

ಅಣ್ಣಿಗೇರಿ: ಶನಿವಾರ ರಾತ್ರಿ ಶುರುವಾದ ಮಳೆ ಭಾನುವಾರ ಬೆಳಗಿನ ಜಾವದವರೆಗೂ ಸುರಿಯಿತು. ಪರಿಣಾಮ ಗ್ರಾಮೀಣ ಭಾಗದಲ್ಲಿ ಹಳೆಯ ಮನೆಗಳು ಕುಸಿಯುವ ಹಂತದಲ್ಲಿದ್ದು, ಜನತೆ ಪರದಾಡುವಂತಾಗಿದೆ.
ಮಳೆಯಿಂದ ತಾಲೂಕಿನ ಕೊಂಡಿಕೊಪ್ಪ ಗ್ರಾಮದ ಕೆರೆ ಭರ್ತಿಯಾಗಿದೆ. ಸುತ್ತಮುತ್ತಲಿನ ಜಮೀನಿನ ರಸ್ತೆಗಳು ಹಾಳಾಗಿವೆ. ತಾಲೂಕಿನ ಅಡ್ನೂರು, ಕಿತ್ತೂರು, ನಾವಳ್ಳಿ, ಕೊಂಡಿಕೊಪ್ಪ, ಸೈದಾಪೂರ, ಬಸಾಪೂರ, ಭದ್ರಾಪೂರ, ಮಜ್ಜಿಗುಡ್ಡ, ನಲವಡಿ, ಸಾಸ್ವಿಹಳ್ಳಿಯಲ್ಲಿ ಜಮೀನಿನಲ್ಲಿದ್ದ ಬೆಳೆಗಳು ಜಲಾವೃತವಾಗಿವೆ. ಒಂದು ತಿಂಗಳಿಂದ ಬೆಂಬಿಡದೆ ಕಾಡುತ್ತಿರುವ ಮಳೆಯಿಂದ ರೈತ ಕಂಗಾಲಾಗಿದ್ದಾನೆ. ಮುಂಗಾರು ಬಿತ್ತಿನೆಯಾದ ಹೆಸರು ಮತ್ತು ಶೇಂಗಾ ನೀರಿನಲ್ಲಿ ಮುಳುಗಿ ಹೋಗಿದೆ. ಅಣ್ಣಿಗೇರಿಯ ಬೈಪಾಸ್ ರಸ್ತೆಯಲ್ಲಿದ್ದ ಶೇಂಗಾ ರಾಶಿಗೆ ನೀರು ನುಗ್ಗಿ ಬೆಳೆ ನೀರು ಪಾಲಾಗಿದೆ. ರೈತರಿಗೆ ಸೂಕ್ತ ಬೆಲೆ ಇಲ್ಲದಿರುವುದು ಒಂದು ಕಡೆಯಾದರೆ ಮತ್ತೊಂದು ಕಡೆ ಈ ಮಳೆರಾಯನ ಕಾಟಕ್ಕೆ ರೈತರ ಜೀವನ ತತ್ತರಿಸಿ ಹೋಗಿದೆ. ಹಿಂಗಾರು ಬೆಳೆಗೆ ಭೂಮಿ ಹದಮಾಡಲು ರೈತರಿಗೆ ಸಾಧ್ಯವಾಗುತ್ತಿಲ್ಲ.