ಅಡಳಿತ ಅಧಿಕಾರಿಗಳು ಹಾಗೂ ಕಂದಾಯ ನಿರೀಕ್ಷಕರು ತಹಸಿಲ್ದಾರರಿಗೆ ಹಾನಿಯ ಪ್ರಾಥಮಿಕ ವರದಿ ಸಲ್ಲಿಸಿದ್ದಾರೆ. ತನಿಖಾ ತಂಡದಿಂದ ಪರಿಶೀಲನೆ ಕಾರ್ಯ ಜರುಗಿಸಿ, ಅರ್ಹ ಫಲಾನುಭವಿಗಳಿಗೆ ಪರಿಹಾರ ವಿತರಿಸುವಲ್ಲಿ ಸರ್ಕಾರದ ನಿಯಮಾವಳಿಗಳಂತೆ ಅಗತ್ಯ ಕ್ರಮ ಜರುಗಿಸಲಾಗುವುದು ಎಂದು ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ತಿಳಿಸಿದ್ದಾರೆ.
ಜಿಲ್ಲೆಯಲ್ಲಿ ಜೂನ್‌ನಲ್ಲಿ 128.4 ಮಿ.ಮೀ. ವಾಡಿಕೆ ಮಳೆ ಆಗಬೇಕಿತ್ತು. ಆದರೆ 42.9 ಮಿ.ಮೀ ಮಳೆ ಆಗಿದ್ದು, ಶೇ. 64ರಷ್ಟು ಮಳೆ ಕೊರತೆ ಆಗಿದೆ. ಜು. 23ರವರೆಗೆ ವಾಡಿಕೆಯಂತೆ 121 ಮಿ.ಮೀ ಮಳೆ ಆಗಬೇಕಿತ್ತು, ಆದರೆ ವಾಸ್ತವವಾಗಿ 184 ಎಂಎಂ ಮಳೆಯಾಗಿದ್ದು, ಶೇ.60ರಷ್ಟು ಹೆಚ್ಚುವರಿ ಮಳೆ ಆಗಿದೆ. ಇನ್ನೂ 3-4 ದಿನ ಮಳೆ ಸುರಿಯುವ ಬಗ್ಗೆ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದ್ದು, ಸಾರ್ವಜನಿಕರ ಸುರಕ್ಷತೆ ಬಗ್ಗೆ ಜಿಲ್ಲಾಡಳಿತದಿಂದ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.