

ತುರುವೇಕೆರೆ : ತಾಲೂಕಿನ ಹಲವು ಭಾಗಗಳಲ್ಲಿ ಶುಕ್ರವಾರ ರಾತ್ರಿ ಸುರಿದ ಭಾರಿ ಮಳೆ,ಗಾಳಿಗೆ ತೆಂಗು, ಬಾಳೆ ಹಾಗೂ ವಿದ್ಯುತ್ ಕಂಬಗಳು ಮುರಿದು ನೆಲಕಚ್ಚಿದ್ದು, ಅಪಾರ ನಷ್ಟವಾಗಿದೆ.
ಶುಕ್ರವಾರ ತಡರಾತ್ರಿ ಗುಡುಗು, ಸಿಡಿಲು ಸಹಿತ ಗಾಳಿಯ ಅಬ್ಬರಕ್ಕೆ ಮಾಯಸಂದ್ರ ಹೋಬಳಿಯ ಇಟ್ಟಿಗೆಹಳ್ಳಿಯ ಶಿವಕುಮಾರ್, ಸಾಬಿರಾಬಿ, ಸೈಯದ್‌ಜಲಾನ್ ಸಾಬ್, ಅಕ್ತರ‌್ಭಾನು ಅವರ 1500ಕ್ಕೂ ಹೆಚ್ಚು ಹಾಗೂ ಮಲ್ಲೂರಿನ ರೈತ ರಾಮಣ್ಣ ಅವರ 500 ಫಲ ಬಂದಿದ್ದ ಬಾಳೆಗಿಡಗಳು ನೆಲಕಚ್ಚಿವೆ.
ದಬ್ಬೇಘಟ್ಟ ಹೋಬಳಿಯ ಕೆ.ಹೊಸೂರು ಆಸು-ಪಾಸು ಒಂದೆರಡು ತೆಂಗಿನ ಮರಗಳು ಗಾಳಿಗೆ ಧರೆಗುರುಳಿವೆ. ಅದೇ ಊರಿನ ಹೊರ ವಲಯದಲ್ಲಿ ಮುದ್ದನಹಳ್ಳಿ ಫೀಡರ್ ವ್ಯಾಪ್ತಿಯ ತೆಂಗಿನಮರ ಬಿದ್ದು, ವಿದ್ಯುತ್ ಕಂಬ ಮುರಿದು ಬಿದ್ದಿದೆ. ಮಾಯಸಂದ್ರ ಹೋಬಳಿಯ ಇಟ್ಟಿಗೆಹಳ್ಳಿ ಬಳಿ ವಿದ್ಯುತ್ ಪರಿವರ್ತಕ ಮಳೆಗಾಳಿಗೆ ಮುರಿದು ಬಿದ್ದಿದೆ. ಪಟ್ಟಣದ ಮಾಯಸಂದ್ರ ರಸ್ತೆ ಇಕ್ಕೆಲಗಳಲ್ಲಿ ಮರದ ಕೊಂಬೆಗಳು ಅಲ್ಲಲ್ಲಿ ಮುರಿದು ಬಿದ್ದಿವೆ.
ತಾಲೂಕಿನಲ್ಲಿ ಉತ್ತಮ ಮಳೆಯಾಗಿರುವ ಹಿನ್ನೆಲೆಯಲ್ಲಿ ರೈತರು ಕೃಷಿ ಕಾರ್ಯಚಟುವಟಿಕೆ ಆರಂಭಿಸಿದ್ದಾರೆ.
ಪಟ್ಟಣದಲ್ಲಿ 7 ಮಿ.ಮೀ ಮೀಟರ್ ಮಳೆಯಾಗಿದ್ದು, ಮಾಯಸಂದ್ರ 21, ದಬ್ಬೇಘಟ್ಟ 40, ಸಂಪಿಗೆ17, ದಂಡಿನಶಿವರ 8 ಮಿ.ಮೀಟರ್ ಮಳೆಯಾಗಿರುವುದು ವರದಿಯಾಗಿದೆ. ಬೆಸ್ಕಾಂ ಅಧಿಕಾರಿಗಳಾದ ಉಮೇಶ್ವರಯ್ಯ, ನಾರಾಣಪ್ಪ, ಗ್ರಾಮ ಲೆಕ್ಕಾಧಿಕಾರಿಗಳಾದ ಅಣ್ಣಪ್ಪ, ಭೂತಯ್ಯ, ಜಗದೀಶ್ ಸ್ಥಳ ಹಾನಿಗೊಳಗಾದ ಸ್ಥಳ ಪರಿಶೀಲಿಸಿದರು.