ಮಳೆ ಹಾನಿ, ಸಮಗ್ರ ವರದಿ ಸಲ್ಲಿಸಿ

PH 04
Published on

ಚಿತ್ತಾಪುರ: ಕಳೆದೊಂದು ವಾರ ಸತತ ಮಳೆ ಸುರಿದಿದ್ದು, ಜಿಲ್ಲಾದ್ಯಂತ ಸಾಕಷ್ಟು ಹಾನಿ ಸಂಭವಿಸಿದೆ. ಸ್ಥಳೀಯ ಅಧಿಕಾರಿಗಳು ಎಲ್ಲೆಡೆ ಸಂಚರಿಸಿ ಸಮಗ್ರ ವರದಿ ಸಲ್ಲಿಸಬೇಕು ಎಂದು ಜಿಲ್ಲಾಧಿಕಾರಿ ಫೌಜಿಯಾ ತರನ್ನುಮ್ ಸೂಚನೆ ನೀಡಿದರು.

ಗುಂಡಗುರ್ತಿ ಹಾಗೂ ದಂಡೋತಿ ಗ್ರಾಮಗಳಿಗೆ ಭಾನುವಾರ ಭೇಟಿ ನೀಡಿ ಮಳೆಯಿಂದ ಹಾನಿಗೊಳಗಾದ ಬೆಳೆ, ಮನೆ ಹಾಗೂ ಶಾಲೆಗಳನ್ನು ಪರಿಶೀಲಿಸಿದ ಅವರು, ಮಳೆಯಿಂದ ಕುಸಿದಿರುವ ಮನೆಗಳ ಸಮೀಕ್ಷೆ ಮಾಡಿ, ಸರ್ಕಾರದ ಮಾರ್ಗಸೂಚಿಯಂತೆ ಕೂಡಲೇ ಪರಿಹಾರ ನೀಡಬೇಕು. ಅಲ್ಲದೆ ಬೆಳೆ ಹಾನಿ ಬಗ್ಗೆ ವರದಿ ತಯಾರಿಸಿ ಸಲ್ಲಿಸಬೇಕು ಎಂದು ಹೇಳಿದರು.

ನದಿಯ ನೀರಿನ ರಭಸದಿಂದಾಗಿ ದಂಡೋತಿ ಬಳಿಯ ಕಾಗಿಣಾ ಸೇತುವೆ ಮೇಲಿನ ರಸ್ತೆ ಕಿತ್ತು ಹೋಗಿದ್ದು, ಕೂಡಲೇ ದುರಸ್ತಿಗೆ ಕ್ರಮ ಕೈಗೊಳ್ಳಬೇಕು. ಅಲ್ಲದೆ ಸೇತುವೆ ಮೇಲೆ ಹಾದು ಹೋಗಿರುವ ವಿದ್ಯುತ್ ವೈರ್‌ಗಳನ್ನು ಸರಿಪಡಿಸಿ. ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸುವ ಕೆಲಸ ಮಾಡಿ ಎಂದು ತಾಕೀತು ಮಾಡಿದರು.

ಸಹಾಯಕ ಆಯುಕ್ತ ಆಶಪ್ಪ ಪೂಜಾರಿ, ತಹಸೀಲ್ದಾರ್ ಸೈಯ್ಯದ್ ಷಾಷಾವಲಿ, ತಾಪಂ ಇಒ ನೀಲಗಂಗಾ ಬಬಲಾದ, ಸಹಾಯಕ ಕೃಷಿ ನಿರ್ದೇಶಕ ಸಂಜೀವಕುಮಾರ ಮಾನಕರ, ಕ್ಷೇತ್ರ ಶಿಕ್ಷಣಾಧಿಕಾರಿ ಸಿದ್ದವೀರಯ್ಯ ರುದ್ನೂರ, ಲೋಕೋಪಯೋಗಿ ಇಲಾಖೆ ಅಣ್ಣಪ್ಪ ಕುದುರಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net