ಮಳೆಯಲ್ಲೇ ನಡೆದ ಭಾವೈಕ್ಯ ಪಾದಯಾತ್ರೆ

guruji padyare
Published on

ಬೀದರ್: ರೇಕುಳಗಿಯ ಶ್ರೀ ಶಂಭುಲಿಂಗೇಶ್ವರ ಮತ್ತು ಬಸಮ್ಮಾ ತಾಯಿಯವರ 85ನೇ ಪುಣ್ಯಸ್ಮರಣೆ ನಿಮಿತ್ತ ಔರಾದ್ ಸಿರ್ಸಿಯಿಂದ ರೇಕುಳಗಿವರೆಗೆ ಮಂತ್ರ ಮಹರ್ಷಿ ಎನ್.ಬಿ. ರಡ್ಡಿ ಗುರೂಜಿ ನೇತೃತ್ವದಲ್ಲಿ ಬೃಹತ್ ಭಾವೈಕ್ಯ ಪಾದಯಾತ್ರೆ ನಡೆಯಿತು.

ಗುರೂಜಿ ಅವರು ಪೂಜ್ಯ ಶಂಭುಲಿಂಗೇಶ್ವರ ಮತ್ತು ತಾಯಿ ಬಸಮ್ಮ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಪಲ್ಲಕ್ಕಿ ಮೆರವಣಿಗೆ ಮತ್ತು ಪಾದಯಾತ್ರೆಗೆ ಚಾಲನೆ ನೀಡಿದರು. ಯಾತ್ರೆ ಆರಂಭವಾಗುತ್ತಿದ್ದಂತೆ ಮಳೆ ಶುರುವಾಯಿತು. ಹಿಂಜರಿಯದೆ ಸಾವಿರಾರು ಭಕ್ತರು ಮಳೆಯಲ್ಲೇ ಹೆಜ್ಜೆ ಹಾಕಿದರು.ಯಾತ್ರೆಯು ಔರಾದ್ ಸಿರ್ಸಿಯಿಂದ ಬಗದಲ್, ಬಾಪುರ ಕ್ರಾಸ್, ಮನ್ನಾಏಖೇಳ್ಳಿ, ನೀಡವಂಚಿ, ಬಂಬುಳಗಿ ಮೂಲಕ ರೇಕುಳಗಿಯಲ್ಲಿರುವ ಶ್ರೀ ಶಂಭುಲಿಂಗೇಶ್ವರ ದೇವಾಲಯದ ಗರ್ಭಗುಡಿಗೆ ತಲುಪಿತು. ನಂತರ ವಿಶೇಷ ಪೂಜೆ, ಆರತಿ ಜರುಗಿತು. ರಾಜಕೀಯ ಮುಖಂಡರು ಸೇರಿ ಗಣ್ಯರು ದೇವರ ದರ್ಶನ ಮತ್ತು ಗುರೂಜಿ ಆಶೀರ್ವಾದ ಪಡೆದುಕೊಂಡರು.

ನಂತರ ಗುರೂಜಿ ಮಾತನಾಡಿ, ಕರೊನಾ ಕಾರಣಕ್ಕೆ ಎರಡು ವರ್ಷ ಸರಳವಾಗಿ ಪಾದಯಾತ್ರೆ ನಡೆಸಲಾಗಿತ್ತು. ವರ್ಷದಿಂದ ವರ್ಷಕ್ಕೆ ಭಕ್ತರ ದಂಡು ಹೆಚ್ಚುತ್ತಿದೆ. ಇಂದಿನ ಯಾತ್ರೆಯಲ್ಲಿ ದೇಶದ ನಾನಾ ರಾಜ್ಯಗಳಿಂದ ಭಕ್ತರು ಸಹಸ್ರಾರು ಸಂಖ್ಯೆಯಲ್ಲಿ ಬಂದಿದ್ದಾರೆ. ಶಂಭುಲಿಂಗೇಶ್ವರ ನಂಬಿದವರ ಕೈಬಿಡುವುದಿಲ್ಲ ಎಂದರು.ಯಾತ್ರೆಯುದ್ದಕ್ಕೂ ಭಕ್ತರು ಭಜನೆ, ಕೀರ್ತನೆ ಮಾಡಿದರು. ಮಹಿಳೆಯರು ಹಾಡುಗಳನ್ನು ಹಾಡುತ್ತ ಸಾಗಿದರು. ವಿವಿಧ ಸಾಂಸ್ಕೃತಿಕ ಕಲಾ ತಂಡಗಳ ಪ್ರದರ್ಶನ ಗಮನ ಸೆಳೆಯಿತು. ವಿವಿಧೆಡೆ ಕುಡಿಯುವ ನೀರು, ಪ್ರಸಾದದ ವ್ಯವಸ್ಥೆ ಮಾಡಲಾಗಿತ್ತು. ಪಟಾಕಿ ಸುಡುತ್ತ ಶಂಭುಲಿಂಗೇಶ್ವರರ ಜೈಕಾರ ಹಾಕುತ್ತ ಭಕ್ತರು ಹರ್ಷೋಲ್ಲಾಸದಿಂದ ಭಾಗವಹಿಸಿದ್ದರು.

ವಿಧಾನ ಪರಿಷತ್ ಸದಸ್ಯ ಅರವಿಂದಕುಮಾರ ಅರಳಿ, ಕೆಎಸ್ಐಐಡಿಸಿ ಅಧ್ಯಕ್ಷ ಡಾ.ಶೈಲೇಂದ್ರ ಬೆಲ್ದಾಳೆ, ಟಿಎಪಿಸಿಎಂಎಸ್ ಅಧ್ಯಕ್ಷ ಅಭಿಷೇಕ್ ಪಾಟೀಲ್, ಕಾಂಗ್ರೆಸ್ ಮುಖಂಡ ಚಂದ್ರಾಸಿಂಗ್, ಉದ್ಯಮಿ ಧನರಾಜ ತಾಳಂಪಳ್ಳಿ, ಪ್ರಮುಖರಾದ ರೇವಣಸಿದ್ದಪ್ಪ ಪಾಟೀಲ್, ಗುರು ಮುಗಳಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net