

ಶಿಕಾರಿಪುರ: ನಾಲ್ಕು ದಿನಗಳಿಂದ ಮಳೆ ಬಿಡುವು ನೀಡಿರುವುದರಿಂದ ಕೃಷಿ ಚಟುವಟಿಕೆಗೆ ಚಾಲನೆ ದೊರಕಿದ್ದು ಬಹುತೇಕ ತಾಲೂಕಿನ ಎಲ್ಲ ಹೋಬಳಿಗಳಲ್ಲಿಯೂ ಬಿತ್ತನೆ ಕಾರ್ಯ ನಡೆಯುತ್ತಿದೆ. ಪ್ರತಿವರ್ಷ ಮೇ ಅಂತ್ಯ ಅಥವಾ ಜೂನ್ ಮೊದಲನೆ ವಾರದಲ್ಲಿ ಮೆಕ್ಕೆಜೋಳ ಬಿತ್ತನೆ ಮಾಡುತ್ತಿದ್ದರು. ಬಿತ್ತನೆಯ ನಂತರ ಮಳೆ ಒಂದು ವಾರ ಬಿಡುವು ಕೊಟ್ಟರೆ ಬೀಜ ಮೊಳಕೆಯೊಡೆಯಲು ಸಹಕಾರಿಯಾಗುತ್ತದೆ. ಆದ್ದರಿಂದ ಈಗ ಮಳೆಯಿಂದ ನೆಲ ಹದವಾಗಿರುವುದರ ಜತೆಗೆ ಮಳೆ ಬಿಡುವು ಕೊಟ್ಟಿರುವುದರಿಂದ ಬಹುತೇಕ ರೈತರು ಬಿತ್ತನೆಗೆ ಮುಂದಾಗಿದ್ದಾರೆ. ಯಾವಾಗಲೂ ಮುಂಗಾರಿನಲ್ಲಿ ಬಿತ್ತನೆ ಮಾಡುತ್ತಿದ್ದ ರೈತರು ಈ ಬಾರಿ ಪೂರ್ವ ಮುಂಗಾರಿನಲ್ಲಿಯೇ ಬಿತ್ತನೆ ಮಾಡುತ್ತಿದ್ದಾರೆ. ನಂತರ ಸ್ವಲ್ಪ ಪ್ರಮಾಣದಲ್ಲಿ ಮಳೆಯಾದರೂ ಮೆಕ್ಕೆಜೋಳಕ್ಕೆ ಸಮಸ್ಯೆ ಇರುವುದಿಲ್ಲ. ಹಿಂಗಾರು ಮಳೆ ಕೈಕೊಟ್ಟರೂ ಮೆಕ್ಕೆಜೋಳಕ್ಕೆ ಹೆಚ್ಚಿನ ತೊಂದರೆಯಾಗುವುದಿಲ್ಲ ಎಂಬ ನಂಬಿಕೆ ರೈತರದ್ದು. ಅಕಾಲಿಕ ಮಳೆಯಿಂದ ಮೆಕ್ಕೆಜೋಳ ಮತ್ತು ಭತ್ತ ಹಾಳಾಗುವ ಸ್ಥಿತಿ ಕಂಡು ಬಂದಿತ್ತು. ಮೆಕ್ಕೆಜೋಳ ಮುರಿದ ರೈತರು ಒಣಗಿಸಲಾರದೆ ಸಾಕಷ್ಟು ತೊಂದರೆ ಅನುಭವಿಸಿದ್ದರು. ಮೆಕ್ಕೆಜೋಳಕ್ಕೆ ಫಂಗಸ್ ಉಂಟಾಗಿರುವುದಲ್ಲದೆ ಕೆಲವು ಕಡೆಗಳಲ್ಲಿ ಮೊಳಕೆಯೊಡೆದಿವೆ. ರೈತರು ಈಗ ಬಿಸಿಲಿನಲ್ಲಿ ಮೆಕ್ಕೆಜೋಳವನ್ನು ಒಣಗಿಸುತ್ತಿದ್ದಾರೆ. ಆದರೂ ಮೆಕ್ಕೆಜೋಳಕ್ಕೆ ಮೊದಲಿನ ಗುಣಮಟ್ಟ ಸಿಗುವುದಿಲ್ಲ ಮತ್ತು ಬೆಲೆಯೂ ಸಿಗುವುದಿಲ್ಲ. ಬಣ್ಣ, ಗುಣಮಟ್ಟ ಕಡಿಮೆಯಾದರೆ, ಫಂಗಸ್ ಆಗಿದ್ದರೆ ಮಾರುಕಟ್ಟೆಯಲ್ಲಿ ಬೆಳೆಗೆ ಸೂಕ್ತವಾದ ಬೆಲೆ ದೊರೆಯುವುದಿಲ್ಲ. ಮಳೆಯಿಂದಾಗಿ ಬೇಸಿಗೆಯ ಭತ್ತವನ್ನು ಹೊಲದಲ್ಲಿಯೇ ಬಿಟ್ಟಿದ್ದ ರೈತರು ಈಗ ಕೊಯ್ಲು ಪ್ರಾರಂಭಿಸಿದ್ದಾರೆ. ಭತ್ತದ ಗದ್ದೆಗಳು ವರ್ಷದಿಂದ ವರ್ಷಕ್ಕೆ ಕಡಿಮೆಯಾಗಿ ಅಡಕೆ ತೋಟಗಳಾಗಿ ಮಾರ್ಪಾಟಾಗುತ್ತಿವೆ.
ಮಳೆ ಪ್ರಮಾಣ ಹೆಚ್ಚು ತಾಲೂಕಿನಲ್ಲಿ ಜನವರಿಯಿಂದ ಜೂನ್ 4ರವರೆಗೆ ಕಸಬಾ ಹೋಬಳಿಯಲ್ಲಿ 158 ಮಿ.ಮಿ. ವಾಡಿಕೆ ಮಳೆಗೆ 271 ಮಿ.ಮಿ. ಮಳೆಯಾಗಿದ್ದು ಶೇ.71ರಷ್ಟು ಮಳೆ ಹೆಚ್ಚಾಗಿದೆ. ಅಂಜನಾಪುರ ಹೋಬಳಿಯಲ್ಲಿ 142 ಮಿ.ಮಿ.ಗೆ 288 ಮಿ.ಮಿ. ಮಳೆಯಾಗಿದೆ. ಶೇ.102 ಮಿ.ಮಿ. ಜಾಸ್ತಿಯಾಗಿದೆ. ಹೊಸೂರು ಹೋಬಳಿಯಲ್ಲಿ 137 ಮಿ.ಮಿ. ವಾಡಿಕೆ ಮಳೆಗೆ 209 ಮಿ.ಮಿ. ಮಳೆಯಾಗಿದೆ. ಉಡುಗಣಿ ಹೋಬಳಿಯಲ್ಲಿ 117 ಮಿ.ಮಿ. ವಾಡಿಕೆ ಮಳೆಗೆ 214 ಮಿ.ಮಿ. ಮಳೆಯಾಗಿದೆ. ಉಡುಗಣಿ ಹೋಬಳಿಯಲ್ಲಿ 120 ಮಿ.ಮಿ. ವಾಡಿಕೆ ಮಳೆಗೆ 200 ಮಿ.ಮಿ. ಮಳೆಯಾಗಿದೆ. ಈ ಬಾರಿ ಅಕಾಲಿಕ ಮಳೆ ನಿರಂತರವಾಗಿ 8-10 ದಿನ ಸುರಿದಿದ್ದರಿಂದ ಮತ್ತು ಈಗ ಎರಡು ಮೂರು ದಿನಗಳಿಂದ ಮಳೆ ಬಿಡುವು ಕೊಟ್ಟಿರುವುದರಿಂದ ಬೇಸಿಗೆ ಬೆಳೆ ಮೆಕ್ಕೆಜೋಳ ಒಣಗಿಸಲು ಅನುಕೂಲವಾಗಿದೆ. ಈಗ ಭೂಮಿ ಹದವಾಗಿರುವುದರಿಂದ ತಾಲೂಕಿನಲ್ಲಿ ರೈತರು ಮೆಕ್ಕೆಜೋಳ ಬಿತ್ತನೆ ಶುರು ಮಾಡಿದ್ದಾರೆ. ಪ್ರಮೋದ್ ಗೌಡ, ರೈತ ಮುಖಂಡ