ಮಳೆಗೆ ದೇವಸ್ಥಾನದ ತಡೆಗೋಡೆ ಕುಸಿತ

mdg rain
ಮೂಡಿಗೆರೆ ಕುರುಕಮಕ್ಕಿ ಬಡಾವಣೆಯ ಶ್ರೀ ಚೌಡೇಶ್ವರಿ ದೇವಸ್ಥಾನದ ಮುಂಭಾಗದಲ್ಲಿರುವ ತಡೆಗೋಡೆ ಕುಸಿದಿರುವುದು.
Published on

ಮೂಡಿಗೆರೆ: ತಾಲೂಕಿನಲ್ಲಿ ಮಳೆ ಆರ್ಭಟ ಶನಿವಾರವೂ ಮುಂದುವರಿದು, ಪಟ್ಟಣದ ಕುರುಕಮಕ್ಕಿ ಬಡಾವಣೆಯ ಶ್ರೀ ಚೌಡೇಶ್ವರಿ ದೇವಸ್ಥಾನದ ಮುಂಭಾಗದ ತಡೆಗೋಡೆ ಕುಸಿದಿದೆ.

ದೇವಸ್ಥಾನದ ಮುಂಭಾಗದಲ್ಲಿ ದೊಡ್ಡ ಹೊಂಡವಿದ್ದು, ಅಲ್ಲಿ 20 ಅಡಿ ಎತ್ತರದ ತಡೆಗೋಡೆ ನಿರ್ಮಿಸಲಾಗಿತ್ತು. ಮಳೆ ಹೆಚ್ಚಾದ ಕಾರಣ ತಡೆಗೋಡೆ ಕುಸಿದಿದ್ದು, ದೇವಸ್ಥಾನಕ್ಕೂ ಹಾನಿ ಸಂಭವಿಸುವ ಸಾಧ್ಯತೆಯಿದೆ. ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ಮೂಡಿಗೆರೆ, ಗೋಣಿಬೀಡು, ಜನ್ನಾಪುರ, ಹ್ಯಾಂಡ್ ಪೋಸ್ಟ್‌, ಬಣಕಲ್, ಕೊಟ್ಟಿಗೆಹಾರ ಪಟ್ಟಣಗಳಲ್ಲಿ ಜನರಿಲ್ಲದೆ ಬಿಕೋ ಎನ್ನುತ್ತಿವೆ. ಕಾರ್ಮಿಕರು ಕೆಲಸಕ್ಕೆ ಹೋಗಲು ಸಾಧ್ಯವಾಗದೆ ಮನೆಯಲ್ಲಿ ಕುಳಿತುಕೊಳ್ಳಬೇಕಾಗಿದೆ. ರೈತರು ತೋಟ, ಗದ್ದೆಗಳಿಗೆ ತೆರಳಲು ಸಾಧ್ಯವಾಗುತ್ತಿಲ್ಲ.

ಮಳೆಯೊಂದಿಗೆ ಗಾಳಿ ಬೀಸುತ್ತಿರುವ ಕಾರಣ ಮರಗಳು ಬೀಳುತ್ತಿವೆ. ಗ್ರಾಮೀಣ ಭಾಗದಲ್ಲಿ ಒಂದು ತಿಂಗಳಿನಿಂದ ವಿದ್ಯುತ್ ಕಣ್ಣಾಮುಚ್ಚಾಲೆ ಮುಂದುವರಿದಿದೆ. ಕುಡಿಯುವ ನೀರಿಗೆ ತೊಂದರೆ ಉಂಟಾಗಿ ಗ್ರಾಮೀಣ ಜನ ಮಳೆ ನೀರನ್ನು ಕುಡಿಯಲು ಬಳಸುತ್ತಿದ್ದಾರೆ. ಕಿತ್ತಲೆಗಂಡಿ ಗ್ರಾಮದಲ್ಲಿ ನಿರಂತರವಾಗಿ ವಿದ್ಯುತ್ ಸಮರ್ಪಕವಾಗಿ ಇಲ್ಲದ ಕಾರಣ ಪಟ್ಟಣಕ್ಕೆ ನೀರು ಪೂರೈಕೆಯಾಗುವ ಹೇಮಾವತಿ ನದಿ ದಡದಲ್ಲಿರುವ ಕುಡಿಯುವ ನೀರಿನ ಘಟಕ ಸ್ಥಗಿತಗೊಂಡಿದೆ. ನಾಲ್ಕು ದಿನದಿಂದ ಪಟ್ಟಣದ ನಿವಾಸಿಗಳಿಗೆ ಕುಡಿಯುವ ನೀರೊದಗಿಸಲು ಪಪಂಗೆ ಸಾಧ್ಯವಾಗಿಲ್ಲ. ಮಳೆನೀರು ಬಳಸಲು ಸಾಧ್ಯವಾಗದೆ ಪಟ್ಟಣದ ಜನ ಕುಡಿಯುವ ನೀರಿಗಾಗಿ ಪರದಾಟ ನಡೆಸುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net