ಮಳೆಗಾಲ ಎದುರಿಸಲು ಪಾಲಿಕೆ ಸಿದ್ಧತೆ

h30-nala cleaning
Published on

ಹುಬ್ಬಳ್ಳಿ: ಕಳೆದ ವರ್ಷ ದಾಖಲೆಯ ಮಳೆಗೆ ಅವಳಿ ನಗರ ತತ್ತರಿಸಿ ಹೋಗಿತ್ತು. ಇದರಿಂದ ಸಾಕಷ್ಟು ಸವಾಲುಗಳನ್ನು ಎದುರಿಸಿದ್ದ ಹು-ಧಾ ಮಹಾನಗರ ಪಾಲಿಕೆ ಈ ಬಾರಿ ಮಳೆಗಾಲವನ್ನು ಎದುರಿಸಲು ಪೂರ್ವ ಸಿದ್ಧತೆ ಮಾಡಿಕೊಂಡಿದೆ. ವಿಶೇಷವಾಗಿ ಸಬ್​ವುರ್ಸಿಬಲ್ ಪಂಪ್, ಕಾಂಕ್ರೀಟ್ ಕಟರ್, ಟ್ರೀ ಕಟರ್ ಖರೀದಿಗೆ ಮುಂದಾಗಿದೆ.

ಭಾರತೀಯ ಹವಾಮಾನ ಇಲಾಖೆಯ ಪ್ರಕಾರ ಜೂನ್ 1ರಂದೇ ಕೇರಳ ಮೂಲಕ ಮುಂಗಾರು ಪ್ರವೇಶ ಪಡೆಯಲಿದೆ. ಕಳೆದ 2-3 ದಿನಗಳಿಂದ ಅವಳಿ ನಗರದ ಹವಾಮಾನದಲ್ಲಿ ಬದಲಾವಣೆ ಕಾಣಿಸಿಕೊಂಡಿದೆ. ಮೋಡ ಕವಿದ ವಾತಾವರಣ ಇದೆ. ಜೂನ್ ತಪ್ಪಿದರೆ ಜುಲೈನಲ್ಲಿ ದೊಡ್ಡ ಮಳೆಯಾಗುವುದು ಇಲ್ಲಿ ಸಾಮಾನ್ಯ. ಆದರೆ, ಕಳೆದ ವರ್ಷ ಆಗಸ್ಟ್​ನಲ್ಲಿ ದಾಖಲೆಯ ಮಳೆಯಾಗಿತ್ತು. ಅಪಾರ ಹಾನಿ ಸಂಭವಿಸಿತ್ತು. ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದ್ದವು. ನೂರಾರು ಜನರನ್ನು ಸ್ಥಳಾಂತರಿಸಲಾಗಿತ್ತು.

ಈ ಬಾರಿ ಮಳೆಗಾಲದಲ್ಲಿ ಸಂಭವನೀಯ ಅಪಾಯಗಳನ್ನು ಎದುರಿಸಲು ಪಾಲಿಕೆ ಸನ್ನದ್ಧವಾಗಿದೆ. ಪ್ರತಿ ವಲಯ ಕಚೇರಿ ವ್ಯಾಪ್ತಿಗೆ ಪ್ರತ್ಯೇಕ 2 ತಂಡಗಳನ್ನು ರಚನೆ ಮಾಡಲಾಗಿದೆ. ವಲಯ ಕಚೇರಿ ಸಹಾಯಕ ಆಯುಕ್ತರ ನೇತೃತ್ವದ ತಂಡದಲ್ಲಿ ಇಂಜಿನಿಯರ್, ಆರೋಗ್ಯ ನಿರೀಕ್ಷಕರು, ಪರಿಸರ ಇಂಜಿನಿಯರ್ ಹಾಗೂ 4-5 ಜನ ಪೌರ ಕಾರ್ವಿುಕರು ಇರಲಿದ್ದಾರೆ. ಈ ತಂಡ ಮಧ್ಯಾಹ್ನ 2ರಿಂದ ಮಾರನೇ ದಿನ ಬೆಳಗ್ಗೆ 6 ಗಂಟೆಯವರಿಗೆ ಕಾರ್ಯನಿರ್ವಹಿಸಲಿದೆ. ಬೆ. 6ರಿಂದ ಮ. 2ರ ವರೆಗೆ ಪಾಲಿಕೆಯ ನಿಯಮಿತ ಸಿಬ್ಬಂದಿ ಕ್ಷೇತ್ರದಲ್ಲಿ ಇರಲಿದ್ದಾರೆ.

ನೀರು ಹೊರ ಹಾಕಲು ಪಂಪ್ : ಪಾಲಿಕೆ ಆಡಳಿತದಲ್ಲಿ 12 ವಲಯ ಕಚೇರಿಗಳಿವೆ. ಪ್ರತಿ ವಲಯ ಕಚೇರಿಗೆ ತಲಾ ಎರಡರಂತೆ 5 ಎಚ್​ಪಿ ಸಾಮರ್ಥ್ಯದ 24 ಸಬ್​ವುರ್ಸಿಬಲ್ ಪಂಪ್, ತಲಾ ಒಂದರಂತೆ ಟ್ರೀ ಕಟರ್ ಹಾಗೂ ಒಟ್ಟಾರೆ -5-6 ಕಾಂಕ್ರೀಟ್ ಕಟರ್ ಖರೀದಿಸಲು ಪಾಲಿಕೆ ಮುಂದಾಗಿದೆ. ಕಳೆದ ವರ್ಷ ಹುಬ್ಬಳ್ಳಿಯಲ್ಲಿ ವಿದ್ಯಾನಗರ, ಶಿರೂರ ಪಾರ್ಕ್, ಅಕ್ಷಯ ಪಾರ್ಕ್, ಇನ್ನಿತರ ಬಡಾವಣೆಗಳ ಅಪಾರ್ಟ್​ವೆುಂಟ್ ರ್ಪಾಂಗ್ ಸ್ಥಳ ಜಲಾವೃತಗೊಂಡಿದ್ದವು. ಇಲ್ಲಿ ಸಂಗ್ರಹವಾಗಿದ್ದ ನೀರನ್ನು ಹೊರ ಹಾಕಲು ಅಪಾರ್ಟ್​ವೆುಂಟ್ ನಿವಾಸಿಗಳು ಹೆಣಗಾಡಿದ್ದರು. ಪೂರ್ಣ ನೀರು ಹೊರ ಹಾಕಲು ಕೆಲವು ಅಪಾರ್ಟ್​ವೆುಂಟ್​ಗಳು 3 ದಿನಗಳನ್ನು ತೆಗೆದುಕೊಂಡಿದ್ದವು. ಈ ಬಾರಿ ಇಂಥಾ ಪರಿಸ್ಥಿತಿ ಎದುರಾದಲ್ಲಿ ಅಪಾರ್ಟ್​ವೆುಂಟ್ ನಿವಾಸಿಗಳಿಗೆ ನೆರವಾಗಲು ಪಾಲಿಕೆ ಸಬ್​ವುರ್ಸಿಬಲ್ ಪಂಪ್ ಖರೀದಿಸಲಿದೆ. ಹಗ್ಗ, ಬ್ಯಾಟರಿ, ಸಲಾಕೆ, ವಾಟರ್ ಪ್ರೂಫ್ ಜಾಕೆಟ್, ಇನ್ನಿತರ ಸಾಮಗ್ರಿಗಳು ಈಗಾಗಲೇ ಪಾಲಿಕೆ ಬಳಿ ಇವೆ.

ಕಳೆದ ಒಂದೂವರೆ ತಿಂಗಳಿಂದ ಟಾಟಾ ಹಿಟಾಚಿ ಕಂಪನಿ ನೆರವಿನಿಂದ ಹುಬ್ಬಳ್ಳಿಯಲ್ಲಿ ನಾಲಾ ಹೂಳೆತ್ತುವ ಕೆಲಸ ಆರಂಭವಾಗಿದೆ. ಪಾಲಿಕೆಯಿಂದ ಗಟಾರ ಸ್ವಚ್ಛಗೊಳಿಸುವ ಕೆಲಸ ಕೈಗೆತ್ತಿಕೊಳ್ಳಲಾಗಿದೆ. 2019ರಲ್ಲಿ ಭಾರಿ ಮಳೆಗೆ ಉಣಕಲ್ ಕೆರೆ ಕೋಡಿ ಹರಿದು ನಾಲಾಗಳು ತುಂಬಿ ಹರಿದಿದ್ದವು. ನಾಲಾದ ಅಕ್ಕ ಪಕ್ಕದ ಪ್ರದೇಶ ಮುಳುಗಡೆಯಾಗಿದ್ದವು. ಈ ಬಾರಿ ಲಾಕ್​ಡೌನ್ ನಡುವೆಯೂ ನಾಲಾ ಹೂಳೆತ್ತುವ ಕೆಲಸ ಕೈಗೆತ್ತಿಕೊಳ್ಳಲಾಗಿದೆ. ಅದು ಈಗಲೂ ಮುಂದುವರಿದಿದೆ. ವಾರಕ್ಕೆ 1-2 ಬಾರಿ ನಡೆಸುವ ಗಟಾರ ಹೂಳೆತ್ತುವ ಕೆಲಸವನ್ನು ಇನ್ನಷ್ಟು ತೀವ್ರಗೊಳಿಸಬೇಕೆಂಬ ಆಗ್ರಹವೂ ಇದೆ. ಉಣಕಲ್ ಕೆರೆ ಉಕ್ಕಿ ಹರಿದು ಉಣಕಲ್-ಹುಲಿಕೊಪ್ಪ, ದೇವಿನಗರ, ಬನಶಂಕರಿ ಬಡಾವಣೆ ಸೇರಿ 4 ಕಡೆ ನಾಲಾ ಮೇಲಿನ ಸೇತುವೆ ಮುರಿದು ಬಿದ್ದದ್ದವು. ಜೂನ್ 15ರೊಳಗೆ 3 ಕಡೆ ಹೊಸ ಸೇತುವೆ ನಿರ್ಮಾಣ ಕಾರ್ಯ ಪೂರ್ಣಗೊಳ್ಳಲಿದೆ. ಜುಲೈನಲ್ಲಿ ಇನ್ನೊಂದು ಸೇತುವೆ ನಿರ್ಮಾಣ ಕೆಲಸ ಮುಗಿಯಲಿದೆ.

ಮಳೆಗಾಲದ ಸಂಭವನೀಯ ಅಪಾಯಗಳನ್ನು ಎದುರಿಸಲು ಈಗಾಗಲೇ 2 ಬಾರಿ ಅಧಿಕಾರಿಗಳೊಂದಿಗೆ ಸಭೆ ನಡೆಸಿದ್ದೇವೆ. ಜಿಲ್ಲಾಡಳಿತ ಒಮ್ಮೆ ಸಭೆ ನಡೆಸಿ ಸೂಕ್ತ ನಿರ್ದೇಶನ ನೀಡಿದೆ. ಅದರಂತೆ ಮುನ್ನೆಚ್ಚರಿಕೆ ಕ್ರಮ ಕೈಗೊಂಡಿದ್ದೇವೆ. ಹೆಸ್ಕಾಂ-ಅರಣ್ಯ ಇಲಾಖೆ ಸಹಯೋಗದೊಂದಿಗೆ ರಸ್ತೆ ಬದಿಯ ಅಪಾಯಕಾರಿ ಮರ-ಗಿಡಗಳ ರೆಂಬೆ ಕಡಿತಗೊಳಿಸುವ ಕೆಲಸ ಕೈಗೊಂಡಿದ್ದೇವೆ. | ಡಾ. ಸುರೇಶ ಇಟ್ನಾಳ ಆಯುಕ್ತರು ಹುಧಾಮಪಾ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net