ಮಳೆಗೆ ನೆಲಕಚ್ಚಿದ ಕಬ್ಬಿನ ಬೆಳೆ

11art-1
Published on

ಶಿರಹಟ್ಟಿ: ಕಳೆದ ನಾಲ್ಕು ದಿನಗಳಿಂದ ಸುರಿಯುತ್ತಿರುವ ಮಳೆ, ಗಾಳಿಯ ರಭಸಕ್ಕೆ ಮನೆಗಳು ಜಲಾವೃತಗೊಂಡರೆ, ಮತ್ತೊಂದೆಡೆ ಹೊಲಗಳಲ್ಲಿ ಬೆಳೆದು ನಿಂತ ಬೆಳೆ ನಾಶವಾಗುತ್ತಿವೆ.

ತಾಲೂಕಿನ ಕುಸ್ಲಾಪೂರ ಗ್ರಾಮದ ರೈತ ರಾಮಪ್ಪ ಭಂಡಾರಿ ಅವರ ಹೊಲದಲ್ಲಿನ ಕಬ್ಬಿನ ಬೆಳೆ ಮಳೆ ಗಾಳಿ ಹೊಡೆತಕ್ಕೆ ನೆಲಕಚ್ಚಿದ್ದು, ಅಪಾರ ಹಾನಿಯಾಗಿದೆ.

ಎರಡು ದಿನಗಳ ಹಿಂದೆ ತಡರಾತ್ರಿ 2 ಗಂಟೆಗೂ ಹೆಚ್ಚು ಕಾಲ ಭಾರಿ ಪ್ರಮಾಣದ ಮಳೆ ಸುರಿದಿದ್ದರಿಂದ ಕುಸ್ಲಾಪೂರದ ಬಡ ರೈತನ 4 ಎಕರೆ ಹೊಲದಲ್ಲಿನ ಕಬ್ಬಿನ ಬೆಳೆ ಹಾಳಾಗಿದೆ. ರೈತ ರಾಮಪ್ಪ ಭಂಡಾರಿ ಹೆಸರು, ಉಳ್ಳಾಗಡ್ಡಿ, ಗೋವಿನಜೋಳ ಬೆಳೆ ಹಾನಿಯಿಂದ ನಷ್ಟ ಅನುಭವಿಸಿದ್ದರು. ಪರ್ಯಾಯ ಬೆಳೆಯಾಗಿ 5 ಎಕರೆ ಜಮೀನಿನಲ್ಲಿ ಕೊಳವೆ ಬಾವಿ ಸೌಲಭ್ಯದೊಂದಿಗೆ ಬೆಳೆದಿದ್ದ ಕಬ್ಬಿನ ಬೆಳೆ ಇನ್ನೆರಡು ತಿಂಗಳಲ್ಲಿ ಕಟಾವಿಗೆ ಬರುವುದಿತ್ತು. ಆದರೆ, ಮಳೆ ಅವಾಂತರದಿಂದ ಬೆಳೆ ನೆಲ ಕಚ್ಚಿದೆ. ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದೆ.

ಸಾಲ ಮಾಡಿ ಬೀಜ, ಗೊಬ್ಬರ ತಂದು ಹಾಕಿ ಆರು ತಿಂಗಳಿನಿಂದ ಬೆಳೆಸಿದ ಕಬ್ಬು ಬೆಳೆ ಮಳೆ, ಗಾಳಿಗೆ ಹಾನಿ ಗೀಡಾಗಿದೆ. ಈ ವರ್ಷ ಕಬ್ಬು ಬೆಳೆದರೆ ಲಾಭವಾದೀತು ಎಂದುಕೊಂಡರೆ ಈಗ ಅದಕ್ಕೂ ಕುತ್ತು ಬಂದಿದೆ. ಇನ್ನೊಂದೆಡೆ ಸರ್ಕಾರ ಬೆಳೆಹಾನಿಗೆ ಕೊಡುವ ಪುಡಿಗಾಸು ರೈತರ ಪಾಲಿಗೆ ಅರೆಕಾಸಿನ ಮಜ್ಜಿಗೆ ಎಂಬಂತಾಗಿದೆ. | ಗುಡದಪ್ಪ ಭಂಡಾರಿ ಬೆಳೆಹಾನಿ ಅನುಭವಿಸಿದ ರೈತ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net