ಮಳೆಗಾಲದಲ್ಲಿ ಅಡಿಗಾಲುವೆ ನಿರ್ಮಾಣ

13 Dwd 3
Published on

ಮಂಜುನಾಥ ಅಂಗಡಿ ಧಾರವಾಡ

ಬಿಆರ್​ಟಿಎಸ್ ಯೋಜನೆ ಹಲವು ಅಧ್ವಾನ, ಅವಾಂತರ, ವಿಳಂಬ ನೀತಿಯಿಂದ ಸಾರ್ವಜನಿಕರ ಆಕ್ರೋಶಕ್ಕೆ ಗುರಿಯಾಗಿತ್ತು. ಅಂದಾಜು 2 ವರ್ಷ ಕಾಲ ಚಿಗರಿ ಬಸ್​ಗಳ ಪ್ರಾಯೋಗಿಕ ಸಂಚಾರ ನಡೆಸಿ ಕೊನೆಗೂ ಉದ್ಘಾಟನೆಗೊಂಡ ಬಿಆರ್​ಟಿಎಸ್ ಮಾರ್ಗದಲ್ಲಿ ಇಲ್ಲಿಯ ಟೋಲ್ ನಾಕಾ ವೃತ್ತದ ದುರವಸ್ಥೆ ಹಾಗೇ ಇದೆ.

ಮಳೆ ಬಂದಾಗೆಲ್ಲ ಟೋಲ್​ನಾಕಾ ಬಳಿ ರಸ್ತೆ ತುಂಬ ನೀರು ನಿಲ್ಲುತ್ತಿದೆ. ವಿದ್ಯಾಗಿರಿ, ಲಕ್ಷ್ಮೀಸಿಂಗನಕೇರಿ, ಸಾರಸ್ವತಪುರ, ಮಾಳಮಡ್ಡಿ, ಗೌಳಿಗಲ್ಲಿ ಭಾಗದ ಚರಂಡಿ ನೀರು ಟೋಲ್ ನಾಕಾಕ್ಕೆ ನುಗ್ಗುತ್ತದೆ. ವೃತ್ತದ ಗಾಂವಕರ ಕಟ್ಟಡದ ಅಡಿ ಸಣ್ಣ ಚರಂಡಿ ಇದ್ದು, ಅದರ ಮೂಲಕ ನೀರು ಶಿವಾನಂದ ನಗರ ಕಡೆ ಸಾಗಬೇಕು. ಆದರೆ ಚರಂಡಿ ತುಂಬ ತ್ಯಾಜ್ಯ ತುಂಬಿದೆ. ಇನ್ನು ರಸ್ತೆ ಮಧ್ಯೆ ನೀರು ಸಾಗಲು ಸಣ್ಣ ಪೈಪ್ ಅಳವಡಿಸಿದ್ದು, ನೀರು ಸರಾಗವಾಗಿ ಸಾಗಲು ಅಡ್ಡಿಯಾಗುತ್ತಿದೆ. ಪರಿಣಾಮ ಬಿಆರ್​ಟಿಎಸ್ ದ್ವಿಪಥ ಹಾಗೂ ಆಚೆ- ಈಚೆ ಇರುವ ಸಾರ್ವಜನಿಕ ರಸ್ತೆ ಸಂಪೂರ್ಣ ಜಲಾವೃತವಾಗುತ್ತಿದೆ. ಗಂಟೆಗಟ್ಟಲೇ ವಾಹನಗಳು ಹಾಗೂ ಪಾದಚಾರಿಗಳ ಸಂಚಾರ ಸ್ಥಗಿತಗೊಳ್ಳುತ್ತದೆ.

ಈಗ ಎಚ್ಚೆತ್ತರು: ಮಳೆಗಾಲ ಆರಂಭವಾದ ನಂತರ ಎಚ್ಚೆತ್ತುಕೊಂಡಿರುವ ಬಿಆರ್​ಟಿಎಸ್ ಅಧಿಕಾರಿಗಳು ಟೋಲ್ ನಾಕಾದಲ್ಲಿ ಅಡಿಗಾಲುವೆ ನಿರ್ಮಾಣ ಕಾಮಗಾರಿ ಆರಂಭಿಸಿದ್ದಾರೆ. ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮಕ್ಕೆ (ಕೆಆರ್​ಡಿಸಿಎಲ್) ಹೆಚ್ಚುವರಿ ಕಾಮಗಾರಿ ವಹಿಸಲಾಗಿದೆ. 22 ಲಕ್ಷ ರೂ. ವೆಚ್ಚದ ಕಾಮಗಾರಿಗಾಗಿ ಸಾರ್ವಜನಿಕ ರಸ್ತೆ ಹಾಗೂ ಬಿಆರ್​ಟಿಎಸ್ ದ್ವಿಪಥಗಳಲ್ಲಿ ಆಳದ ಗುಂಡಿ ತೋಡಲಾಗಿದೆ. ಕಾಮಗಾರಿಗೆ ಹತ್ತಾರು ಕೇಬಲ್​ಗಳು ಅಡ್ಡಿಯಾಗುತ್ತಿದ್ದು, ತುಂತುರು ಮಳೆಗೂ ಈಗ ಕೊರೆದಿರುವ ಗುಂಡಿ ತುಂಬಿಕೊಳ್ಳುತ್ತಿದೆ. ಕಾಮಗಾರಿಯ ಮೂಲ ನೀಲನಕ್ಷೆಯಲ್ಲೇ ಅಡಿಗಾಲುವೆ ನಿರ್ಮಾಣ ಹಾಕಿಕೊಂಡಿದ್ದರೆ 2-3 ವರ್ಷ ಈ ಸಮಸ್ಯೆಯಾದರೂ ತಲೆದೋರುತ್ತಿರಲಿಲ್ಲ.

ಶಾಸಕ ಅರವಿಂದ ಆಕ್ರೋಶ: ಬಿಆರ್​ಟಿಎಸ್ ಅವೈಜ್ಞಾನಿಕ ಕಾಮಗಾರಿಯ ವಿರುದ್ಧ ಸ್ಥಳೀಯ ಶಾಸಕ ಅರವಿಂದ ಬೆಲ್ಲದ ಇತ್ತೀಚೆಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರು. ಮಳೆಗಾಲದಲ್ಲಿ ರಸ್ತೆಗಳು ಜಲಾವೃತವಾಗುವುದನ್ನು ತಪ್ಪಿಸಲು ಯತ್ನಿಸದ ಅಧಿಕಾರಿಗಳ ಕಾರ್ಯವೈಖರಿಯನ್ನು ಟೀಕಿಸಿದ್ದರು. ಕರೊನಾ ಲಾಕ್​ಡೌನ್ ಸಂದರ್ಭದಲ್ಲಿ 3 ಬಾರಿ ಸಭೆ ಜರುಗಿಸಿ ರಸ್ತೆಗಳು ಜಲಾವೃತವಾಗದಂತೆ ಕ್ರಮ ಕೈಗೊಳ್ಳಲು ಸೂಚಿಸಿದ್ದರೂ ಸರಿಪಡಿಸಿಲ್ಲ ಎಂದು ಕಿಡಿ ಕಾರಿದ್ದರು.

ತೇಲಿ ಬರುತ್ತದೆ ತ್ಯಾಜ್ಯ: ಮಳೆಗಾಲದಲ್ಲಿ ಮೇಲಿನ ಭಾಗದಿಂದ ಹಲವು ಬಗೆಯ ತ್ಯಾಜ್ಯಗಳು ತೇಲಿಬರುತ್ತವೆ. ಹಳೇ ಗಾದಿ, ತಲೆದಿಂಬುಗಳು, ನಿರುಪಯೋಗಿ ಸೂಟ್​ಕೇಸ್, ಹಳೇ ಬಟ್ಟೆಗಳ ಗಂಟು, ಪ್ಲಾಸ್ಟಿಕ್ ತುಣುಕುಗಳು, ಕಸ- ಕಡ್ಡಿ ಹರಿದುಬಂದು ಜಮೆಯಾಗುತ್ತದೆ. ಇದರಿಂದ ಸಣ್ಣ ಸಣ್ಣ ಗಾತ್ರದ ಕಬ್ಬಿಣದ ಪೈಪ್ ಅಡಿ ತ್ಯಾಜ್ಯ ಭರ್ತಿಯಾಗಿ ನೀರು ನಿಲ್ಲುತ್ತದೆ. ನೀರು ಬಸಿದು ಹೋದ ನಂತರ ದುರ್ವಾಸನೆ ಸಾಮಾನ್ಯ.

ಟೋಲ್ ನಾಕಾ ಬಳಿ ಬಾಕ್ಸ್ ಕಲ್ವರ್ಟ್ ನಿರ್ವಿುಸಲಾಗುತ್ತಿದೆ. ಹು-ಧಾ ಪಾಲಿಕೆ ಹಾಗೂ ಬಿಆರ್​ಟಿಎಸ್ ಪ್ರಸ್ತಾವನೆಯ ಅನ್ವಯ ಕಾಮಗಾರಿ ಆರಂಭಿಸಲಾಗಿದೆ. ಅಂದಾಜು 22 ಲಕ್ಷ ರೂ. ವೆಚ್ಚದ ಹೆಚ್ಚುವರಿ ಕಾಮಗಾರಿ ಇದಾಗಿದ್ದು, ಶೀಘ್ರವಾಗಿ ಮುಗಿಸುವ ಗುರಿ ಇದೆ.| ಎನ್.ಕೆ. ಕುರಂದಕರ ಇಇ ಕೆಆರ್​ಡಿಸಿಎಲ್

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net