ಮಳೆ ಗಾಳಿಗೆ ಜನಜೀವನ ಸಂಪೂರ್ಣ ತಬ್ಬಿಬ್ಬು

bkt-23-12-a
ಬಾಗಲಕೋಟೆ ತಾಲೂಕಿನ ಹಿರೇಶೆಲ್ಲಿಕೇರಿ ಗ್ರಾಮದಲ್ಲಿ ಗುರುವಾರ ಸಂಜೆ ಭಾರಿ ಮಳೆ ಗಾಳಿಗೆ ಸಾಕಷ್ಟು ಮರಗಳು ಧರೆಗುಳಿದಿದ್ದು, ಬೃಹತ್ ಮರವೊಂದು ಬಿದ್ದು ಎಮ್ಮೆಯೊಂದು ಸಾವನ್ನಪ್ಪಿರುವುದು.
Published on

ಬಾಗಲಕೋಟೆ: ಪೂರ್ವ ಮುಂಗಾರು ಮಳೆ ಅಬ್ಬರ ಮುಂದುವರೆದಿದ್ದು, ಗುರುವಾರ ಸಂಜೆ ಜಿಲ್ಲೆಯ ಬಹುತೇಕ ಕಡೆಗೆ ಮಳೆ ಜೊತೆ ಭಾರಿ ಪ್ರಮಾಣದ ಗಾಳಿ ಬೀಸಿದ್ದು, ಅಪಾರ ಪ್ರಮಾಣದ ಹಾನಿಯನ್ನುಂಟು ಮಾಡಿದೆ.

ಬಾಗಲಕೋಟೆ ತಾಲೂಕಿನ ತುಳಸಿಗೇರಿ ಬಾಗದಲ್ಲಂತೂ ವರುಣಾರ್ಭಟ ಜನಜೀವನವನ್ನು ಸಂಪೂರ್ಣ ತಬ್ಬಿಬ್ಬುಗೊಳಿಸಿದ್ದು, ಅಪಾರ ಪ್ರಮಾಣದ ಆಸ್ತಿ-ಪಾಸ್ತಿ ನಾಶ ಮಾಡಿದೆ. ಮಳೆ-ಗಾಳಿಗೆ ಆಲಿಕಲ್ಲು ಸಹ ಸಾತ್ ನೀಡಿದ್ದ ಹಾನಿ ಪ್ರಮಾಣವನ್ನು ಹೆಚ್ಚಿಸಿದೆ.

ಮುಖ್ಯವಾಗಿ ತುಳಸಿಗೇರಿ ಆಂಜನೇಯ ದೇವಸ್ಥಾನದ ಬಳಿಯ ಅಂಗಡಿ-ಮುಂಗಟ್ಟುಗಳ ಮೇಲೆ ಗಿಡ-ಮರಗಳು ಉರುಳಿ ಬಿದ್ದು ಅಪ್ಪಚ್ಚಿಯಾಗಿವೆ. ದೇವನಾಳ, ಹಿರೇಶೆಲ್ಲಿಕೇರಿ ಭಾಗದಲ್ಲೂ ಸಹ ಹಲವಾರು ಮನೆಗಳ ತಗಡುಗಳು ಹಾರಿ ಹೋಗಿವೆ. ಜಾನುವಾರುಗಳ ಸೆಡ್ಡುಗಳು ನಾಶವಾಗಿವೆ. ರಸ್ತೆ ಉದ್ದಕ್ಕೂ ಗಿಡಮರಗಳು ಉರುಳಿ ಬಿದ್ದಿವೆ. ಮರವೊಂದು ಬಿದ್ದು ಹಿರೇಶೆಲ್ಲಿಕೇರಿ ಗ್ರಾಮದ ದೊಡ್ಡಸಿದ್ದಪ್ಪ ಕೋಲಾರ ಎನ್ನುವವರಿಗೆ ಸೇರಿದ್ದ ಎಮ್ಮೆ ಸ್ಥಳದಲ್ಲೆ ಸಾವನ್ನಪ್ಪಿದೆ. ಅಪಾರ ಪ್ರಮಾಣದ ದಾಳಿಂಬೆ, ಚಿಕ್ಕು, ಪಪ್ಪಾಯಿ, ಕಬ್ಬುಬೆಳೆ ಹಾನಿಗೆ ಒಳಗಾಗಿದೆ.

ತಗಡಿನ ಸೆಡ್ಡು ಹಾರಿ ದೇವಿನಾಳ ಗ್ರಾಮದಲ್ಲಿ ಮನೆಯಲ್ಲಿದ್ದ ಅಜ್ಜ-ಮೊಮ್ಮಗಳಿಗೆ ಗಾಯವಾಗಿರುವ ವರದಿಯಾಗಿದೆ.ಹಾಗೆಯೇ ಜಿಲ್ಲೆಯ ಚಿಮ್ಮಡ, ಮಹಾಲಿಂಗಪುರ, ರಬಕವಿ-ಬನಹಟ್ಟಿ, ಬೀಳಗಿ ಕ್ರಾಸ್, ತೇರದಾಳ ಸೇರಿ ಹಲವು ಕಡೆಗೆ ಗಾಳಿ ಮಳೆ ಜನಜೀವನ ಅಸ್ತವಸ್ತಗೊಳಿಸಿರುವ ವರದಿಯಾಗಿದೆ. ಪೂರ್ವ ಮುಂಗಾರು ಹಂಗಾಮಿನಲ್ಲಿ ಗುರುವಾರ ಸಂಜೆ ಅಬ್ಬರಿಸಿದ ಮಳೆ ಅಪಾರ ಹಾನಿಯನ್ನುಂಟು ಮಾಡಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net