

ಹಗರಿಬೊಮ್ಮನಹಳ್ಳಿ: ತಾಲೂಕಿನ ಹಂಪಾಪಟ್ಟಣ ಗ್ರಾಮದಲ್ಲಿ ಶ್ರೀಶರಣ ಬಸವೇಶ್ವರ ಸೇವಾ ಸಮಿತಿ ಹಾಗೂ ಸಾಂಸ್ಕೃತಿಕ ಟ್ರಸ್ಟ್ ಸೋಮವಾರ ಮಳೆಗಾಗಿ ಪ್ರಾರ್ಥಿಸಿ ಶರಣಬಸವೇಶ್ವರ ಪೂಜೆ ನಡೆಸಿತು. ಈ ಬಾರಿ ಮುಂಗಾರು ಮಳೆ ಕೆಲವೆಡೆ ಅತಿವೃಷ್ಟಿ ಅನಾವೃಷ್ಟಿ ಸೃಷ್ಟಿಸಿದೆ.
ಇದುವರೆಗೂ ತಾಲೂಕಿನಾದ್ಯಂತ ಹದವಾದ ಮಳೆಯೇ ಆಗಿಲ್ಲ. ಆಷಾಢದ ಈ ಪುನರ್ವಸು ಮಳೆಯೂ ಸಮೃದ್ಧಿಯಾಗಿಲ್ಲ. ಈಗಾಗಲೇ ಬಿತ್ತಿರುವ ಸೇಂಗಾ, ಸೂರ್ಯಕಾಂತಿ, ಮೆಕ್ಕೆಜೋಳ, ಜೋಳ, ರಾಗಿ, ಸಜ್ಜಿ, ಸಣ್ಣ ಪೈರುಗಳು ಆಷಾಢ ಗಾಳಿಗೆ ಹೊಡೆತಕ್ಕೆ ಬಾಡಿಹೋಗುತ್ತಿವೆ. ಸಾಲ ಮಾಡಿ ಬೀಜ ಗೊಬ್ಬರ ತಂದು ಬಿತ್ತಿದ ಬೆಳೆ ಕಣ್ಣೆದುರೇ ಒಣಗುವುದನ್ನು ನೋಡುವ ದುಸ್ಥಿತಿ ರೈತರದಾಗಿದ್ದು, ವರುಣನ ಕೃಪೆಗಾಗಿ ದೈವದ ಮೊರೆ ಹೋಗಿದ್ದೇವೆ ಎಂದು ರೈತರು ಹೇಳಿದರು.