ಮಳೆ- ಗಾಳಿಗೆ ಧರೆಗುರುಳಿದ ಮರ

16sirsi1a
Published on

ಶಿರಸಿ: ಶಿರಸಿಯಲ್ಲಿ ಶುಕ್ರವಾರ ರಾತ್ರಿ ಬಿದ್ದ ಗುಡುಗು ಸಹಿತ ಭಾರಿ ಮಳೆ- ಗಾಳಿಗೆ ತಾಲೂಕಿನ ದೊಡ್ನಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಅಪಾರ ಹಾನಿ ಸಂಭವಿಸಿದೆ.

ಪಂಚಾಯಿತಿ ವ್ಯಾಪ್ತಿಯ ಎಸಳೆ, ಕೆಳಗಿನ ಎಸಳೆ, ಲಂಡಕನಹಳ್ಳಿ, ಜವಳಗುಂಡಿ, ನರೇಬೈಲು ಭಾಗದಲ್ಲಿ ಬೀಸಿದ ಗಾಳಿಗೆ ಮರಗಳು ಧರೆಗುರುಳಿವೆ. 100ಕ್ಕೂ ಹೆಚ್ಚು ವಿದ್ಯುತ್ ಕಂಬಗಳಿಗೆ ಹಾನಿಯಾಗಿದೆ. ಕೆಳಗಿನ ಎಸಳೆಯಲ್ಲಿ ಬೃಹತ್ ಮಾವಿನಮರ ಬಿದ್ದ ಪರಿಣಾಮ ಮಹಾದೇವ ಆರೇರ ಅವರಿಗೆ ಸೇರಿದ ಬೈಕ್ ಸಂಪೂರ್ಣ ನಜ್ಜುಗುಜ್ಜಾಗಿದೆ.

ಮಂಜುನಾಥ ಆರೇರ ಎಂಬುವವರಿಗೆ ಸೇರಿದ ಮನೆಯ ಮೇಲ್ಛಾವಣಿ ಗಾಳಿ ಅಬ್ಬರಕ್ಕೆ ಹಾರಿ ಪಕ್ಕದಲ್ಲಿ ಬಿದ್ದಿದೆ. 30ಕ್ಕೂ ಹೆಚ್ಚು ಮನೆಗಳ ಹೆಂಚುಗಳು ಒಡೆದಿವೆ. ಇದೇ ಗ್ರಾಮದಲ್ಲಿ 8ಕ್ಕೂ ಹೆಚ್ಚು ಬೃಹತ್ ಮರಗಳು ಬಿದ್ದಿದ್ದು, 25ಕ್ಕೂ ಹೆಚ್ಚು ವಿದ್ಯುತ್ ಕಂಬಗಳು ಮುರಿದಿವೆ. ಸಮೀಪದ ಬ್ಯಾಗದ್ದೆಯಲ್ಲಿ ಮರ ಮುರಿದು 30ರಷ್ಟು ವಿದ್ಯುತ್ ಕಂಬಗಳು ನೆಲಕ್ಕುರುಳಿವೆ. ಜತೆಗೆ 30ಕ್ಕೂ ಹೆಚ್ಚು ಮನೆಗಳ ಹೆಂಚು, ಮೇಲ್ಛಾವಣಿಗಳಿಗೆ ಹಾನಿಯಾಗಿದೆ.

ಸ್ಥಳಕ್ಕೆ ತಾಲೂಕು ಪಂಚಾಯಿತಿ ಉಪಾಧ್ಯಕ್ಷ ಚಂದ್ರು ದೇವಾಡಿಗ, ಜಿಲ್ಲಾ ಪಂಚಾಯಿತಿ ಸದಸ್ಯೆ ಉಷಾ ಹೆಗಡೆ ಇತರ ಜನಪ್ರತಿನಿಧಿಗಳು ಭೇಟಿ ನೀಡಿ ಪರಿಶೀಲಿಸಿದ್ದಾರೆ. ಸ್ಥಳಕ್ಕೆ ಹೆಸ್ಕಾಂ, ಕಂದಾಯ ಸಿಬ್ಬಂದಿ ಆಗಮಿಸಿ ಮರ, ಕಂಬಗಳ ತೆರವು ಕಾರ್ಯ ಕೈಗೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net