ಚಿಕ್ಕಮಗಳೂರು: ಕಾಫಿನಾಡು ಚಿಕ್ಕಮಗಳೂರು ಜಿಲ್ಲೆ ಕಳೆದ ಎರಡು ದಿನಗಳಿಂದ ಅಕ್ಷರಶಃ ಮಳೆನಾಡಾಗಿ ಪರಿವರ್ತನೆಯಾಗಿದೆ. ಬಿಟ್ಟೂ ಬಿಡದಂತೆ ಸುರಿಯುತ್ತಿರುವ ಧಾರಾಕಾರ ಮಳೆ ಹಾಗೂ ಮಳೆಯೊಂದಿಗೆ ಬೀಸುತ್ತಿರುವ ಭಾರಿ ಗಾಳಿಯಿಂದಾಗಿ ಜಿಲ್ಲೆಯ ಮಲೆನಾಡು ಭಾಗದಲ್ಲಿ ಮಳೆಯಿಂದಾಗಿ ದಿನೇ ದಿನೇ ಮಳೆ ಅವಾಂತರಗಳು ಹೆಚ್ಚಲಾರಂಭಿಸಿವೆ. ಜೊತೆಗೆ ಜೀವ ಹಾನಿಯೂ ಆರಂಭಗೊಂಡಿದೆ.
ಧಾರಾಕಾರ ಮಳೆ ಹಾಗೂ ಭಾರಿ ಗಾಳಿಯಿಂದಾಗಿ ಚಲಿಸುತ್ತಿದ್ದ ಆಟೋ ಮೇಲೆ ಮರ ಬಿದ್ದ ಪರಿಣಾಮ ಆಟೋ ಚಾಲಕ ರತ್ನಾಕರ(38) ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಕೊಪ್ಪ ತಾಲೂಕಿನ ಜಯಪುರ ಸಮೀಪದ ಕೊಗ್ರೆಯ ಜಾಳ್ಮಾರದಲ್ಲಿ ನಡೆದಿದೆ.
ಕಾಫಿನಾಡು ಚಿಕ್ಕಮಗಳೂರಿನಲ್ಲಿ ಧಾರಾಕಾರ ಮಳೆ ಸುರಿಯ ತೊಡಗಿದ್ದು, ಮಳೆಯ ಜೊತೆಗೆ ಬಿರುಗಾಳಿಯ ಅಬ್ಬರವು ಹೆಚ್ಚಾಗಿದ್ದು, ತಾಲೂಕಿನ ವಿವಿಧೆಡೆ ವಿದ್ಯುತ್ ಕಂಬಗಳ ಮೇಲೆ ಮರಗಳು ಉರುಳಿ ಬಿದ್ದಿರುವ ಪರಿಣಾಮ ಗ್ರಾಮೀಣ ಪ್ರದೇಶಗಳಲ್ಲಿ ವಿದ್ಯುತ್ ನಿಲುಗಡೆ ಗೊಂಡಿದೆ.
ಚಿಕ್ಕಮಗಳೂರು ತಾಲೂಕಿನ ವಸ್ತಾರೆ, ದಿಣ್ಣೆಕೆರೆ, ಕೂದುವಳ್ಳಿ, ತೋರಣಮಾವು, ಕೋಡುವಳ್ಳಿ, ಕೋಟೆವೂರು, ಹುಣಸೇಮಕ್ಕಿ ಕೆಸರಿಕೆ, ಮುಳ್ಳುವಾರೆ, ಕಲ್ಲುಗುಡ್ಡೆ, ಕಟ್ರುಮನೆ, ಹಳಿಹಿತ್ಲು ಮಿಂಚೇರಿ ಗ್ರಾಮಗಳಲ್ಲಿ ವಿದ್ಯುತ್ ನಿಲುಗಡೆಗೊಂಡಿದೆ.
ನಿರಂತರವಾಗಿ ಧಾರಾಕಾರ ಮಳೆ ಸುರಿಯುತ್ತಿರುವ ಪರಿಣಾಮ ದುರಸ್ತಿ ಕಾರ್ಯಕ್ಕೂ ಆಡಚಣೆ ಉಂಟಾಗುತ್ತಿದೆ. ಅಲ್ಲದೇ ಒಂದೆಡೆ ದುರಸ್ತಿ ಪಡಿಸಿದ ಲೈನ್‌ಗಳ ಮೇಲೆ ಮತ್ತೆ ಬಿರುಗಾಳಿಗೆ ಮರಗಳು ಉರುಳಿ ಬೀಳುತ್ತಿವೆ.
ಹೀಗಾಗಿ ತಾಲೂಕಿನ ಹತ್ತಕ್ಕೂ ಹೆಚ್ಚು ಗ್ರಾಮಗಳಲ್ಲಿ ದೀಪ, ಕ್ಯಾಂಡಲ್ ಬೆಳಕಿನಲ್ಲಿ ಜನರು ಕಾಲಕಳೆಯುವಂತಾಗಿದೆ. ನಿರಂತರವಾಗಿ ಬಿರುಗಾಳಿಯೊಂದಿಗೆ ಸುರಿಯುತ್ತಿರುವ ಧಾರಾಕಾರ ಮಳೆಯೂ ಇದೀಗ ಮೆಸ್ಕಾಂ ಸಿಬ್ಬಂದಿಗಳಿಗೂ ತಲೆನೋವು ತಂದೊಡ್ಡಿದೆ.
ಮೂಡಿಗೆರೆ ತಾಲೂಕಿನಲ್ಲಿ ಕಾರೊಂದು ಉಕ್ಕಿಹರಿಯುತ್ತಿರುವ ಹಳ್ಳಕ್ಕೆ ಉರುಳಿ ಬಿದ್ದಿದ್ದು, ಸೊಂಟಕ್ಕೆ ಹಗ್ಗ ಕಟ್ಟಿ ಇಳಿದು ಕಾರಿನಲ್ಲಿದ್ದವರನ್ನು ರಕ್ಷಣೆ ಮಾಡಲಾಗಿದ್ದು, ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯಗಳಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಬಣಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಚಿಕ್ಕಮಗಳೂರಲ್ಲಿ ಘೋರವಾದ ದುರಂತ ಸಂಭವಿಸಿದ್ದು, ಭದ್ರಾ ಡ್ಯಾಮ್ ವೀಕ್ಷಣೆಗೆ ಬಂದಿದ್ದ ವೇಳೆ ತಾಯಿಯ ಕಣ್ಣೆದುರಲ್ಲೇ ಯುವಕನೊಬ್ಬ ಭದ್ರಾ ಹಿನ್ನಿರಿನಲ್ಲಿ ಕಾಲು ಜಾರಿ ಬಿದ್ದು ಸಾವನ್ನಪ್ಪಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಎನ್.ಆರ್.ಪುರ ತಾಲೂಕಿನಲ್ಲಿನಡೆದಿದೆ.
ತಾಯಿಯ ಕಣ್ಣೆದುರೇ ಶಿವಮೊಗ್ಗ ಮೂಲದ ಗೌತಮ್ (೧೯) ಎಂಬ ಯುವಕ ಸಾವನ್ನಪ್ಪಿದ್ದಾನೆ. ಮಾರಿ ಹಬ್ಬದ ನಂತರ ಭದ್ರಾ ಹಿನ್ನಿರು ವೀಕ್ಷಣೆಗೆ ಬಂದಿದ್ದರು ಎನ್ನಲಾಗಿದೆ. ಅಗ್ನಿಶಾಮಕ ದಳ ಸಿಬ್ಬಂದಿ ಹರಸಾಹಸ ಪಟ್ಟು ಶವ ಹೊರಗಡೆ ತೆಗೆದಿದ್ದಾರೆ. ಎನ್.ಆರ್. ಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮೂಡಿಗೆರೆ ಮತ್ತು ಚಿಕ್ಕಮಗಳೂರು ತಾಲೂಕಿನಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಗೆ ಜನರು ಅಕ್ಷರಶಃ ತತ್ತರಿಸಿ ಹೋಗಿದ್ದಾರೆ. ಮೂಡಿಗೆರೆ ತಾಲೂಕಿನ ಚಾರ್ಮಾಡಿ ಸುತ್ತಮುತ್ತ ಕಳೆದ ರಾತ್ರಿಯಿಂದ ಭಾರೀ ಪ್ರಮಾಣದಲ್ಲಿ ಮಳೆ ಸುರಿಯುತ್ತಿದೆ. ನಿನ್ನೆ ಸಂಜೆಯಿಂದ ಇದು ಬೆಳಗ್ಗೆವರೆಗೆ ೨೦೬ ಮಿಲಿ ಮೀಟರ್ (೮.೧೧ ಇಂಚು) ಮಳೆಯಾಗಿದೆ.
ಚರ್ಮಾಡಿ ಘಾಟಿ ರಸ್ತೆಯಲ್ಲಿ ಸಂಚಾರ ಅಸ್ತವ್ಯಸ್ತಗೊಂಡಿದೆ. ಚಾರ್ಮಾಡಿ ಘಾಟ್ ವ್ಯಾಪ್ತಿಯ ಕೊಟ್ಟಿಗೆಹಾರ, ಬಾಳೂರು, ಜಾವಳಿ, ಕೆಳಗೂರು, ಅಲೆಖಾನ್‌ಹೊರಟ್ಟಿ, ಭಾಗದಲ್ಲಿ ಮಳೆಯ ಪ್ರಮಾಣ ಹೆಚ್ಚಾಗಿದೆ.
ಇದೇ ರೀತಿ ಮಳೆ ಮುಂದುವರೆದರೆ ಚಾರ್ಮಾಡಿ ಘಾಟ್‌ನಲ್ಲಿ ಭೂ ಕುಸಿತದ ಆತಂಕ ಸೃಷ್ಟಿಯಾಗಿದೆ. ದಕ್ಷಿಣ ಕನ್ನಡ ಹಾಗೂ ಚಿಕ್ಕಮಗಳೂರು ಸಂಪರ್ಕ ಕೊಂಡಿಯಾಗಿರುವ ಚಾರ್ಮಾಡಿ ಘಾಟ್‌ನಲ್ಲಿ ಪ್ರತಿ ನಿತ್ಯ ಸಾರಿಗೆ, ವಾಹನಗಳು ಸೇರಿದಂತೆ ಸರಕು ಸಾಮಗ್ರಿಗಳನ್ನು ಸಾಗಿಸುವ ಏಕೈಕ ಮಾರ್ಗ ಇದಾಗಿದೆ.
ಕಳಸ ತಾಲೂಕಿನ ಚನ್ನಡ್ಲು ಗ್ರಾಮದಲ್ಲಿ ಈ ಹಿಂದೆ ಭೂಕುಸಿತವಾಗಿದ್ದು, ಗುಡ್ಡದ ತಪ್ಪಲಿನಲ್ಲಿ ಬೀಸುತ್ತಿರುವ ಭಾರೀ ಗಾಳಿ, ಮಳೆಗೆ ಜನರಲ್ಲಿ ಆತಂಕ ಸೃಷ್ಟಿ ಮಾಡಿದೆ. ಜನರು ರಾತ್ರಿವೇಳೆಯಲ್ಲಿ ಯಾವಾಗ ಗುಡ್ಡಕುಸಿಯುತ್ತದೆಯೋ ಎಂಬ ಭಯದಲ್ಲಿಯೇ ರಾತ್ರಿ ಕಳೆಯುವ ಪರಿಸ್ಥಿತಿ ಎದುರಾಗಿದೆ.
ಕೊಟ್ಟಿಗೆಹಾರ ಪಟ್ಟಣದ ಅಂಗಡಿಗಳಿಗೆ ಮಳೆನೀರು ನುಗ್ಗಿದೆ. ನೀರನ್ನು ಹೊರಹಾಕಲು ಜನರು ಶ್ರಮಪಡುತ್ತಿದ್ದಾರೆ. ಚಾರ್ಮಾಡಿ ಘಾಟಿಯಲ್ಲಿ ಮಳೆ ಹಿನ್ನೆಲೆಯಲ್ಲಿ ಹಗಲುವೇಳೆಯಲ್ಲೇ ವಾಹನದ ದೀಪಹಾಕಿಕೊಂಡು ಮುಂದೆ ಸಾಗಬೇಕಾದ ಸ್ಥಿತಿ ನಿರ್ಮಾಣವಾಗಿದೆ.