

ಬೇಲೂರು: ಬೇಲೂರು ಪಟ್ಟಣದ ಐಡಿಎಸ್‌ಎಂಟಿ ಹೊಯ್ಸಳ ಮಾರುಕಟ್ಟೆ ವರ್ತಕರ ಸಂಘದ 8ನೇ ವರ್ಷದ ಗಣಪತಿ ವಿಸರ್ಜನಾ ಮಹೋತ್ಸವವು ತುಂತುರು ಮಳೆಯ ನಡುವೆಯೂ ಶುಕ್ರವಾರ ನೂರಾರು ಭಕ್ತರ ಸಮ್ಮುಖದಲ್ಲಿ ಅದ್ದೂರಿಯಾಗಿ ನೆರವೇರಿತು.
ಗಣಪತಿ ವಿಸರ್ಜನಾ ಮಹೋತ್ಸವದ ಅಂಗವಾಗಿ ಪಟ್ಟಣದ ಐಡಿಎಸ್‌ಎಂಟಿ ಹೊಯ್ಸಳ ಮಾರುಕಟ್ಟೆಯನ್ನು ತಳಿರು-ತೋರಣಗಳಿಂದ ಸಿಂಗರಿಸಲಾಗಿತ್ತು. ಜತೆಗೆ ವರ್ತಕರು ಯಾವುದೇ ಅಂಗಡಿ-ಮುಂಗಟ್ಟುಗಳನ್ನು ತೆರೆಯದೇ ಉತ್ಸವದಲ್ಲಿ ಪಾಲ್ಗೊಂಡಿದ್ದು ವಿಶೇಷವಾಗಿತ್ತು. ಅಲ್ಲದೆ ರಾಣಿಬೆನ್ನೂರಿನ ರೋಡ್ ಆರ್ಕೆಸ್ಟ್ರಾ ಆಯೋಜಿಸಿದ್ದರಿಂದ ಯುವಕರು ಕುಣಿದು ಕುಪ್ಪಳಿಸಿದರು. ಉತ್ಸವವು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಾಗಿ ಸಮೀಪದ ವಿಷ್ಣು ಸಮುದ್ರ ಕೆರೆಯಲ್ಲಿ ಸಂಜೆ ಸಂಘದ ಅಧ್ಯಕ್ಷ ಎಸ್.ಎಂ.ರಾಜು ನೇತೃತ್ವದಲ್ಲಿ ಭಕ್ತರ ಸಮ್ಮುಖದಲ್ಲಿ ವಿಸರ್ಜಿಸಲಾಯಿತು.