ತುಮಕೂರು: ಮುಂಗಾರು ಮತ್ತು ಹಿಂಗಾರು ಹಂಗಾಮಿನಲ್ಲಿ ವಾಡಿಕೆಗಿಂತ ಹೆಚ್ಚಿನ ಪ್ರಮಾಣದಲ್ಲಿ ಮಳೆಯಾಗುವ ಸಾಧ್ಯತೆ ಬಗ್ಗೆ ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದ್ದು, ಅಧಿಕ ಮಳೆಯಿಂದ ಉಂಟಾಗಬಹುದಾದ ನೆರೆ ಪರಿಸ್ಥಿತಿ ಸಂದರ್ಭದಲ್ಲಿ ಯಾವುದೇ ಪ್ರಾಣ ಹಾನಿಯಾದಂತೆ ಅಗತ್ಯ ಕ್ರಮವಹಿಸುವ ಬಗ್ಗೆ ಜಿಲ್ಲಾಧಿಕಾರಿ ಶುಭಕಲ್ಯಾಣ್ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಈಗಾಗಲೇ ಪೂರ್ವ ಮುಂಗಾರು ಹಂಗಾಮಿನಿಂದ ಜಿಲ್ಲೆಯಲ್ಲಿ ಉತ್ತಮ ಮಳೆಯಾಗುತ್ತಿದ್ದು, 2024ನೇ ಸಾಲಿನಲ್ಲಿ ಉಂಟಾದಂತೆ ಮುಂದಿನ ದಿನಗಳಲ್ಲಿ ಕುಣಿಗಲ್, ಶಿರಾ, ಕೊರಟಗೆರೆ, ಪಾವಗಡ ಮತ್ತು ಮಧುಗಿರಿ ತಾಲೂಕುಗಳಲ್ಲಿ ಹರಿಯುವ ನದಿಗಳಲ್ಲಿ ನೀರಿನ ಹರಿವು ಶುರುವಾಗುವ ಸಾಧ್ಯತೆ ಇದೆ.
ಜಿಲ್ಲೆಯ ಎಲ್ಲ ಹೇಮಾವತಿ ನಾಲಾ ವಲಯ ಹಾಗೂ ಸಣ್ಣ ನೀರಾವರಿ ಇಲಾಖೆಗಳ ಬಹುತೇಕ ಕೆರೆಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ನೀರು ತುಂಬಿರುವ ಹಿನ್ನೆಲೆಯಲ್ಲಿ ಜಯಮಂಗಲಿ ನದಿ ಪಾತ್ರದಲ್ಲಿರುವ ಚನ್ನಸಾಗರ, ನಂಜಾಪುರ ಮತ್ತು ಶಿಂಷಾ, ಸುವರ್ಣಮುಖಿ, ಉತ್ತರ ಪಿನಾಕಿನಿ ನದಿ ಪಾತ್ರ, ಮಕೋರ್ನಹಳ್ಳಿ, ತೀತಾ, ಮಂಗಳ ಜಲಾಶಯಗಳ ವ್ಯಾಪ್ತಿಯಲ್ಲಿ ಬರುವ ಜನವಸತಿ ಗ್ರಾಮ ಮತ್ತು ಜಿಲ್ಲೆಯ ಕೆರೆಗಳ ಕೆಳಭಾಗದಲ್ಲಿರುವ ಜನವಸತಿ ಪ್ರದೇಶ, ನಗರ ವ್ಯಾಪ್ತಿಯ ಹಠಾತ್ ಪ್ರವಾಹವಾಗುವ ವಾರ್ಡುಗಳಲ್ಲಿ ಯಾವುದೇ ಜನ-ಜಾನುವಾರುಗಳ ಪ್ರಾಣ ಹಾನಿಯಾಗದಂತೆ ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಳ್ಳಬೇಕಿದೆ.
ಕಂದಾಯ, ಆರಕ್ಷಕ, ಗ್ರಾಮೀಣಾಭಿವೃದ್ಧಿ, ನಗರಾಭಿವೃದ್ಧಿ. ಸಣ್ಣ ನೀರಾವರಿ, ಹೇಮಾವತಿ, ಲೋಕೋಪಯೋಗಿ, ಕೃಷಿ, ತೋಟಗಾರಿಕೆ, ರೇಷ್ಮೆ, ಪಶು ಸಂಗೋಪನೆ, ಶಾಲಾ ಶಿಕ್ಷಣ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ಅಗ್ನಿ ಶಾಮಕ ಮತ್ತು ಸಂಬಂಧಪಟ್ಟ ಎಲ್ಲ ಇಲಾಖೆಗಳ ಜಿಲ್ಲಾ, ತಾಲೂಕು ಮಟ್ಟದ ಅಧಿಕಾರಿಗಳು ತುರ್ತು ಪರಿಸ್ಥಿತಿಯಲ್ಲಿ ಕಡ್ಡಾಯವಾಗಿ ತಮ್ಮ ಕೇಂದ್ರ ಸ್ಥಾನದಲ್ಲಿದ್ದು, ಭಾರಿ ಮಳೆಯಿಂದ ಉಂಟಾಗಬಹುದಾದ ಅವಘಡಗಳನ್ನು ಸಮರ್ಪಕ ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಳ್ಳಲು ಡಿಸಿ ಸೂಚಿಸಿದ್ದಾರೆ.
ನೆರೆ ಸಂದರ್ಭದಲ್ಲಿ ಉತ್ತಮ ಆಹಾರ, ಶುದ್ಧ ಕುಡಿಯುವ ನೀರು, ಉಚಿತ ಆರೋಗ್ಯ ತಪಾಸಣೆ, ಸೂಕ್ತ ವ್ಯವಸ್ಥೆಯಿರುವ ಕಾಳಜಿ ಕೇಂದ್ರಗಳನ್ನು ಗುರುತಿಸಿ ಅವಶ್ಯಕತೆಯಾನುಸಾರ ಕಾಳಜಿ ಕೇಂದ್ರಗಳಿಗೆ ಸಕಾಲಿಕವಾಗಿ ಸಂತ್ರಸ್ತರನ್ನು ಸ್ಥಳಾಂತರಿಸಬೇಕು. ಸಂಭವನೀಯ ತುರ್ತು ಪರಿಸ್ಥಿತಿ ಸ್ಥಳಗಳಲ್ಲಿ ಜಾನುವಾರುಗಳ ಸಂಖ್ಯೆಗೆ ಅನುಗುಣವಾಗಿ ಕಾಳಜಿ ಕೇಂದ್ರದ ವ್ಯಾಪ್ತಿಯ ಸೂಕ್ತ ಸ್ಥಳದಲ್ಲಿ ಸಂರಕ್ಷಣೆ ಮಾಡಬೇಕು. ವಾಹನಗಳ ಸುಗಮ ಸಂಚಾರಕ್ಕೆ ಅನುವು ಮಾಡಬೇಕು. ತುರ್ತು ಆರೋಗ್ಯ ಚಿಕಿತ್ಸೆ, ವಿದ್ಯುತ್ ಸಂಪರ್ಕ ಇತ್ಯಾದಿ ಅಗತ್ಯ ಸೇವೆಗಳ ಸನ್ನದ್ಧತೆ ಮಾಡಿಕೊಳ್ಳಬೇಕು. ಅರ್ಹ ಸಂತ್ರಸ್ತರಿಗೆ ಸಕಾಲದಲ್ಲಿ ಮಾರ್ಗಸೂಚಿಗಳನ್ವಯ ನಿಯಮಾನುಸಾರ ಪರಿಹಾರ ವಿತರಿಸಬೇಕಿದೆ. ಸಂಭವನೀಯ ನೆರೆ ಪರಿಸ್ಥಿತಿಗೆ ತುತ್ತಾಗುವ ಪ್ರದೇಶಗಳಲ್ಲಿ ವೈಯಕ್ತಿಕ ಗಮನಹರಿಸಿ ಯಾವುದೇ ಲೋಪದೋಷಗಳಿಗೆ ಅವಕಾಶ ನೀಡದೆ ನೆರೆ ಪರಿಸ್ಥಿತಿಯನ್ನು ಸಮರ್ಪಕವಾಗಿ ನಿಭಾಯಿಸಲು ಅಧಿಕಾರಿಗಳಿಗೆ ಸೂಚಿಸಿದ್ದಾರೆ.