ಮಳೆ ಸಂತ್ರಸ್ತರ ಹೋರಾಟಕ್ಕೆ ನಾಯಕರ ಸಾಥ್

22 SARAG6
ಸರಗೂರು ಪಟ್ಟಣದಲ್ಲಿ ನೆರೆ ಸಂತ್ರಸ್ತರ ಹೋರಾಟ ಸಮಿತಿ ವತಿಯಿಂದ ನಡೆಸಲಾಗುತ್ತಿರುವ ಅಹೋರಾತ್ರಿ ಧರಣಿ ಸತ್ಯಾಗ್ರಹದಲ್ಲಿ ಅನಿಲ್ ಚಿಕ್ಕಮಾದು ಮಾತನಾಡಿದರು. ಜಯಪ್ರಕಾಶ್, ಸರಗೂರು ಶಿವಣ್ಣ, ಎಚ್.ಸಿ.ನರಸಿಂಹಮೂರ್ತಿ, ಬೀರ್ವಾಳ್ ಬಸವರಾಜು ಇತರರು ಇದ್ದರು.
Published on

ಸರಗೂರು: ಮಳೆ ಸಂತ್ರಸ್ತರನ್ನು ಪರಿಹಾರ ಪಟ್ಟಿಯಿಂದ ಕೈಬಿಟ್ಟಿರುವುದನ್ನು ವಿರೋಧಿಸಿ ನೆರೆ ಸಂತ್ರಸ್ತರ ಹೋರಾಟ ಸಮಿತಿ ವತಿಯಿಂದ ನಡೆಸಲಾಗುತ್ತಿರುವ ಅಹೋರಾತ್ರಿ ಧರಣಿ ಶುಕ್ರವಾರ ಎರಡನೇ ದಿನ ಪೂರೈಸಿದ್ದು, ಹೋರಾಟಕ್ಕೆ ಶಾಸಕ ಅನಿಲ್ ಚಿಕ್ಕಮಾದು ಹಾಗೂ ಜೆಡಿಎಸ್ ಯುವ ಮುಖಂಡ ಜಯಪ್ರಕಾಶ್ ಸಾಥ್ ನೀಡಿದ್ದಾರೆ.

ಸರಗೂರು ಪಟ್ಟಣದ ತಾಲೂಕು ಕಚೇರಿ ಮುಂಭಾಗ ನೆರೆ ಸಂತ್ರಸ್ತರ ಹೋರಾಟ ಸಮಿತಿ ವತಿಯಿಂದ ನಡೆಯುತ್ತಿರುವ ಅಹೋರಾತ್ರಿ ಧರಣಿ ಸತ್ಯಾಗ್ರಹ ಸ್ಥಳಕ್ಕೆ ಶುಕ್ರವಾರ ಶಾಸಕ ಅನಿಲ್ ಚಿಕ್ಕಮಾದು ಮತ್ತು ಜಯಪ್ರಕಾಶ್ ಆಗಮಿಸಿ ಹೋರಾಟಕ್ಕೆ ಬೆಂಬಲ ಸೂಚಿಸಿದರು. ಇದೊಂದು ಪಕ್ಷಾತೀತವಾಗಿ ನಡೆಯುತ್ತಿರುವ ಹೋರಾಟವಾಗಿದ್ದು, ನೊಂದವರ ಪರವಾಗಿ ಪ್ರತಿಯೊಬ್ಬರೂ ನಿಂತು ನ್ಯಾಯ ಒದಗಿಸಲು ಸಹಕಾರ ನೀಡಬೇಕು. ಜಿಲ್ಲಾಧಿಕಾರಿ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಬೇಕು. ಜತೆಗೆ ಈಗಾಗಲೇ ಬಿಡುಗಡೆಯಾಗಿರುವ ಪರಿಹಾರವನ್ನು ಫಲಾನುಭವಿಗಳಿಗೆ ವಿತರಣೆ ಮಾಡಬೇಕು ಎಂದು ಇಬ್ಬರೂ ನಾಯಕರು ಒತ್ತಾಯಿಸಿದರು.

ಮಳೆಯಿಂದಾಗಿ ಮನೆಗಳು ಕುಸಿದುಬಿದ್ದಿವೆ. ಇನ್ನೂ ಹಲವು ಮನೆಗಳು ಶಿಥಿಲಗೊಂಡಿವೆ. ಈ ಬಗ್ಗೆ ಸಚಿವರ ಗಮನಕ್ಕೆ ತಂದಿದ್ದೇನೆ. ಜಿಲ್ಲಾಧಿಕಾರಿ ಜತೆ ಮಾತುಕತೆ ನಡೆಸಿ, ಮರುಪರಿಶೀಲನೆ ನಡೆಸುವಂತೆ ಚರ್ಚಿಸಿದ್ದೇನೆ. ತಾಲೂಕಿನ ಜನರಿಗೆ ಏನೇ ಸಮಸ್ಯೆ ಬಂದರೂ ಅಧಿಕಾರಿಗಳೇ ಹೊಣೆ.

ಅನಿಲ್ ಚಿಕ್ಕಮಾದು, ಶಾಸಕ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net