ಮಳೆಗಾಲ ಮುಗಿದ ಬಳಿಕ ರಸ್ತೆ ಅಭಿವೃದ್ಧಿ

17sor3
ಸೊರಬ ತಾಲೂಕಿನ ಕುಬಟೂರು ಗ್ರಾಮ ದೇವತೆ ಮಾಯಮ್ಮ ದೇವಸ್ಥಾನದ ಪ್ರವೇಶೋತ್ಸವದ ನಂತರ ಸಚಿವ ಮಧು ಬಂಗಾರಪ್ಪ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿದರು. ಅನ್ನಪೂರ್ಣಾ, ಮಂಜುಳಾ ಹೆಗಡಾಳ್, ಶಶಿಧರ್ ಇತರರಿದ್ದರು.
Published on

ಸೊರಬ: ರಸ್ತೆ ಅಭಿವೃದ್ಧಿ ಮತ್ತು ಡಾಂಬರೀಕರಣ ಕಾಮಗಾರಿ ಮಳೆಗಾಲ ಮುಗಿದ ಬಳಿಕ ನಡೆಯುತ್ತವೆ. ಅಲ್ಲಿಯವರೆಗೆ ಸಾರ್ವಜನಿಕರು ತಾಳ್ಮೆಯಿಂದ ಸಹಕರಿಸಬೇಕು ಎಂದು ಸಚಿವ ಮಧು ಬಂಗಾರಪ್ಪ ಮನವಿ ಮಾಡಿದರು.

ತಾಲೂಕಿನ ಕುಬಟೂರು ಗ್ರಾಮ ದೇವತೆ ಮಾಯಮ್ಮ ದೇವಸ್ಥಾನದ ಪ್ರವೇಶೋತ್ಸವದಲ್ಲಿ ಪಾಲ್ಗೊಂಡು, ನಂತರ ದೇವಸ್ಥಾನದ ಆವರಣದಲ್ಲಿ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿ ಮಾತನಾಡಿದರು.

ಮಳೆಯಿಂದ ತಾಲೂಕಿನ ಸಂಪರ್ಕ ರಸ್ತೆಗಳು ಹದೆಗೆಟ್ಟಿವೆ. ಸಾರ್ವಜನಿಕ ಸಭೆಯಲ್ಲಿ ದುರಸ್ತಿ ಕಾರ್ಯ ಮಾಡುವಂತೆ ಹೆಚ್ಚಿನ ಮನವಿ ಬಂದಿವೆ. ಅನುದಾನದ ಕೊರತೆ ಇಲ್ಲ. ಮಳೆಗಾಲ ಮುಗಿದ ಬಳಿಕವೇ ರಸ್ತೆ ಅಭಿವೃದ್ಧಿ ಕಾಮಗಾರಿ ಹಮ್ಮಿಕೊಳ್ಳಲಾಗುತ್ತದೆ ಎಂದರು.

ಕ್ಷೇತ್ರದ ಅಭಿವೃದ್ಧಿಗಾಗಿ ಮುಖ್ಯಮಂತ್ರಿಗಳು ಶಾಸಕರಿಗೆ 50 ಕೋಟಿ ರೂ. ವಿಶೇಷ ಅನುದಾನ ನೀಡಿದ್ದಾರೆ. ಅದರಲ್ಲಿ 45.5 ಕೋಟಿ ರೂ. ರಸ್ತೆ ಅಭಿವೃದ್ಧಿಗಾಗಿ ಮೀಸಲಿಡಲಾಗಿದೆ. ಉಳಿದ 4.5 ಕೋಟಿ ರೂ.ಗಳನ್ನು ಇತರ ಅಭಿವೃದ್ಧಿ ಕಾರ್ಯಗಳಿಗೆ ಬಳಸಲಾಗುವುದು ಎಂದು ತಿಳಿಸಿದರು.

ಸರ್ಕಾರದಿಂದ ಮತ್ತಷ್ಟು ಅನುದಾನದ ನಿರೀಕ್ಷೆಯಲ್ಲಿದ್ದೇವೆ. ಶಾಲೆಗಳ ಕೊಠಡಿ ದುರಸ್ತಿಗೂ ನೀಡಲಿದೆ. ಗುಣಮಟ್ಟದ ಶಿಕ್ಷಣದ ಜತೆಗೆ ಮೂಲ ಸೌಕರ್ಯ ಒದಗಿಸಲು ಕ್ರಮ ಕೈಗೊಳ್ಳಲಾಗಿದೆ. ಮಕ್ಕಳ ಸಂಖ್ಯೆ ತೀರಾ ಕಡಿಮೆ ಇರುವ ಶಾಲೆಗಳನ್ನು ಯಾವ ಕಾರಣಕ್ಕೂ ಮುಚ್ಚುವುದಿಲ್ಲ. ಒಂದೇ ಮಗುವಿನ ಹಾಜರಾತಿ ಇದ್ದರೂ ಒಬ್ಬ ಶಿಕ್ಷಕರ ಜತೆಗೆ ಬಿಸಿಯೂಟ ನೀಡಿ ಶಾಲೆ ಉಳಿಸಲಾಗುವುದು ಎಂದರು.

ಜಿಪಂ ಅಭಿವೃದ್ಧಿ ಅಕಾರಿ ಅನ್ನಪೂರ್ಣಾ, ತಹಸೀಲ್ದಾರ್ ಮಂಜುಳಾ ಹೆಗಡಾಳ್, ಇಒ ಶಶಿಧರ್, ಕೃಷಿ ಅಕಾರಿ ಕೆ.ಜಿ.ಕುಮಾರ್, ವಲಯ ಅರಣ್ಯಾಕಾರಿ ಜಾವಿದ್ ಬಾಷಾ, ಗುಪ್ತಾ ಎ. ಶೇಖ್, ಸಿಪಿಐ ಎಲ್.ಜಿ.ರಾಜಶೇಖರ್, ತಾಲೂಕು ಆರೋಗ್ಯಾಕಾರಿ ನವೀನ್, ಸಂತೋಷ್ ಇತರರಿದ್ದರು.

ಸೊರಬ ತಾಲೂಕಿನ ನೀರಾವರಿ ಯೋಜನೆಗಾಗಿ 163 ಕೋಟಿ ರೂ. ಅನುದಾನ ಬಿಡುಗಡೆಯಾಗಿದೆ. ವರದಾ ನದಿಗೆ ಅಡ್ಡಲಾಗಿ ಹೆಚ್ಚುವರಿ ಬ್ಯಾರೇಜ್ ನಿರ್ಮಾಣಕ್ಕೆ ಅನುಮೋದನೆ ಸಿಕ್ಕಿದೆ. ಈಗಾಗಲೇ ಸಣ್ಣಪುಟ್ಟ ಕಾಮಗಾರಿ ಆರಂಭವಾಗಿವೆ. ಬೇಸಿಗೆ ಪೂರ್ವದಲ್ಲಿ ಪೂರ್ಣ ಆರಂಭಿಸಲಾಗುವುದು.

ಮಧು ಬಂಗಾರಪ್ಪ, ಸಚಿವ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net