

ಶೃಂಗೇರಿ: ಅತಿವೃಷ್ಟಿ ಕಡಿಮೆಯಾಗಲು ಪ್ರಾರ್ಥನೆ ಸಲ್ಲಿಸುವಂತೆ ಶ್ರೀ ಶಾರದಾ ಪೀಠದ ಜಗದ್ಗುರು ಶ್ರೀ ವಿಧುಶೇಖರ ಭಾರತೀ ಸ್ವಾಮೀಜಿ ಅವರಲ್ಲಿ ಶೃಂಗೇರಿ ಮತ್ತು ಕೊಪ್ಪ ಕೃಷಿಕ ಸಮಾಜದವರು ಹಾಗೂ ರೈತರು ಗುರುವಾರ ಮನವಿ ಮಾಡಿದರು.
ಜಗದ್ಗುರು ಶ್ರೀ ವಿಧುಶೇಖರ ಭಾರತೀ ಸ್ವಾಮೀಜಿ ಮಾತನಾಡಿ, ಮಲೆನಾಡಿನಲ್ಲಿ ಅತಿವೃಷ್ಟಿಯಿಂದ ಎಲ್ಲ ಬೆಳೆಗಳಿಗೂ ಕೊಳೆ ರೋಗ ಬಂದಿರುವುದಾಗಿ ರೈತ ಮುಖಂಡರು ತಿಳಿಸಿದ್ದಾರೆ. ಮಳೆ ಕಡಿಮೆಯಾಗಲು ಕಿಗ್ಗಾ ಶ್ರೀ ಶಾಂತಾಋಷ್ಯಶೃಂಗೇಶ್ವರ ಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಲಾಗುತ್ತದೆ ಎಂದರು.
ಕೃಷಿಕ ಸಮಾಜದ ಅಧ್ಯಕ್ಷ ಕೆ.ಎನ್.ಗೋಪಾಲ ಹೆಗ್ಡೆ ಮಾತನಾಡಿ, ಅತಿವೃಷ್ಟಿಯಿಂದ ರೈತರ ಎಲ್ಲ್ಲ ಬೆಳೆ ಮೇಲೂ ಪರಿಣಾಮ ಬೀರಿದೆ. ಕೊಳೆ ರೋಗ ವ್ಯಾಪಿಸಿದ್ದು, ಈ ಸಂಕಷ್ಟದಿಂದ ಪಾರು ಮಾಡಲು ಜಗದ್ಗುರುಗಳಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಲಾಗಿದೆ ಎಂದರು.
ಕೊಪ್ಪ ಕೃಷಿಕ ಸಮಾಜದ ಅಧ್ಯಕ್ಷ ಕೃಷ್ಣಮೂರ್ತಿ, ತಾಲೂಕು ಬ್ರಾಹ್ಮಣ ಮಹಾಸಭಾ ಅಧ್ಯಕ್ಷ ಜಿ.ಎಂ.ಸತೀಶ್, ಮ್ಯಾಮ್ಕೋಸ್ ನಿರ್ದೇಶಕ ಕೆ.ಎಂ.ಶ್ರೀನಿವಾಸ್, ಮುಖಂಡರಾದ ವೆಂಕಟೇಶ ಭಟ್, ನೂತನಕುಮಾರ್, ರವಿಕುಮಾರ್, ಸುಧೀಂದ್ರ, ಪುಷ್ಪಾ ಲಕ್ಷ್ಮೀನಾರಾಯಣ, ಅವಿನಾಶ್ ಇತರರಿದ್ದರು.