ಮಳೆಗಾಲದಲ್ಲಿ ವಿದ್ಯುತ್ ಸ್ಥಗಿತ ಬೇಡ

03SPT01
Published on

ಸೋಮವಾರಪೇಟೆ: ಮಳೆಗಾಲದಲ್ಲಿ ಯಾವುದೇ ಕಾರಣಕ್ಕೂ ವಿದ್ಯುತ್ ಸಂಪರ್ಕವನ್ನು ಕಡಿತಗೊಳಿಸಬಾರದು ಎಂದು ಶಾಸಕ ಡಾ.ಮಂತರ್‌ಗೌಡ ಸೂಚಿಸಿದರು.


ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಶನಿವಾರ ಆಯೋಜಿಸಿದ್ದ ಮಳೆಗಾಲದಲ್ಲಿ ಮನ್ನೆಚ್ಚರಿಕೆ ಕ್ರಮದ ಬಗ್ಗೆ ತಾಲೂಕು ಮಟ್ಟದ ಅಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿ, ವಿದ್ಯುತ್ ಬಿಲ್ ಪಾವತಿಸದ ನೆಪವೊಡ್ಡಿ, ಕೆಲ ಗ್ರಾಮ ಪಂಚಾಯಿತಿಗಳ ವಿದ್ಯುತ್ ಸಂಪರ್ಕವನ್ನು ಸೆಸ್ಕ್ ಕಡಿತಗೊಳಿಸುತ್ತಿದೆ. ಇದರಿಂದ ಆಡಳಿತ ವ್ಯವಸ್ಥೆಗೆ ಸಮಸ್ಯೆಯಾಗಿದೆ ಎಂದು ತಾಪಂ ಕಾರ್ಯನಿರ್ವಹಣಾಧಿಕಾರಿ ಜಯಣ್ಣ ಗಮನಕ್ಕೆ ತಂದಾಗ, ಶಾಸಕರು ಸೆಸ್ಕ್ ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದರು.


ಶಾಸಕನಾದ ನಾನು ಮೂರು ಬಾರಿ ಕಾಲ್ ಮಾಡಿದಾಗಲೂ, ನನ್ನ ಕರೆಯನ್ನು ಸ್ವೀಕರಿಸಿಲ್ಲ. ಇನ್ನು ಸಾರ್ವಜನಿಕರ ಕರೆಯನ್ನು ಸ್ವೀಕರಿಸುತ್ತಿರಾ? ಎಂದು ಸೆಸ್ಕ್ ಎಇಇ ಅಶೋಕ್ ಅವರನ್ನು ತರಾಟೆಗೆ ತೆಗೆದುಕೊಂಡರು. ಪ್ರತಿಯೊಬ್ಬರ ಕರೆಯನ್ನು ಸ್ವೀಕರಿಸಿ ಸಮಸ್ಯೆ ಆಲಿಸಬೇಕು ಎಂದು ಸೂಚಿಸಿದರು.


ಮಳೆಗಾಲ ಪ್ರಾರಂಭವಾಗುವುದಕ್ಕೆ ಮೊದಲು ರಾಜ್ಯ ಹೆದ್ದಾರಿ ಹಾಗೂ ಜಿಲ್ಲಾ ಪಂಚಾಯಿತಿ ರಸ್ತೆಗಳ ಚರಂಡಿಯನ್ನು ದುರಸ್ತಿ ಮಾಡಿಕೊಳ್ಳಬೇಕು. ಗುಂಡಿಗಳನ್ನು ಮುಚ್ಚುವ ಕಾಮಗಾರಿಗಳನ್ನು ಕೈಗೊಳ್ಳಬೇಕೆಂದು ಲೋಕೋಪಯೋಗಿ ಇಲಾಖೆ ಎಇಇ ವೆಂಕಟೇಶ್ ಹಾಗೂ ಜಿಲ್ಲಾ ಪಂಚಾಯಿತಿ ಇಂಜಿನಿಯರಿಂಗ್ ವಿಭಾಗದ ಎಇಇ ವೀರೇಂದ್ರ ಅವರಿಗೆ ಸೂಚಿಸಿದರು. ಇದುವರಗೆ ಕೈಗೊಂಡಿರುವ ಕಾಮಗಾರಿಗಳ ಬಗ್ಗೆ ಮಾಹಿತಿ ಪಡೆದುಕೊಂಡರು.


ಭತ್ತ ಕೃಷಿ ಪುನಶ್ಚೇತನಕ್ಕೆ ಸರ್ಕಾರ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ವರದಿಯನ್ನು ಸಿದ್ಧಪಡಿಸುವಂತೆ ಕೃಷಿ ಸಹಾಯಕ ನಿರ್ದೇಶಕ ಯಾದವ್ ಬಾಬು ಅವರಿಗೆ ಸೂಚಿಸಿದರು. ಕೋಲ್ಡ್ ಸ್ಟೊರೇಜ್ ಸ್ಥಾಪಿಸಿದರೆ ರೈತರು ಆಹಾರ ಬೆಳೆಗಳನ್ನು ಸಂಗ್ರಹಿಸಿಡಲು ಅನುಕೂಲವಾಗುತ್ತದೆ. ಈ ಬಗ್ಗೆ ಸರ್ಕಾರಕ್ಕೆ ಪ್ರಸ್ತಾವನೆ ಸಿದ್ಧಪಡಿಸಲು ತಹಸೀಲ್ದಾರ್ ಎಸ್.ಎನ್.ನರಗುಂದ ಅವರಿಗೆ ಸೂಚನೆ ನೀಡಿದರು.


ಸೋಮವಾರಪೇಟೆ ಹಾಗೂ ಕುಶಾಲನಗರ ಸೇರಿ 26 ಪಶು ಆಸ್ಪತ್ರೆಗಳಿದ್ದು 61 ಹುದ್ದೆಗಳಲ್ಲಿ 15 ಜನ ಕೆಲಸ ಮಾಡುತ್ತಿದ್ದೇವೆ. ಹತ್ತು ವೈದ್ಯರ ಪೈಕಿ ಇಬ್ಬರು ಕೆಲಸ ಮಾಡುತ್ತಿದ್ದಾರೆ. ಆದರೂ ಲಸಿಕಾ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದ್ದೇವೆ. ಜಾನುವಾರುಗಳಿಗೆ ರೋಗ ಬಾಧೆ ಹತೋಟಿಯಲ್ಲಿದೆ. ಮಳೆಗಾಲದಲ್ಲಿ ಸೂಕ್ತ ಚಿಕಿತ್ಸೆ ನೀಡಲು ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಪಶು ಆಸ್ಪತ್ರೆಯ ಸಹಾಯಕ ನಿರ್ದೇಶಕ ಎಸ್.ವಿ.ಬದಾಮಿ ಹೇಳಿದರು. ಖಾಲಿ ಹುದ್ದೆಗಳ ಪೂರ್ಣ ಮಾಹಿತಿ ನೀಡುವಂತೆ ಶಾಸಕರು ಸೂಚಿಸಿದರು. ಸುಂಟಿಕೊಪ್ಪದಲ್ಲಿ ಡೆಂೆ ಜ್ವರ ಕಾಣಿಸಿಕೊಂಡಿದೆ. 35 ಪ್ರಕರಣಗಳು ದಾಖಲಾಗಿವೆ. ಪಂಚಾಯಿತಿ ವ್ಯಾಪ್ತಿಯಲ್ಲಿ ಚರಂಡಿಗಳಲ್ಲಿ ನೀರು ಸಂಗ್ರಹವಾಗದಂತೆ ಎಚ್ಚರ ವಹಿಸಬೇಕು ಎಂದು ಶಾಸಕರು ಸೂಚಿಸಿದರು.


ವಸತಿ ಯೋಜನೆಯಲ್ಲಿ ಗೋಲ್‌ಮಾಲ್ ಆಗಿರುವ ಬಗ್ಗೆ ದೂರುಗಳಿದ್ದು, ಅಧಿಕಾರಿಗಳು ಮಾನವೀಯತೆಯಿಂದ ಕೆಲಸ ಮಾಡಬೇಕು. ಟಾರ್ಪಲ್ ಕಟ್ಟಿಕೊಂಡು ಬದುಕುತ್ತಿರುವ ಬಡವರಿಗೆ ಮೊದಲು ಮನೆಗಳನ್ನು ನಿರ್ಮಿಸಿಕೊಡಿ. ರಾಜಕೀಯ ಒತ್ತಡ ಹಾಗೂ ಅಮಿಷಗಳಿಗೆ ಬಲಿಯಾಗಿ ಮನೆಯಿದ್ದವರಿಗೆ ಮತ್ತೊಮ್ಮೆ ವಸತಿ ಯೋಜನೆಯಲ್ಲಿ ಮನೆ ಕೊಟ್ಟರೆ ಯೋಜನೆಗೆ ಅರ್ಥವಿರುವುದಿಲ್ಲ. ಇನ್ನು ದೂರುಗಳು ಬಂದರೆ ನಿರ್ದಾಕ್ಷಿಣ್ಯ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಶಾಸಕರು ಎಚ್ಚರಿಸಿದರು.

ಕುಶಾಲನಗರ ತಹಸೀಲ್ದಾರ್ ಪ್ರಕಾಶ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net