

ಹನೂರು: ತಾಲೂಕಿನ ಶಾಗ್ಯ ಗ್ರಾಮದಲ್ಲಿ ಮಳೆಗೆ ಪ್ರಾರ್ಥಿಸಿ ಭಾನುವಾರ ವಿಶೇಷ ಆಚರಣೆ ನಡೆಯಿತು.
ಮಕ್ಕಳು ಬಸವಮೂರ್ತಿಯನ್ನು ಹೊತ್ತು ಸಾಗಿದರೆ, ಗಂಡು, ಹೆಣ್ಣಿನ ಪಾತ್ರಧಾರಿಗಳು ಕತ್ತೆಯೊಂದಿಗೆ ನೇಗಿಲು ಹಾಗೂ ರಾಗಿ ಅಂಬಲಿ ಬುಟ್ಟಿ ಹಿಡಿದು ಮೆರವಣಿಗೆ ನಡೆಸಿದರು. ಶಾಗ್ಯ ಭಾಗದಲ್ಲಿ 2 ತಿಂಗಳ ಹಿಂದೆ ರಾಗಿ, ಮುಸುಕಿನ ಜೋಳ, ಹುರುಳಿ ಹಾಗೂ ಕಡಲೆಕಾಯಿ ಬಿತ್ತನೆ ಮಾಡಿದ್ದು, ಪೈರುಗಳು ಬಂದಿವೆ. ಒಂದು ತಿಂಗಳಿನಿಂದ ಮಳೆಯಾಗದ ಕಾರಣ ಪೈರುಗಳು ಬಿಸಿಲಿನ ತಾಪಕ್ಕೆ ಒಣಗುತ್ತಿದ್ದವು. ಹಾಗಾಗಿ ಶನಿವಾರ ಮನೆಗಳಿಂದ ರಾಗಿ, ಹುರಳಿ ಹಾಗೂ ಇನ್ನಿತರೆ ಆಹಾರ ಪದಾರ್ಥಗಳನ್ನು ಸಂಗ್ರಹಿಸಿ ಬೆಳಗ್ಗೆ ರಾಗಿ ಅಂಬಲಿಯನ್ನು ತಯಾರಿಸಿ ಹುರುಳಿ ಬೇಯಿಸಲಾಗಿತ್ತು.
ಬೆಳಗ್ಗೆ ಗ್ರಾಮದ ವಾಡೆ ಮಲ್ಲೇಶ್ವರ ಸ್ವಾಮಿ ದೇಗುಲದಲ್ಲಿ ಗ್ರಾಮಸ್ಥರು ವಿಶೇಷ ಪೂಜೆ ಸಲ್ಲಿಸಿದರು. ಬಳಿಕ ಬಸವಮೂರ್ತಿಯನ್ನು ಹೊತ್ತ ಮಕ್ಕಳು ಮನೆ ಮನೆಗೆ ತೆರಳಿ ನೀರುಗೈದರು. ಬಳಿಕ ವಿವಿಧ ಅಲಂಕಾರದಿಂದ ಸಿಂಗರಿಸಿದ್ದ ಎತ್ತಿನಗಾಡಿಯಲ್ಲಿ ರಾಗಿ ಅಂಬಲಿ ಹಾಗೂ ಬೇಯಿಸಿದ ಹುರುಳಿಯನ್ನು ಇರಿಸಿ ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಲಾಯಿತು. ಈ ವೇಳೆ ಪುರುಷ ಪಾತ್ರಧಾರಿ ಮಹದೇವಸ್ವಾಮಿ, ಮಹಿಳೆ ಪಾತ್ರಧಾರಿ ಪ್ರಕಾಶ್‌ಮೂರ್ತಿ ರಾಗಿ ಅಂಬಲಿಯ ಬುಟ್ಟಿ ಹಾಗೂ ನೇಗಿಲನ್ನು ಹಿಡಿದು ತಮಟೆಯ ತಾಳಕ್ಕೆ ತಕ್ಕಂತೆ ಹೆಜ್ಜೆ ಹಾಕಿದರು. ಗ್ರಾಮಸ್ಥರು ಹುಯ್ಯೋ ಹುಯ್ಯೋ ಮಳೆರಾಯ, ಹೂವಿನ ತೋಟಕ್ಕೆ ನೀರಿಲ್ಲ ಎಂದು ಘೋಷಣೆಗಳನ್ನು ಕೂಗಿದರು. ಪ್ರತಿ ಮನೆಗೂ ರಾಗಿ ಅಂಬಲಿ ಹಾಗೂ ಬೇಯಿಸಿದ ಹುರುಳಿ ನೀಡಲಾಯಿತು. ಬಳಿಕ ಗ್ರಾಮದ ಕೆರೆಯಲ್ಲಿ ಮಡಿಕೆಯನ್ನು ಒಡೆಯುವುದರ ಮೂಲಕ ಗ್ರಾಮಸ್ಥರು ಮಳೆಗಾಗಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು.