ಮಳೆಗೆ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ನೂರು ಕೋಟಿ ರೂ. ನಷ್ಟ: ಜಿ.ಟಿ.ದೇವೇಗೌಡ

11
Published on

ಮೈಸೂರು: ಎಡಬಿಡದೆ ಸುರಿಯುತ್ತಿರುವ ಮಳೆಯಿಂದ ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಅಂದಾಜು ನೂರು ಕೋಟಿ ರೂ. ನಷ್ಟವಾಗಿದೆ. 20 ಕೆರೆ ,18 ಸೇತುವೆ, 35 ಮನೆಗಳಿಗೆ ಹಾನಿಯಾಗಿದೆ ಎಂದು ಶಾಸಕ ಜಿ.ಟಿ.ದೇವೇಗೌಡ ತಿಳಿಸಿದರು.
ಮಳೆ ಹಾನಿ ಸಂಬಂಧಿಸಿದಂತೆ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಬುಧವಾರ ಅಧಿಕಾರಿಗಳ ಸಭೆ ನಡೆಸಿ ನಷ್ಟ, ಮಳೆಯಿಂದ ಅಗಿರುವ ತೊಂದರೆ ಕುರಿತು ಸಭೆ ಬಳಿಕ ಸುದ್ದಿಗಾರರೊಂದಿಗೆ ಅವರು ಮಾತನಾಡಿ ಮಾಹಿತಿ ನೀಡಿದರು.
ಮಳೆಯಿಂದ ಕ್ಷೇತ್ರದಲ್ಲಿಯೂ ಹಾನಿ ಉಂಟಾಗಿದ್ದು, ಜನರು ತೊಂದರೆ ಅನುಭವಿಸಿದ್ದಾರೆ. ಮೂಗನಹುಂಡಿ, ತಿಬ್ಬಯ್ಯನಹುಂಡಿ ಗ್ರಾಮಗಳ ರಸ್ತೆ ಸಂಪೂರ್ಣ ಹಾಳಾಗಿದೆ. ಮಳೆಗೆ ಸಿಲುಕಿ 2 ಸಾವಿರಕ್ಕೂ ಹೆಚ್ಚು ಕೋಳಿಗಳು ಮೃತಪಟ್ಟಿವೆ ಎಂದು ಬೇಸರ ವ್ಯಕ್ತಪಡಿಸಿದರು.
ಸಾಹುಕಾರ್ ಹುಂಡಿ, ಜೆಟ್ಟಿಹುಂಡಿ, ಹುಯಿಲಾಳು ಕೆರೆ ಕೋಡಿ ಬಿದ್ದು ಬೆಳೆ ಹಾಳಾಗಿದೆ. ಲಿಂಗಾಂಬುಧಿ ಕೋಡಿ ಬಿದ್ದು ಸಮೀಪದ ಬಡಾವಣೆಗಳ ನಿವಾಸಿಗಳು ತೊಂದರೆ ಸಿಲುಕಿದ್ದಾರೆ. ಸತತವಾಗಿ ಸುರಿಯುತ್ತಿರುವ ಮಳೆಯಿಂದ ಚಾಮುಂಡೇಶ್ವರಿ ವಿಧಾನಸಭಾ ವ್ಯಾಪ್ತಿಯಲ್ಲಿ ಅಂದಾಜು 100 ಕೋಟಿ ರೂ. ನಷ್ಟವಾಗಿದೆ ಎಂದು ಹೇಳಿದರು.
ಮಳೆ ಅನಾಹುತದಿಂದ ನನ್ನ ಕ್ಷೇತ್ರದಲ್ಲಿ ಅಗಿರುವ ನಷ್ಟದ ಕುರಿತು ಬಗ್ಗೆ ಎರಡು ದಿನಗಳ ಒಳಗೆ ಸಮಗ್ರ ವರದಿ ಸಲ್ಲಿಸುವಂತೆ ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್, ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ವರದಿ ಬಂದ ಬಳಿಕ ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ ಪರಿಹಾರ ನೀಡುವಂತೆ ಮನವಿ ಮಾಡುವುದಾಗಿ ಹೇಳಿದರು.
ಚಾಮುಂಡೇಶ್ವರಿ ಕ್ಷೇತ್ರದಲ್ಲಿ 100ಕ್ಕೂ ಹೆಚ್ಚು ಕೆರೆಗಳಿದ್ದು, ಮಳೆಯಿಂದ 20 ಕೆರೆಗಳು ಹಾನಿಯಾಗಿವೆ. ಕೆಲವು ಕೆರೆಗಳಲ್ಲಿ ಕೋಡಿ ಬಿದ್ದು ಬೆಳೆ ಹಾನಿಯಾಗಿದೆ. ರಸ್ತೆಗಳು ಹಾಳಾಗಿವೆ. ಕೇರನಹಳ್ಳಿ ಕೆರೆ ಒಡೆದು 18 ತೋಟ ಮುಳುಗಿವೆ. ಲೋಕೋಪಯೋಗಿ ಇಲಾಖೆ ವ್ಯಾಪ್ತಿಯ 16 ಸೇತುವೆಗಳು, ಜಿಲ್ಲಾ ಪಂಚಾಯಿತಿ ವ್ಯಾಪ್ತಿಗೆ ಸೇರಿದ 2 ಸೇತುವೆಗಳು ಹಾನಿಯಾಗಿವೆ. ಶೀಘ್ರ ದುರಸ್ತಿಗೆ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net