

ಕಳೆದ ಮೂರು ದಿನಗಳಿಂದ ಸುರಿದ ಮಳೆ ಆರ್ಭಟಕ್ಕೆ ನವಲಗುಂದ ತಾಲೂಕಿನಲ್ಲಿ 55 ಮನೆಗಳು ಕುಸಿದು ಬಿದ್ದಿವೆ. ಇದರಿಂದ ಮನೆಯಲ್ಲಿದ್ದ, ದವಸ-ಧಾನ್ಯಗಳು, ಗೃಹ ಬಳಕೆ ವಸ್ತುಗಳು, ಕಟ್ಟೆಗೆ ತೊಲೆಗಳು, ಮಳೆಗೆ ನೆನೆದು ಅಪಾರ ಪ್ರಮಾಣದ ಹಾನಿ ಉಂಟಾಗಿದೆ.
ನವಲಗುಂದ ಪಟ್ಟಣ ಒಂದರಲ್ಲಿಯೇ 44 ಮನೆಗಳು ಹಾನಿಗೀಡಾಗಿವೆ. ಅದರಂತೆ, ಶಿರಕೋಳ 2, ಹನಸಿ 3, ಬೆಳವಟಗಿ 2, ಯಮನೂರ 1, ಗೊಬ್ಬರಗುಂಪಿ 1, ಕರ್ಲವಾಡ 1, ನಾಗನೂರ 1 ಮನೆಗಳು ಕುಸಿದಿವೆ. ಇನ್ನೂ ಅನೇಕ ಕಡೆ ಶಾಲಾ ಕಟ್ಟಡಗಳು ಮತ್ತು ಆವರಣ, ಅಂಗನವಾಡಿಗಳು, ನೀರಾವರಿ ಕಾಲನಿ, ಕೆಲ ಗ್ರಾಮೀಣ ಪ್ರದೇಶದಲ್ಲಿನ ಆಶ್ರಯ ನಿವೇಶನಗಳಿಗೆ ನೀರು ನುಗ್ಗಿ, ತಾಪತ್ರಯ ಅನುಭವಿಸುವಂತೆ ಮಾಡಿದೆ. ನವಲಗುಂದದ ಬಸವೇಶ್ವರ, ಬಸ್ತಿ ಪ್ಲಾಟ್, ಕಳ್ಳಿಮಠ, ಹಳ್ಳದ ಓಣಿ ಮೊದಲಾದ ತಗ್ಗು ಪ್ರದೇಶದಲ್ಲಿರುವ ಮನೆಗಳಿಗೆ ಚರಂಡಿ ನೀರು ನುಗ್ಗಿ ಮನೆಯಲ್ಲಿ ವಾಸ ಮಾಡದಂತಾಗಿದೆ.
ಬೆಳೆ, ಹೊಲ ಒಡ್ಡುಗಳಿಗೂ ಹಾನಿ: ಶಲವಡಿ, ಯಮನೂರ, ಮೊರಬ, ಬಸಾಪೂರ, ನವಲಗುಂದ ಸೇರಿ ತಾಲೂಕಿನಾದ್ಯಂತ ಸುರಿದ ಭಾರಿ ಮಳೆಗೆ ರೈತರ ಹೊಲಗಳ ಮೇಲ್ಮೈಮಣ್ಣು, ಒಡ್ಡು, ಬದುವುಗಳು, ಕೆರೆ-ಕಟ್ಟೆಗಳು ಒಡೆದು ಅಪಾರ ಪ್ರಮಾಣದಲ್ಲಿ ಹಾನಿಗೊಳಗಾಗಿವೆ. ಮುಂಗಾರು ಹಂಗಾಮಿನ ಹತ್ತಿ, ಗೋವಿನಜೋಳ, ಉಳ್ಳಾಗಡ್ಡಿ, ಮೆಣಸಿನಕಾಯಿ, ಶೇಂಗಾ, ಮತ್ತಿತರ ಬೆಳೆಗಳು ಹಳದಿ ಮತ್ತು ಕಂದು ಬಣ್ಣಕ್ಕೆ ತಿರುಗಿ ರೋಗಗಳಿಗೆ ತುತ್ತಾಗುತ್ತಿವೆ. ಹೊಲದಲ್ಲಿ ಅತಿಯಾದ ತೇವಾಂಶದಿಂದ ರೈತರು ಬೆಳೆದ ಬೆಳೆಗಳು ನೆಲಕಚ್ಚುವಂತಾಗಿವೆ.
ಅಪಾಯದ ಮುನ್ಸೂಚನೆ: ಹುಬ್ಬಳ್ಳಿ, ಧಾರವಾಡ ಮತ್ತು ಕುಂದಗೋಳ ಮೇಲ್ಭಾಗದಲ್ಲಿ ಅಪಾರ ಮಳೆ ಸುರಿದಿದ್ದರಿಂದ ತಾಲೂಕಿನಲ್ಲಿರುವ ಬೆಣ್ಣಿಹಳ್ಳ ಮತ್ತು ತುಪ್ಪರಿಹಳ್ಳ ಉಕ್ಕಿ ಹರಿದಿವೆ. ಇದರಿಂದ ಹಳ್ಳದ ಅಕ್ಕ, ಪಕ್ಕದ ದಡಗಳು ಕೊರೆಯಲಾರಂಭಿಸಿವೆ. ಹಳ್ಳದ ವಿಸ್ತಾರ ದೊಡ್ಡದಾಗುತ್ತಿದ್ದು, ರೈತರು ಅಕ್ಕಪಕ್ಕದ ಹೊಲಕ್ಕೆ ತೆರಳದಂತೆ ಮುನ್ನೆಚ್ಚರಿಕೆ ನೀಡಿವೆ. ಮಳೆಗಾಲದ ಸಮಯದಲ್ಲಿ ಬೆಣ್ಣಿಹಳ್ಳ ಮತ್ತು ತುಪ್ಪರಿಹಳ್ಳದಲ್ಲಿ ನೂರಾರು ಕ್ಯೂಸೆಕ್ ನೀರಿನ ಪ್ರಮಾಣ ಏರಿಕೆಯಾಗಿ ಹರಿಯುತ್ತದೆ. ಈ ನೀರಿನ ಏರಿಕೆ ಪ್ರಮಾಣ ಕುರಿತು ಟ್ವಿಟರ್ನಲ್ಲಿ ಮುನ್ಸೂಚನೆ ನೀಡಿದ್ದು, ಈ ಎರಡು ಹಳ್ಳಗಳು ಅಪಾಯದ ಹಳ್ಳಗಳಾಗಿ ಮಾರ್ಪಟ್ಟಿವೆ.