

ಗೋಣಿಕೊಪ್ಪ: ಎಡೆಬಿಡದೆ ಸುರಿಯುತ್ತಿರುವ ಮಳೆ ನಡುವೆಯೇ ವಿರಾಜಪೇಟೆ ಶಾಸಕ ಎ.ಎಸ್.ಪೊನ್ನಣ್ಣ ಬುಧವಾರ ಬೆಳಗ್ಗೆ ಮಳೆ ಹಾನಿ ಪ್ರದೇಶಕ್ಕೆ ಭೇಟಿ ನೀಡಿ ವಸ್ತುಸ್ಥಿತಿ ಅವಲೋಕಿಸಿದರು.
ಮಳೆಯಿಂದಾಗುತ್ತಿರುವ ಸಮಸ್ಯೆಗಳ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದ ಶಾಸಕ ಪೊನ್ನಣ್ಣ ಹಾತೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕುಂದ ಗ್ರಾಮದ ಬಸವೇಶ್ವರ ಬಡಾವಣೆಯಲ್ಲಿ ವಾಸಿಸುತ್ತಿರುವ ಗಿರಿಜನರ ಸಮಸ್ಯೆ ಆಲಿಸಿದರು.
ಗಿರಿಜನರು ವಾಸ ಮಾಡುವ ಬಸವೇಶ್ವರ ಬಡಾವಣೆಗೆ ಸಂಪರ್ಕ ಕಲ್ಪಿಸುವ ಸೇತುವೆ ಎರಡು ದಿನಗಳ ಹಿಂದೆ ಜಲಾವೃತವಾಗಿತ್ತು. ಪರಿಣಾಮ ಈ ಭಾಗದ ಗಿರಿಜನರು ಕಾಫಿ ತೋಟ ಆಶ್ರಯಿಸಿದ್ದರು. ಬಡಾವಣೆಗೆ ಸಂಪರ್ಕಿಸುವ ಏಕೈಕ ಸಂಪರ್ಕ ರಸ್ತೆಯಲ್ಲಿ ನಿರ್ಮಿಸಲಾಗಿದ್ದ ಸೇತುವೆ ಕೆಳಮಟ್ಟದಲ್ಲಿರುವುದರಿಂದ ಇಲ್ಲಿ ಹರಿಯುವ ನೀರು ಸೇತುವೆ ಮೇಲ್ಭಾಗದಲ್ಲಿ ಉಕ್ಕಿ ಹರಿಯುತ್ತಿತ್ತು. ಈ ಹಿನ್ನೆಲೆಯಲ್ಲಿ ಪರಿಶೀಲನೆಗೆಂದು ಪೊನ್ನಣ್ಣ ಆಗಮಿಸಿದ್ದರು. ಈ ವೇಳೆ ಬಡಾವಣೆಯ ಗಿರಿಜನ ಮುಖಂಡರಾದ ಗಪ್ಪು ಶಾಸಕರಿಗೆ ಜನರು ಎದುರಿಸುತ್ತಿರುವ ಸಮಸ್ಯೆಗಳನ್ನು ವಿವರಿಸಿದರು.
ಕೆಲವು ವರ್ಷಗಳ ಹಿಂದೆ ಸೇತುವೆ ನಿರ್ಮಿಸಲಾಗಿತ್ತು. ಸೇತುವೆಯ ಎರಡು ಬದಿಯಲ್ಲಿಯೂ ತಡೆಗೋಡೆ ಇಲ್ಲ. ಈ ಭಾಗದಲ್ಲಿ ಹೆಚ್ಚಾಗಿ ಶಾಲಾ ಮಕ್ಕಳಿದ್ದಾರೆ. ಸೇತುವೆಗೆ ತಡೆಗೋಡೆ ಇಲ್ಲದಿರುವುದರಿಂದ ಸಮಸ್ಯೆ ಎದುರಾಗಬಹುದು. ಅಲ್ಲದೆ, ಸೇತುವೆಯನ್ನು ಅತ್ಯಂತ ಕೆಳಮಟ್ಟದಲ್ಲಿ ಕಟ್ಟಲಾಗಿದೆ. ಇದನ್ನು ಎತ್ತರಿಸಬೇಕೆಂದು ಮನವಿ ಮಾಡಿದರು.
ಈ ಭಾಗದಲ್ಲಿ 28 ಸಣ್ಣ ಮಕ್ಕಳಿದ್ದು ಅಂಗನವಡಿ ಇಲ್ಲ. ಹೀಗಾಗಿ ಗಿರಿಜನ ಮಕ್ಕಳು ಮನೆಯಲ್ಲಿಯೇ ಕಾಲ ಕಳೆಯುತ್ತಿದ್ದಾರೆ ಎಂದು ಹಾಡಿ ನಿವಾಸಿ ಸೀತೆ ಶಾಸಕರ ಗಮನ ಸೆಳೆದರು.
ಸಮೀಪದಲ್ಲಿಯೇ ನದಿ ಇದ್ದರೂ ಕುಡಿಯುವ ನೀರು ಲಭಿಸುತ್ತಿಲ್ಲ. ಇದರಿಂದ ಸಮಸ್ಯೆ ಎದುರಿಸುವಂತಾಗಿದೆ. ಪಂಚಾಯಿತಿ ಮೂಲಕ ನಲ್ಲಿಯಲ್ಲಿ ಸರಬರಾಜು ಆಗುವ ನೀರು ಸಮರ್ಪಕವಾಗಿ ದೊರೆಯುತ್ತಿಲ್ಲ. ಜತೆಗೆ ಸರ್ಕಾರಿ ಬಸ್ ನಿಗದಿತ ಸಮಯಕ್ಕೆ ಆಗಮಿಸುತ್ತಿಲ್ಲ ಎಂದರು.
ಗಿರಿಜನರ ಸಮಸ್ಯೆ ಆಲಿಸಿದ ಬಳಿಕ, ಕುಡಿಯುವ ನೀರು ಸಮರ್ಪಕವಾಗಿ ದೊರಕುವ ನಿಟ್ಟಿನಲ್ಲಿ ಕ್ರಮವಹಿಸಿ ಎಂದು ಹಾತೂರು ಪಿಡಿಒ ಹಾಗೂ ಪೊನ್ನಂಪೇಟೆ ಇಒ ಕೆ.ಸಿ.ಅಪ್ಪಣ್ಣ ಅವರಿಗೆ ಶಾಸಕ ಎ.ಎಸ್.ಪೊನ್ನಣ್ಣ ನಿರ್ದೇಶನ ನೀಡಿದರು.
ಶಾಲಾ ಮಕ್ಕಳಿಗೆ ಬಸ್ ವ್ಯವಸ್ಥೆ ಕಲ್ಪಿಸಲಾಗುವುದು. ಲಭ್ಯವಿರುವ ಖಾಲಿ ನಿವೇಶನದಲ್ಲಿ ಅಂಗನವಾಡಿ ನಿರ್ಮಾಣಕ್ಕೆ ಕ್ರಮ ಕೈಗೊಳ್ಳುವಂತೆ ಸ್ಥಳದಲ್ಲಿದ್ದ ತಾಲೂಕು ಮಟ್ಟದ ಅಧಿಕಾರಿಗಳಿಗೆ ಸೂಚಿಸಿದರು.
7 ವರ್ಷದಿಂದ ಶೆಡ್‌ನಲ್ಲಿ ವಾಸವಿದ್ದೇವೆ. ನಿರಂತರ ಹೋರಾಟದ ಫಲವಾಗಿ ಗಿರಿಜನ ಕಲ್ಯಾಣ ಇಲಾಖೆ ವತಿಯಿಂದ 20 ಮನೆಗಳ ನಿರ್ಮಾಣ ಆರಂಭವಾಗಿದೆ. ಉಳಿದ ಕುಟುಂಬಗಳಿಗೆ ಮನೆ ದೊರಕಿಸಿಕೊಡುವಂತೆ ಹೋರಾಟಗಾರ ಯರವರ ಗಪ್ಪು ಶಾಸಕರ ಗಮನ ಸೆಳೆದರು.
ಈ ವೇಳೆ ಶಾಸಕರು ಸ್ಥಳದಲ್ಲಿದ್ದ ತಾಲೂಕು ಗಿರಿಜನ ಕಲ್ಯಾಣಾಧಿಕಾರಿ ಗುರುಶಾಂತಪ್ಪ ಅವರಿಗೆ ಮಾಹಿತಿ ನೀಡಲು ಸೂಚಿಸಿದಾಗ, ಇಲಾಖೆಯಲ್ಲಿ ಗಿರಿಜನರ ಮನೆ ನಿರ್ಮಾಣಕ್ಕೆ ಬೇಕಾದ ಹಣ ಲಭ್ಯವಿದ್ದು ಅರ್ಹರಿಗೆ ಮನೆ ಮಂಜೂರಾಗಿದೆ. ಈ ಭಾಗದಲ್ಲಿ 80ಕ್ಕೂ ಅಧಿಕ ಕುಟುಂಬ ವಾಸವಿದ್ದು, ಎಲ್ಲರಿಗೂ ಮನೆ ನಿರ್ಮಾಣಕ್ಕೆ ಕ್ರಮ ವಹಿಸಲಾಗಿದೆ. ಹಂತಹಂತವಾಗಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲಾಗುವುದು ಎಂದರು.
ತಾಲೂಕು ಕಾರ್ಯನಿರ್ವಹಣಾಧಿಕಾರಿ ಕೆ.ಸಿ.ಅಪ್ಪಣ್ಣ, ಪೊನ್ನಂಪೇಟೆ ಬ್ಲಾಕ್ ಕಾಂಗ್ರೆಸ್‌ನ ಅಧ್ಯಕ್ಷ ಮಿದೇರಿರ ನವೀನ್, ಪ್ರ.ಕಾರ್ಯದರ್ಶಿ ಎ.ಜೆ.ಬಾಬು, ಮಹಿಳಾ ಮುಖಂಡರಾದ ಕಡೆಮಾಡ ಕುಸುಮಾ, ನೂರೆರ ಧನ್ಯ, ಪುಲಿಯಂಡ ರೋಶನ್, ಹಾತೂರು ಗ್ರಾಮ ಪಂಚಾಯಿತಿ ಸದಸ್ಯರಾದ ಕೊಕ್ಕಂಡ ಗಿಣ ಗಣಪತಿ, ಪ್ರಮುಖರಾದ ಕೊಕ್ಕಂಡ ರೋಶನ್, ಹಾತೂರು ಪಿಡಿಒ ಉಸ್ಮಾ ಪ್ರಮುಖರು ಉಪಸ್ಥಿತರಿದ್ದರು.