

ಚಿಕ್ಕಮಗಳೂರು: ಮಲೆನಾಡಲ್ಲಿ ಸುರಿದ ಧಾರಾಕಾರ ಮಳೆಗೆ ಕೆರೆಗಳು ಭರ್ತಿಯಾಗಿ ನದಿಗಳು ಮೈದುಂಬಿ ಹರಿಯುತ್ತಿದ್ದರೂ ಬಯಲು ಭಾಗದಲ್ಲಿ ಮಾತ್ರ ವರುಣ ಕೃಪೆ ತೋರದಿರುವುದರಿಂದ ಜನರಲ್ಲಿ ಆತಂಕ ಮನೆಮಾಡಿದೆ.
ಬಯಲು ಭಾಗದಲ್ಲಿ ಆಗಾಗ ಮಳೆ ಆಗುತ್ತಿರುವುದರಿಂದ ಕೃಷಿ ಚಟುವಟಿಕೆಗೆ ಸಮಸ್ಯೆಯಾಗಿಲ್ಲ. ಕೆರೆಗಳು ತುಂಬಿದರೆ ಮಾತ್ರ ಅಂತರ್ಜಲ ವೃದ್ಧಿಯಾಗುವುದರಿಂದ ಬೇಸಿಗೆಯಲ್ಲಿ ಜನ, ಜಾನುವಾರುಗಳಿಗೆ ಕುಡಿಯುವ ನೀರಿಗೆ ತತ್ವಾರ ಉಂಟಾಗುವ ಸಾಧ್ಯತೆ ಇದೆ.
ಜಿಲ್ಲೆಯಲ್ಲಿ ಸಣ್ಣ ನೀರಾವರಿ ಇಲಾಖೆ ಹಾಗೂ ಜಿಪಂ ವ್ಯಾಪ್ತಿಗೆ ಸೇರಿದ ಒಟ್ಟು 1,898 ಕೆರೆಗಳಲ್ಲಿ ಕೊಪ್ಪ 474, ಎನ್.ಆರ್.ಪುರ 469, ಶೃಂಗೇರಿ 154, ಮೂಡಿಗೆರೆ 217ರಲ್ಲಿ ಎರಡು ಕೆರೆ ಹೊರತುಪಡಿಸಿ ಮಲೆನಾಡಿನ ಬಹುತೇಕ ಕೆರೆಗಳು ಸಂಪೂರ್ಣ ಭರ್ತಿಯಾಗಿವೆ.
ಚಿಕ್ಕಮಗಳೂರಿನ 319ರಲ್ಲಿ 170 ತುಂಬಿದ್ದು, ಕಳಸಾಪುರ ಕೆರೆ ಹೊರತುಪಡಿಸಿ ಉಳಿದವುಗಳಲ್ಲಿ ಶೇ.20ರಷ್ಟು ಮಾತ್ರ ನೀರಿದೆ. ತರೀಕೆರೆಯ 160ರಲ್ಲಿ 10 ಕೆರೆಗಳು, ಕಡೂರಿನ 97ರ ಪೈಕಿ 2 ಕೆರೆಗಳು ಮಾತ್ರ ಭರ್ತಿಯಾಗಿವೆ. ಬಯಲು ಪ್ರದೇಶದ 50 ಕೆರೆಗಳಲ್ಲಿ ಶೇ.20ರಿಂದ 30ರಷ್ಟು ನೀರಿದ್ದರೆ 30ರಲ್ಲಿ ಕೇವಲ ಶೇ.5ರಿಂದ 10ರಷ್ಟು ನೀರು ಸಂಗ್ರಹವಾಗಿದೆ.
ದಶಕದಿಂದ ತುಂಬದ ನೆಟ್ಟೆಕೆರೆಹಳ್ಳಿ ಕೆರೆ: ಒಂದು ದಶಕದಿಂದ ಚಿಕ್ಕಮಗಳೂರು ತಾಲೂಕಿನ ಸಗನೀಪುರದ ರಂಗನಾಥಸ್ವಾಮಿ ಗುಡ್ಡದಲ್ಲಿ ವಾಡಿಕೆ ಮಳೆಯಾಗದೆ ಕೆರೆಗೆ ನೀರು ಬಂದಿಲ್ಲ. ನೆಟ್ಟೆಕೆರೆಹಳ್ಳಿ ಕೆರೆ ಅಚ್ಚುಕಟ್ಟು ಪ್ರದೇಶದ ನೂರಾರು ಎಕರೆ ಗದ್ದೆಯಲ್ಲಿ ಭತ್ತದ ಬೆಳೆ ಕಣ್ಮರೆಯಾಗಿ ಮಳೆಯಾಶ್ರಿತ ತರಕಾರಿ ಬೆಳೆಯುತ್ತಿದ್ದಾರೆ. ನೂರಾರು ಅಡಿ ಬೋರ್ವೆಲ್ ಕೊರೆದರೂ ನೀರು ಹನಿ ನೀರು ಸಿಗುತ್ತಿಲ್ಲ. ಹಾಗಾಗಿ ತೋರಣಮಾವು, ಕೋಟೆವೂರು, ಹುಣಸೇಮಕ್ಕಿ, ಹೆಡದಾಳು, ಹಳಿಯೂರು ಮಾಗರವಳ್ಳಿ ಸೇರಿ ಮುಂತಾದೆಡೆ ಮೂರ್ನಾಲ್ಕು ವರ್ಷಗಳಿಂದ ಗದ್ದೆಗಳಲ್ಲಿ ಭತ್ತ ಬೆಳೆಯುವುದನ್ನೆ ಕೈಬಿಟ್ಟಿದ್ದಾರೆ.
ಬಯಲುಸೀಮೆಯಲ್ಲಿ ಕೃಷಿಗಷ್ಟೇ ಮಳೆ: ಜಿಲ್ಲೆಯ ಕೊಪ್ಪ, ಶೃಂಗೇರಿಯಲ್ಲಿ ವಾಡಿಕೆಗಿಂತ ಕಡಿಮೆ ಮಳೆಯಾದರೂ ಹಳ್ಳ, ನದಿ, ತೊರೆಗಳು, ತುಂಗಾ, ಭದ್ರಾ ನದಿಯಲ್ಲಿ ನೀರಿನ ಹರಿವು ಅಧಿಕವಿದೆ. ಬಯಲು ಭಾಗದ ಕಡೂರು, ತರೀಕೆರೆಯಲ್ಲಿ ವಾಡಿಕೆಗಿಂತ ಅಧಿಕ ಮಳೆಯಾದರೂ ಅದು ಕೃಷಿ ಚಟುವಟಿಕೆಗೆ ಮಾತ್ರ ಸೀಮಿತವಾಗಿದೆ. ಮಲೆನಾಡಲ್ಲಿ ಶೇ.50ರಿಂದ 60ರಷ್ಟು ಪ್ರದೇಶದಲ್ಲಿ ಕಾಫಿ ಬೆಳೆಯಲಾಗುತ್ತಿದೆ. ಉಳಿದ 40 ರಷ್ಟು ಭಾಗದಲ್ಲಿ ಬೆಳೆಯುತ್ತಿದ್ದ ಭತ್ತದ ಜಮೀನುಗಳನ್ನು ಪಾಳು ಬಿಡಲಾಗಿದೆ. ಭತ್ತ ಬೆಳೆಯುತ್ತಿದ್ದ ವಸ್ತಾರೆ, ಖಾಂಡ್ಯ, ಆವತಿ, ಕಸಬಾ ಸೇರಿದಂತೆ ಶೇ.50ಕ್ಕಿಂತ ಹೆಚ್ಚು ಜನರು ಕಾಫಿ, ಅಡಕೆ ಹಾಕಿ ತೋಟಗಾರಿಕಾ ಬೆಳೆಗಳತ್ತ ಮುಖ ಮಾಡಿದ್ದಾರೆ.
ಭತ್ತ ಬೆಳೆಯಲು ನಿರಾಸಕ್ತಿ: 8 ಎಕರೆ ತರಿ ಜಮೀನಿನಲ್ಲಿ ಭತ್ತ ಬೆಳೆಯಲು ವರ್ಷಕ್ಕೆ ಒಂದು ಹೆಕ್ಟೇರ್ಗೆ 60ರಿಂದ 70 ಸಾವಿರ ರೂ. ಖರ್ಚು ಮಾಡಿದರೂ 30 ಸಾವಿರ ಆದಾಯ ಬರುತ್ತಿತ್ತು. ಸಸಿ, ನಾಟಿಗೆ, ಕಳೆ ಕೀಳಲು, ಕೊಯ್ಲು, ಕಾರ್ವಿುಕರಿಗೆ ಕೂಲಿ ಹಣ ನೀಡಲು ಆದಾಯ ಸಾಕಾಗುತ್ತಿರಲಿಲ್ಲ. ಜತೆಗೆ ಮಳೆ ಅಭಾವದಿಂದ ಭತ್ತ ಬೆಳೆಯುವುದನ್ನು ಕೈಬಿಟ್ಟು ಅಡಕೆ, ಕಾಫಿ, ಬಾಳೆ ಹಾಕಲಾಗಿದೆ. ಈ ಬೆಳೆಗಳಿಗೆ ಒಮ್ಮೆ ಬಂಡವಾಳ ತೊಡಗಿಸಿ ಅದನ್ನೇ ನಿರ್ವಹಣೆ ಮಾಡಿಕೊಂಡು ಸಾಗಿದರೆ 5 ರಿಂದ 6 ದಶಕದವರೆಗೆ ಪ್ರತಿ ವರ್ಷ ಫಸಲು ಕಾಣಬಹುದು. ಮಳೆ ಕೊರತೆಯಿಂದ ತೋರಣಮಾವು ಭಾಗದ 80 ಎಕರೆ ತರಿ ಜಮೀನಿನಲ್ಲಿ ಕೇವಲ ನಾಲ್ಕು ಎಕರೆ ಭತ್ತ ನಾಟಿ ಮಾಡಲಾಗಿದೆ ಎನ್ನುತ್ತಾರೆ ಕೃಷಿಕ ಲಕ್ಷ್ಮಣ್ ಗೌಡ.