

ಬಸವಕಲ್ಯಾಣ: ವೀರ ಗಣಾಚಾರಿ ಮಡಿವಾಳ ಮಾಚಿದೇವರ ಸ್ಮರಣೋತ್ಸವ ಮತ್ತು ಶ್ರೀ ಮಾಚಿದೇವರ ತತ್ವ ದರ್ಶನ ಕಾರ್ಯಕ್ರಮ ನಿಮಿತ್ತ ನಗರದಲ್ಲಿ ಸೋಮವಾರ ಶ್ರೀ ಮಡಿವಾಳ ಮಾಚಿದೇವರ ಭಾವಚಿತ್ರದ ಭವ್ಯ ಮೆರವಣಿಗೆ ಜರುಗಿತು. ನಗರದ ಶ್ರೀ ಬಸವೇಶ್ವರ ದೇವಸ್ಥಾನದಿಂದ ಮುಖ್ಯ ರಸ್ತೆ ಮಾರ್ಗವಾಗಿ ಹರಳಯ್ಯ ವೃತ್ತದ ಮೂಲಕ ಮಡಿವಾಳ ಮಾಚಿದೇವರ ದೇವಸ್ಥಾನ (ಹೊಂಡ)ದವರೆಗೆ ನಡೆದ ಮೆರವಣಿಯಲ್ಲಿ ಸುರಿವ ಮಳೆಯಲ್ಲಿ ಭಕ್ತರು ಹೆಜ್ಜೆ ಹಾಕಿದರು.
ಬೆಳಗ್ಗೆಯಿಂದಲೇ ಮಳೆ ಇದ್ದರೂ ನಿಗದಿತ ಸಮಯಕ್ಕೆ ಸಮಾಜದ ಮುಖಂಡರು, ಜನರು ಬಸವೇಶ್ವರ ದೇವಸ್ಥಾನದ ಬಳಿ ಸೇರಿದ್ದರು. ಮಳೆ ಮಧ್ಯೆಯೇ ಮೆರವಣಿಗೆ ಆರಂಭಿಸಿದರು. ಮೂರು ಕಿಲೋ ಮೀಟರ್‌ಗೂ ಹೆಚ್ಚು ದೂರ ನಡೆದ ಮೆರವಣಿಗೆಯಲ್ಲಿ ಹಲವರು ಛತ್ರಿ ಹಿಡಿದು ಹೆಜ್ಜೆ ಹಾಕಿದರರೇ ಮತ್ತೆ ಹಲವರು ಮಳೆ ಲೆಕ್ಕಿಸದೇ ಮಡಿವಾಳ ಮಾಚಿದೇವರ ಹೊಂಡದವರಿಗೆ ಸಾಗಿದರು.
ಮಡಿವಾಳ ಸಮಾಜದ ತಾಲೂಕು ಅಧ್ಯಕ್ಷ ಗಣಪತ ಸಸ್ತಾಪುರೆ, ಉಪಾಧ್ಯಕ್ಷ ವಿಜಯಕುಮಾರ ಮಡಿವಾಳ, ಕಾರ್ಯದರ್ಶಿ ವೀರಶೆಟ್ಟಿ ಮಡಿವಾಳ, ಜಗನ್ನಾಥ ಮಡಿವಾಳ, ಆಕಾಶ ಮಡಿವಾಳ, ರಾಜಕುಮಾರ ಮಡಿವಾಳ, ಮುಖಂಡರಾದ ಸಂತೋಷ ಮಡಿವಾಳ, ಬಸವರಾಜ ಮಡಿವಾಳ, ರವೀಂದ್ರ ಮಡಿವಾಳ, ದಶರಥ ಮಡಿವಾಳ ಇತರರಿದ್ದರು.
ಮಳೆಯಿಂದ ಕಾರ್ಯಕ್ರಮ ಅಡಚಣೆ : ಮಡಿವಾಳ ಮಾಚಿದೇವರ ದೇವಸ್ಥಾನ( ಹೊಂಡ) ಪರಿಸರದಲ್ಲಿ ವೀರ ಗಣಾಚಾರಿ ಮಡಿವಾಳ ಮಾಚಿದೇವರ ಸ್ಮರಣೋತ್ಸವ ಮತ್ತು ಶ್ರೀ ಮಾಚಿದೇವರ ತತ್ವ ದರ್ಶನ ಕಾರ್ಯಕ್ರಮ ಮಧ್ಯಾಹ್ನ ನಡೆಯಬೇಕಿತ್ತು. ಆದರೆ ಬೆಳಗ್ಗೆಯಿಂದ ಮಧ್ಯಾಹ್ನದ ವರೆಗೆ ನಿರಂತರ ಸುರಿದ ಮಳೆಯಿಂದ ಕಾರ್ಯಕ್ರಮ ನಡೆಯಲಿಲ್ಲ. ಮಳೆಯಲ್ಲಿಯೇ ಮೆರವಣಿಗೆ ದೇವಸ್ಥಾನಕ್ಕೆ ತಲುಪಿದ ನಂತರ ಪ್ರಸಾದದ ವ್ಯವಸ್ಥೆ ಮಾಡಲಾಗಿತ್ತು.