

ಹನೂರು: ಮಳೆ ಬಂದ ವೇಳೆ ಸೋರುವ ಶಾಲಾ ಕೊಠಡಿಯಿಂದ ಮಕ್ಕಳ ಪಾಠ- ಪ್ರವಚನಕ್ಕೆ ತೊಡಕಾಗಿ ಪರಿಣಮಿಸಿದೆ. ಆದ್ದರಿಂದ ರಿಪೇರಿ ಮಾಡಿಸುವಂತೆ ತಾಲೂಕಿನ ಎಂ.ಟಿ.ದೊಡ್ಡಿ ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 1ರಿಂದ 7ನೇ ತರಗತಿವರೆಗೆ 32 ಮಕ್ಕಳು ಶಿಕ್ಷಣ ಪಡೆಯುತ್ತಿದ್ದು, ಮೂವರು ಶಿಕ್ಷಕರು ಕಾರ್ಯನಿರ್ವಹಿಸುತ್ತಿದ್ದಾರೆ. ಮಕ್ಕಳಿಗೆ ಅಗತ್ಯ ಮೂಲಸೌಕರ್ಯ ಒದಗಿಸುವ ಜತೆಗೆ ಗುಣಮಟ್ಟದ ಶಿಕ್ಷಣಕ್ಕೆ ಸರ್ಕಾರ ಹೆಚ್ಚಿನ ಒತ್ತನ್ನು ನೀಡಿದೆ. ಆದರೆ ಗ್ರಾಮದಲ್ಲಿ 7 ವರ್ಷಗಳ ಹಿಂದೆ ನಿರ್ಮಿಸಿರುವ 2 ಶಾಲಾ ಕೊಠಡಿಗಳ ಛಾವಣಿ ಹಾಗೂ ಗೋಡೆ ಬಿರುಕು ಬಿಟ್ಟು ಶಿಥಿಲಾವಸ್ಥೆಯಿಂದ ಕೂಡಿದೆ. ಹಾಗಾಗಿ ಮೂಲ ಸೌಕರ್ಯದ ಕೊರತೆ ಇದೆ. ಶಿಥಿಲಗೊಂಡಿರುವ ಈ ಕೊಠಡಿಗಳಲ್ಲಿ ಮಳೆ ಬಂದ ವೇಳೆ ನೀರು ಸೋರುತ್ತದೆ. ಇದರಿಂದ ಕಲಿಕಾ-ಬೋಧನಾ ಪ್ರಕ್ರಿಯೆಗೆ ತೊಡಕಾಗಿ ಪರಿಣಮಿಸಿರುವುದು ಒಂದೆಡೆಯಾದರೆ, ಛಾವಣಿಯಿಂದ ಸಿಮೆಂಟ್ ತುಣುಕುಗಳು ಕಳಚಿ ಬೀಳುತ್ತಿದ್ದು, ಮಕ್ಕಳು ಹಾಗೂ ಶಿಕ್ಷಕರಲ್ಲಿ ಭಯದ ವಾತಾವರಣವನ್ನು ಸೃಷ್ಟಿಸಿದೆ. ಇದರಿಂದ ಕೊಠಡಿಯದ್ದೇ ಒಂದು ದೊಡ್ಡ ಸಮಸ್ಯೆಯಾಗಿ ಪರಿಣಮಿಸಿದೆ.
ಕೊಠಡಿಯನ್ನು ರಿಪೇರಿ ಮಾಡಿಸುವಂತೆ ಕಳೆದ ಒಂದೂವರೆ ವರ್ಷದಿಂದ ತಾಲೂಕು ಪಂಚಾಯಿತಿ ಇಒ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿ ಅವರಿಗೆ ಮನವಿ ಸಲ್ಲಿಸಲಾಗಿದೆ. ಆದರೆ ಈವರೆಗೂ ಯಾವುದೇ ಕ್ರಮವಾಗಿಲ್ಲ. ಇದೀಗ ಬಂಗಾಳಕೊಲ್ಲಿಯಲ್ಲಿ ಉಂಟಾಗಿರುವ ವಾಯುಭಾರ ಕುಸಿತದಿಂದ ಆಗಾಗ್ಗೆ ಮಳೆಯಾಗುತ್ತಿರುವುದರಿಂದ ನೀರು ಜಿನುಗುತ್ತಿದ್ದು, ಮಕ್ಕಳ ಶಿಕ್ಷಣಕ್ಕೆ ತೊಂದರೆಯಾಗಿದೆ. ಆದ್ದರಿಂದ ಸಂಬಂಧಪಟ್ಟ ಅಧಿಕಾರಿಗಳು ಇನ್ನಾದರೂ ಇತ್ತ ಗಮನಹರಿಸಿ ಶಿಥಿಲಗೊಂಡ ಕೊಠಡಿಯನ್ನು ರಿಪೇರಿ ಮಾಡಿಸುವುದರ ಮೂಲಕ ಮಕ್ಕಳ ಶಿಕ್ಷಣಕ್ಕೆ ಅನುಕೂಲ ಕಲ್ಪಿಸುವಂತೆ ಗ್ರಾಮದ ಶ್ರೀನಿವಾಸ್ ಒತ್ತಾಯಿಸಿದ್ದಾರೆ.