ಮಳೆಬಂದರೆ ರಸ್ತೆಗಳು ಅಯೋಮಯ

10rajesh5
Published on

ಚಾಮರಾಜನಗರ: ನಗರದಲ್ಲಿ ಮಳೆಬಂದರೇ ಹಲವಾರು ರಸ್ತೆಗಳಲ್ಲಿ ಅವ್ಯವಸ್ಥೆ ಉಂಟಾಗುತ್ತಿದ್ದು, ಸಾರ್ವಜನಿಕರು, ವಾಹನ ಸವಾರರು ಸಮಸ್ಯೆ ಅನುಭವಿಸುವಂತಾಗಿದೆ.

ನಗರದ ಚಿಕ್ಕ ಅಂಗಡಿ ಬೀದಿಯಿಂದ ಸಂಪಿಗೆ ರಸ್ತೆಗೆ ಹೋಗುವ ರಸ್ತೆಯಲ್ಲಿ ಸಮೀಪದಲ್ಲಿ ಹಲವಾರು ಅಂಗಡಿ ಮುಂಗಟ್ಟುಗಳು ಇದ್ದು, ಹಲವು ವಾಸದ ಮನೆಗಳು ಇದೆ. ಸಂತೇಮರಹಳ್ಳಿ ವೃತ್ತದ ಸಮೀಪದ ಶ್ರೀಆಂಜನೇಯಸ್ವಾಮಿ ದೇವಸ್ಥಾನದ ಹಿಂಭಾಗದಲ್ಲೇ ರಸ್ತೆ ಇರುವುದರಿಂದ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲೇ ಓಡಾಡುತ್ತಾರೆ. ಈ ರಸ್ತೆ ಹಾದು ಹೋಗುವ ಸುತ್ತಮುತ್ತಲೂ ವ್ಯಾಪಾರ-ವಹಿವಾಟಿಗಾಗಿ ನಿತ್ಯವೂ ನೂರಾರು ವಾಹನಗಳು ಸಂಚಾರ ಮಾಡುತ್ತವೆ. ಹಲವಾರು ವರ್ಷಗಳಿಂದ ಈ ರಸ್ತೆ ಡಾಂಬರು ಕಾಣದೇ ಧೂಳುಮಯವಾಗಿತ್ತು. ಇತ್ತೀಚೆಗೆ ರಸ್ತೆಯನ್ನು ಡಾಂಬರೀಕರಣಗೊಳಿಸಲು ಮುದಾಗಿದ್ದು, ಕಾಮಗಾರಿ ಪ್ರಾರಂಭಿಸಿ ಸಾಕಷ್ಟು ದಿನಗಳಾದರೂ ಸೂಕ್ತ ರಸ್ತೆ ನಿರ್ಮಾಣವಾಗದೇ ಸ್ಥಳೀಯರು ಸಮಸ್ಯೆ ಅನುಭವಿಸುವಂತಾಗಿದೆ.

ಮಳೆ ಬಂದಾಗ ರಸ್ತೆಯಲ್ಲೇ ನೀರು ನಿಂತು ವಾಹನ ಸವಾರರು ಹಾಗೂ ಪಾದಚಾರಿಗಳು ಕಿರಿಕಿರಿ ಅನುಭವಿಸುವಂತಾಗಿದೆ. ಜೋರು ಮಳೆಯಾದಾಗ ಚರಂಡಿ ನೀರು ರಸ್ತೆಗೆ ಹರಿದು ಸಾರ್ವಜನಿಕರ ಓಡಾಟಕ್ಕೆ ಸಮಸ್ಯೆ ಉಂಟಾಗುತ್ತಿದೆ. ಇದೇ ರಸ್ತೆಯ ಸಮೀಪದಲ್ಲೇ ಪೈಪ್‌ಲೈನ್ ಕಾಮಗಾರಿಗೆ ಗುಂಡಿಯನ್ನು ತೆಗೆದಿದ್ದು, ಸಮರ್ಪಕವಾಗಿ ಗುಂಡಿಗಳನ್ನು ಮುಚ್ಚದೇ ಇರುವುದರಿಂದ ವಾಹನ ಸವಾರರಿಗೆ ಸಮಸ್ಯೆಯಾಗುತ್ತಿದೆ. ಈ ನಿಟ್ಟಿನಲ್ಲಿ ಸಂಬಂಧಪಟ್ಟ ನಗರಸಭೆ ಅಧಿಕಾರಿಗಳು ಈ ರಸ್ತೆ ಕಾಮಗಾರಿಯನ್ನು ನಡೆಸಿ, ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.

ರಸ್ತೆ ಹರಿಯುವ ಚರಂಡಿ ನೀರು:

ನಗರದ ದೊಡ್ಡಂಗಡಿ, ಚಿಕ್ಕಂಗಡಿ ಬೀದಿಯಿಂದ ಬರುವ ಮಳೆ ನೀರೆಲ್ಲವೂ ಈ ರಸ್ತೆಯ ಚರಂಡಿಯಲ್ಲೇ ಹಾದುಹೋಗಿರಬೇಕಿರುವುದರಿಂದ ಮಳೆ ಬಂದಾಗ ಚರಂಡಿ ನೀರು ರಸ್ತೆಗೆ ನುಗ್ಗಿ ಆವಾಂತರ ಸೃಷ್ಟಿಸುತ್ತದೆ. ಅಕ್ಕ-ಪಕ್ಕದ ಅಂಗಡಿ ಮುಂಗಟ್ಟುಗಳಿಗೂ ಮಳೆ ನೀರು ನುಗ್ಗಿ ಸ್ಥಳೀಯರು ನಿರಂತರ ಸಮಸ್ಯೆಯನ್ನು ಎದುರಿಸುವಂತಾಗಿದೆ. ರಸ್ತೆ ಕಾಮಗಾರಿ ನಡೆಸಲು ಮಣ್ಣು, ಕಲ್ಲನ್ನು ಹಾಕಿ ಆಗೆಯೇ ಬಿಟ್ಟು ಹೋಗಿರುವುದರಿಂದ ರಸ್ತೆ ಎಲ್ಲವೂ ಗುಂಡಿಮಯವಾಗಿದೆ. ಸಮೀಪದಲ್ಲೇ ಸಾರ್ವಜನಿಕರ ಶೌಚಾಲಯವಿದ್ದು, ಇಲ್ಲಿಗೆ ಬರುವ ಸಾರ್ವಜನಿಕರು ಕಿರಿಕಿರಿ ಅನುಭವಿಸುವಂತಾಗಿದೆ. ಮಳೆಗಾಲದಲ್ಲಿ ಈ ಅವ್ಯವಸ್ಥೆಯಾದರೇ ಬಿಸಿಲು ಬಂದಾಗ ರಸ್ತೆ ಧೂಳುಮಯವಾಗುತ್ತದೆ. ಕೂಡಲೇ ಸಂಬಂಧ ಪಟ್ಟ ಅಧಿಕಾರಿಗಳು ಇತ್ತ ಗಮನಹರಿಸಿ ಆದಷ್ಟು ಸಮಸ್ಯೆಯನ್ನು ಬಗೆಹರಿಸಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.

ಕೆಸರು ಮಯವಾಗಿರುವ ರಸ್ತೆ:

ನಗರದ ಸಂತೇಮರಹಳ್ಳಿ ರಸ್ತೆಯಲ್ಲಿರುವ ಪಟ್ಟಣ ಪೊಲೀಸ್ ಠಾಣೆಯ ಎದುರಿನ ರಸ್ತೆ ಸಂಪೂರ್ಣ ಕೆಸರುಮಯವಾಗಿದ್ದು, ವಾಹನ ಸವಾರರು ಪರದಾಡುವಂತಾಗಿದೆ. ರಾಷ್ಟ್ರೀಯ ಹೆದ್ದಾರಿಯಿಂದ ಶ್ರೀಭಗೀರಥ ಮಹರ್ಷಿ ರಸ್ತೆ, ವಿಶ್ವಹಿಂದೂ ಪರಿಷತ್ ಶಾಲೆ, ರಾಮಸಮುದ್ರದ ಕುಲುಮೆ ರಸ್ತೆ, ಚೆನ್ನೀಪುರಮೋಳೆ, ಜಾಲಹಳ್ಳಿಹುಂಡಿ, ಮೂಡ್ಲುಮೋಳೆ ಹಾಗೂ ಇನ್ನಿತರೆ ಗ್ರಾಮಗಳಿಗೆ ಸಂಪರ್ಕವನ್ನು ಕಲ್ಪಿಸುವ ಈ ರಸ್ತೆ ಶನಿವಾರ ಸುರಿದ ಮಳೆಗೆ ಕೆಸರು ಗದ್ದೆಯಂತಾಗಿದೆ. ನಗರಸಭೆ ನಗರೋತ್ಥಾನ ಯೋಜನೆಯಡಿ ರಸ್ತೆ ಕಾಮಗಾರಿ ನಡೆಸಲು ಅನುದಾನ ಬಿಡುಗಡೆಯಾಗಿದ್ದು, ಆದರೂ ಈ ವರೆಗೂ ಕ್ರಮವಹಿಸಿಲ್ಲ. ಇತ್ತೀಚೆಗೆ ಹಲವಾರು ಬೈಕ್ ಸವಾರರು ರಸ್ತೆಯಲ್ಲಿ ಆಯತಪ್ಪಿ ಬಿದ್ದು, ಸಣ್ಣ-ಪುಟ್ಟ ಗಾಯಗಳಾಗಿದೆ. ನಿತ್ಯವೂ ನೂರಾರು ಸಂಖ್ಯೆಯಲ್ಲಿ ವಾಹನಗಳು ಈ ರಸ್ತೆಯಲ್ಲಿ ಸಂಚಾರ ಮಾಡುವುದರಿಂದ ಆದಷ್ಟು ಬೇಗ ಸೂಕ್ತ ರಸ್ತೆಯನ್ನು ನಿರ್ಮಾಣ ಮಾಡಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

ಹೆಚ್ಚಿನ ವಾರ್ಡ್‌ಗಳಲ್ಲಿ ಸಮಸ್ಯೆ:

ನಗರಸಭೆ ವ್ಯಾಪ್ತಿಗೆ ಒಳಪಡುವ 31 ವಾರ್ಡ್‌ಗಳಲ್ಲೂ ಒಂದಿಲ್ಲೊಂದು ರಸ್ತೆ ಸಮಸ್ಯೆ ಕಂಡುಬರುತ್ತದೆ. ಕೆಲವು ವಾರ್ಡ್‌ಗಳಲ್ಲಿ ಇಂದಿಗೂ ಮಣ್ಣಿನ ರಸ್ತೆಗಳೇ ಖಾಯಂ ಆಗಿದ್ದು, ವಾರ್ಡ್ ನಿವಾಸಿಗಳು ನಿರಂತರವಾಗಿ ಸಮಸ್ಯೆ ಅನುಭವಿಸುವಂತಾಗಿದೆ. ಬುದ್ಧನಗರ, ಕರಿನಂಜನಪುರ, ಕುಲುಮೆ ರಸ್ತೆಯಲ್ಲಿರುವ ಬಡಾವಣೆಗಳ ರಸ್ತೆ, ಹೌಸಿಂಗ್ ಬೋರ್ಡ್ ಕಾಲೋನಿಯ ರಸ್ತೆ ಹಾಗೂ ಇನ್ನಿತರೆ ಪ್ರಮುಖ ರಸ್ತೆಗಳೇ ಹಾಳಾಗಿದ್ದು, ಸಾರ್ವಜನಿಕರು ನಿತ್ಯವೂ ತೊಂದರೆ ಎದುರಿಸುವಂತಾಗಿದೆ. ಮಳೆ ಬಂದಾಗ ಮಣ್ಣಿನ ರಸ್ತೆಗಳು ಗುಂಡಿಮಯವಾಗಲಿದ್ದು, ಬೈಕ್ ಸವಾರರು ಬಿದ್ದು ಸಣ್ಣ-ಪುಟ್ಟ ಗಾಯಗಳಾಗಿರುವ ಉದಾಹರಣೆಗಳು ಇದೆ. ಇತ್ತೀಚೆಗೆ ಕುಡಿಯುವ ನೀರು ಪೂರೈಕೆ ಕಾಮಗಾರಿ ಹಲವಾರು ರಸ್ತೆಗಳನ್ನು ಅಗೆದಿದ್ದು, ರಸ್ತೆಗಳಲ್ಲಿ ಅವ್ಯವಸ್ಥೆ ತಾಂಡವವಾಡುತ್ತಿದೆ.

ನಗರದ ಚಿಕ್ಕಅಂಗಡಿ ಬೀದಿಯಿಂದ ಸಂಪಿಗೆ ರೋಡ್‌ಗೆ ಸಂಪರ್ಕ ಕಲ್ಪಿಸುವ ರಸ್ತೆಗೆ ಕಲ್ಲು, ಮಣ್ಣು ಸುರಿದು ವರ್ಷಗಳೇ ಉರುಳಿದೆ. ಇನ್ನುವ ಪಟ್ಟಣ ಪೊಲೀಸ್ ಠಾಣೆಯ ಎದುರಿನ ರಸ್ತೆ ನಿರ್ಮಾಣಕ್ಕೆ ನಗರೋತ್ಥಾನ ಯೋಜನೆಯಡಿ ಅನುದಾನ ಬಿಡುಗಡೆಯಾಗಿದ್ದರು, ಕಾಮಗಾರಿ ಪ್ರಾರಂಭಿಸದೇ ರಸ್ತೆ ಸಂಪೂರ್ಣ ಕೆಸರುಮಯವಾಗಿದೆ. ಕೂಡಲೇ ನಗರಸಭೆ ಅಧಿಕಾರಿಗಳು ಎಚ್ಚೆತ್ತುಕೊಂಡು ಸೂಕ್ತ ರಸ್ತೆಗಳನ್ನು ನಿರ್ಮಾಣ ಮಾಡಿ ಸಾರ್ವಜನಿಕರಿಗೆ ಅನುಕೂಲಮಾಡಿಕೊಡಬೇಕು.

-ಎಂ.ಜಯಕುಮಾರ್, ಅಧ್ಯಕ್ಷ, ಜಿಲ್ಲಾ ಉಪ್ಪಾರ ಯುವಕರ ಸಂಘ, ಚಾಮರಾಜನಗರ

ಚಿಕ್ಕಅಂಗಡಿ ಬೀದಿಯಿಂದ ಸಂಪಿಗೆ ರೋಡ್‌ಗೆ ಸಂಪರ್ಕ ಕಲ್ಪಿಸುವ ರಸ್ತೆಯ ಕಾಮಗಾರಿ ಪ್ರಾರಂಭವಾಗಿದ್ದು, ಆದಷ್ಟು ಬೇಗ ಕಾಮಗಾರಿ ಮುಗಿಸಲು ಸೂಚನೆ ನೀಡುತ್ತೇನೆ. ಸಂತೇಮರಹಳ್ಳಿ ರಸ್ತೆಯಿಂದ ಚೆನ್ನಿಪುರಮೋಳೆ ಹಾಗೂ ಕುಲುಮೆ ರಸ್ತೆಗಳ ಅಭಿವೃದ್ಧಿ ಶಾಸಕರು 1.50 ಕೋಟಿ ರೂ, ಅನುದಾನ ನೀಡಿದ್ದಾರೆ. ಆದಷ್ಟು ಬೇಗ ಟೆಂಡರ್ ಕರೆದು ಕಾಮಗಾರಿ ಪ್ರಾರಂಭಿಸಲಾಗುವುದು.

-ಎಸ್.ವಿ.ರಾಮದಾಸ್, ಪೌರಾಯುಕ್ತ, ನಗರಸಭೆ, ಚಾಮರಾಜನಗರ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net