

ಚಿತ್ರದುರ್ಗ: ಮಳೆಯಿಂದ ಹಾನಿಗೊಳಗಾದ ಚಿತ್ರದುರ್ಗ ತಾಲೂಕಿನ ಓಬಣ್ಣನಹಳ್ಳಿ, ಚಳ್ಳಕೆರೆ ನಗರ ಹಾಗೂ ತಾಲೂಕಿನ ಮನಮೈನಹಟ್ಟಿ ಪ್ರದೇಶಗಳಿಗೆ ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಬುಧವಾರ ಭೇಟಿ ನೀಡಿ ಪರಿಶೀಲಿಸಿದರು.
ಓಬಣ್ಣನಹಳ್ಳಿಯಲ್ಲಿ ಸುರಿದ ಹೆಚ್ಚಿನ ಮಳೆಯಿಂದಾಗಿ ಗ್ರಾಮದ ಗುಡ್ಡದಿಂದ ನೀರು ಹರಿದು 41ಕ್ಕೂ ಹೆಚ್ಚಿನ ಮನೆಗಳಿಗೆ ನೀರು ನುಗ್ಗಿತ್ತು. 6 ಮನೆಗಳು ಭಾಗಶಃ ಹಾನಿಗೆ ಒಳಗಾಗಿರುವುದು ಹಾಗೂ ಮನೆಗಳಿಗೆ ನೀರು ನುಗ್ಗಿ ಮನೆ ಸಾಮಗ್ರಿಗಳು ಹಾನಿಗೀಡಾಗಿದ್ದನ್ನು ವೀಕ್ಷಿಸಿದ ಅವರು, ಮಳೆ ನೀರು ಸರಾಗ ಹರಿವಿಗಾಗಿ ಹಳ್ಳದಲ್ಲಿದ್ದ ಮಣ್ಣನ್ನು ಶೀಘ್ರ ತೆರವುಗೊಳಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಹಾನಿಗೆ ಒಳಗಾದ ಮನೆಗಳಿಗೂ ತೆರಳಿ ಮಾಹಿತಿ ಪಡೆದರು. ಆಹಾರ ಧಾನ್ಯ, ಪುಸ್ತಕಗಳು, ಸಾಮಗ್ರಿಗಳು ಹಾನಿಯಾಗಿದ್ದು, ನಿಯಮಾನುಸಾರ ಸಂತ್ರಸ್ಥರಿಗೆ ಪರಿಹಾರ ಹಾಗೂ ಪಡಿತರ ವಿತರಣೆಗೆ ಕ್ರಮ ವಹಿಸುವಂತೆ ನಿರ್ದೇಶಿಸಿದರು.
ಚಿತ್ರದುರ್ಗ ತಹಸೀಲ್ದಾರ್ ಡಾ.ನಾಗವೇಣಿ ಮತ್ತಿತರ ಅಧಿಕಾರಿಗಳಿದ್ದರು. ಚಳ್ಳಕೆರೆ ತಾಲೂಕಿನ ಮಳೆಹಾನಿ ಪ್ರದೇಶಗಳಿಗೂ ಡಿಸಿ ಭೇಟಿ ನೀಡಿ ಪರಿಶೀಲಿಸಿದರು.
ಮನಮೈನಹಟ್ಟಿ, ಚಳ್ಳಕೆರೆ ನಗರದ ಪರಶುರಾಂಪುರ ರಸ್ತೆ, ಬಳ್ಳಾರಿ ರಸ್ತೆ ಹಾಗೂ ರಹೀಂನಗರದ ಮಳೆಹಾನಿ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲಿಸಿದರು. ಮನೆ ಹಾನಿಗೆ ತ್ವರಿತವಾಗಿ ಪರಿಹಾರ ವಿತರಣೆಗೆ ಕ್ರಮ ತೆಗೆದುಕೊಳ್ಳುವಂತೆ ಸೂಚಿಸಿದರು. ಚಳ್ಳಕೆರೆ ತಹಸೀಲ್ದಾರ್ ರೆಹಾನ್ ಪಾಷಾ ಹಾಗೂ ಇತರ ಇಲಾಖೆ ಅಧಿಕಾರಿಗಳಿದ್ದರು.