ಮಳೆಗೆ ನೂರಾರು ಮನೆ ಜಲಾವೃತ

1 NRD-1C
Published on

ನರಗುಂದ: ತಾಲೂಕಿನಲ್ಲಿ ಬುಧವಾರ ತಡರಾತ್ರಿ ಸುರಿದ ಧಾರಾಕಾರ ಮಳೆಯಿಂದ ಕೆಲವು ಗ್ರಾಮಗಳಲ್ಲಿ ನೂರಾರು ಮನೆಗಳು ಜಲಾವೃತವಾಗಿವೆ.

ಮಲಪ್ರಭಾ ನದಿ ಪ್ರವಾಹದಿಂದ ಈಗಾಗಲೇ ಕೊಣ್ಣೂರ, ಬೂದಿಹಾಳ, ವಾಸನ, ಕಲ್ಲಾಪುರ ಮತ್ತಿತರ ಗ್ರಾಮಗಳ ಜನರ ಬದುಕು ಮೂರಾಬಟ್ಟೆಯಾಗಿದೆ. ಅಪಾರ ಪ್ರಮಾಣದ ಆಸ್ತಿ-ಪಾಸ್ತಿ ಹಾನಿಯಾಗಿದೆ. ಇದರಿಂದ ಚೇತರಿಸಿಕೊಳ್ಳುವ ಮುನ್ನವೇ ಈ ಗ್ರಾಮಸ್ಥರು ಮತ್ತೆ ವರುಣಾಘಾತದಿಂದ ನಲುಗುವಂತಾಗಿದೆ.

ಬೂದಿಹಾಳ ನವಗ್ರಾಮದ 174 ಮನೆಗಳು, ವಾಸನ ಗ್ರಾಮದ ತಗಡಿನ 42 ತಾತ್ಕಾಲಿಕ ಶೆಡ್​ಗಳು, ಕೊಣ್ಣೂರಿನ ಉಪ ಪೊಲೀಸ್ ಠಾಣೆ, ಗ್ರಾಪಂ ಕಾರ್ಯಾಲಯ, ಪಶು ಆಸ್ಪತ್ರೆಗೆ ಅಪಾರ ಪ್ರಮಾಣದ ನೀರು ನುಗ್ಗಿದೆ. ದವಸ-ಧಾನ್ಯ, ಹಾಸಿಗೆ, ಸಮವಸ್ತ್ರ, ಪಾತ್ರೆಗಳು ಮತ್ತಿತರ ಸಾಮಗ್ರಿ ತೋಯ್ದು ತೊಪ್ಪೆಯಾಗಿವೆ. ಕೊಣ್ಣೂರಲ್ಲಿ 1 ಮನೆ ಸಂಪೂರ್ಣ, ವಾಸನದಲ್ಲಿ 2 ಮನೆಗಳು, ಬೆಳ್ಳೇರಿಯಲ್ಲಿ ಮೂರು ಮನೆಗಳು ಭಾಗಶಃ ಕುಸಿದು ಬಿದ್ದಿವೆ. ಬೂದಿಹಾಳದ ಬಹುತೇಕ ಮನೆಗಳು ಬಿರುಕು ಬಿಟ್ಟಿದ್ದು, ಮೇಲ್ಛಾವಣಿಗಳು ಸೋರುತ್ತಿವೆ. ತಗ್ಗು ಪ್ರದೇಶಗಳ ಜನರ ಪರಿಸ್ಥಿತಿಯಂತೂ ಹೇಳತೀರದಂತಾಗಿದೆ. ಮನೆಗೆ ನುಗ್ಗಿದ ನೀರನ್ನು ಹೊರಹಾಕಲು ಕುಟುಂಬಸ್ಥರು ಗುರುವಾರ ಬೆಳಗ್ಗೆವರೆಗೆ ಹರಸಾಹಸಪಟ್ಟರು.

ಬೂದಿಹಾಳ ಗ್ರಾಮಕ್ಕೆ ಭೇಟಿ ನೀಡಿದ ತಹಸೀಲ್ದಾರ್ ಎ.ಎಚ್. ಮಹೇಂದ್ರ, ಜಿಪಂ ಅಧ್ಯಕ್ಷ ರಾಜುಗೌಡ ಕೆಂಚನಗೌಡ್ರ ಅವರಿಗೆ ಗ್ರಾಮಸ್ಥರು ಘೕರಾವ್ ಹಾಕಿ, ಪ್ರತಿಭಟನೆ ನಡೆಸಿದರು.

ತಹಸೀಲ್ದಾರ್, ಜಿಪಂ ಅಧ್ಯಕ್ಷ ಮಾತನಾಡಿ, ‘ಪ್ರಕೃತಿಯನ್ನು ಯಾರೂ ಹಿಡಿದಿಟ್ಟುಕೊಳ್ಳಲು ಬರುವುದಿಲ್ಲ. ಏಕಾಏಕಿ ಸುರಿದ ಭಾರಿ ಮಳೆಯಿಂದ ಸಾಕಷ್ಟು ಸಮಸ್ಯೆಗಳಾಗಿವೆ. ಎಸ್​ಡಿಆರ್​ಎಫ್ ನಿಯಮದಡಿ ಪ್ರತಿಯೊಬ್ಬರಿಗೂ ತಾತ್ಕಾಲಿಕ ಪರಿಹಾರ ಕೊಡಿಸುತ್ತೇವೆ. ಜನಜೀವನ ಅಸ್ತವ್ಯಸ್ತವಾಗಿದ್ದರಿಂದ ಗ್ರಾಮದ ಪ್ರಾಥಮಿಕ ಶಾಲೆಯಲ್ಲಿ ಕಾಳಜಿ ಕೇಂದ್ರ ಆರಂಭಿಸಲಾಗಿದೆ. ಗ್ರಾಮಕ್ಕೆ ತಡೆಗೋಡೆ ನಿರ್ವಿುಸುವ ಕುರಿತು ಜಿಲ್ಲಾಧಿಕಾರಿ ಸುಂದರೇಶ ಬಾಬು, ಜಿಲ್ಲಾ ಉಸ್ತುವಾರಿ ಸಚಿವ ಸಿ.ಸಿ. ಪಾಟೀಲ ಅವರೊಂದಿಗೆ ರ್ಚಚಿಸಲಾಗುವುದು’ ಎಂದರು.

ಅದರಿಂದ ಆಕ್ರೋಶಗೊಂಡ ಗ್ರಾಮದ ಮಹಿಳೆಯರು, ‘ನೀವು ನಮಗೆ ನಾಲ್ಕೈದು ದಿನ ಊಟೋಪಚಾರದ ವ್ಯವಸ್ಥೆ ಮಾಡಬಹುದು. ಆದರೆ, ನಮ್ಮ ಕುಟುಂಬದ ಪರಿಸ್ಥಿತಿ ಅರ್ಥ ಮಾಡಿಕೊಂಡು ನಮ್ಮ ಸಮಸ್ಯೆ ಬಗೆಹರಿಸಬೇಕು. ಇಲ್ಲದಿದ್ದರೆ ನಿಮ್ಮ ವಾಹನ ಬಿಡುವುದಿಲ್ಲ’ ಎಂದು ಪಟ್ಟುಹಿಡಿದರು. ಆಗ ನರಗುಂದ ತಾಪಂ ಸ್ಥಾಯಿ ಸಮಿತಿ ಸದಸ್ಯ ಟಿ.ಬಿ. ಶಿರಿಯಪ್ಪಗೌಡ್ರ ಅವರು ಗ್ರಾಮಸ್ಥರ ಮನವೊಲಿಸಿ ತಹಸೀಲ್ದಾರ್ ತೆರಳಲು ಅವಕಾಶ ಮಾಡಿಕೊಟ್ಟರು.

ಸರ್ವಸ್ವವನ್ನೇ ಕಳೆದುಕೊಂಡಿದ್ದೇವೆ...

‘ನಾವೇನು ಪಾಪ ಮಾಡಿದ್ದೇವೋ ಏನೋ ಗೊತ್ತಿಲ್ಲ. ಆದರೆ, ಈಗಾಗಲೇ ಮಲಪ್ರಭಾ ಪ್ರವಾಹದಲ್ಲಿ ಸರ್ವಸ್ವವನ್ನೂ ಕಳೆದುಕೊಂಡಿದ್ದೇವೆ. ಬುಧವಾರ ರಾತ್ರಿಯಿಡೀ ಸುರಿದ ಭಾರಿ ಮಳೆಯಿಂದ ಮನೆಮಂದಿಯೆಲ್ಲ ನಿದ್ದೆಯಿಲ್ಲದೇ ನರಕಯಾತನೆ ಅನುಭವಿಸಿದ್ದೇವೆ. ಇಲ್ಲಿ 10 ವರ್ಷಗಳ ಹಿಂದೆ ನಿರ್ವಿುಸಿದ ಬಹುತೇಕ ಮನೆಗಳು ಬಿರುಕು ಬಿಟ್ಟಿದ್ದು, ಸೋರುತ್ತಿವೆ. ಸರಿಯಾದ ರಸ್ತೆ, ಚರಂಡಿಗಳಿಲ್ಲ. ನಮಗೆ ಶಾಶ್ವತ ಪರಿಹಾರ ಕಲ್ಪಿಸಬೇಕು ಅಥವಾ ಗ್ರಾಮದಲ್ಲಿ ನೀರು ನುಗ್ಗದಂತೆ ತಡೆಗೋಡೆ ನಿರ್ವಿುಸಿಕೊಡಿ’ ಎಂದು ಆಗ್ರಹಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net