ಮಳೆ ಕೊರತೆ ನಿರ್ವಹಣೆಗೆ ಕೇಂದ್ರ, ರಾಜ್ಯ ಚಿಂತನೆ

26
Published on

ಮೈಸೂರು: ರಾಜ್ಯದಲ್ಲಿ ಶೇ.70ರಷ್ಟು ಮಳೆ ಕೊರತೆಯಾಗಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಒಟ್ಟಿಗೆ ಯಾವ ರೀತಿ ನಿರ್ವಹಣೆ ಮಾಡಬೇಕೆಂದು ಯೋಚಿಸಿ ಯೋಜನೆ ರೂಪಿಸಲಾಗುವುದು ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ತಿಳಿಸಿದರು.


ನಗರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೇಶದಲ್ಲಿ ಒಂದೆಡೆ ವಿಪರೀತ ಮಳೆಯಾಗಿದ್ದರೆ, ಮತ್ತೊಂದು ಕಡೆ ಬರಗಾಲ ಸ್ಥಿತಿ ನಿರ್ಮಾಣವಾಗಿದೆ. ಹವಾಮಾನ ವೈಪರೀತ್ಯದಿಂದ ಅನೇಕ ಸಮಸ್ಯೆಗಳು ಸೃಷ್ಟಿಯಾಗುತ್ತಿದೆ. ಆರೋಪ-ಪ್ರತ್ಯಾರೋಪಗಳನ್ನು ಬಿಟ್ಟು ಜನರ ಬದುಕನ್ನು ಹಸನಗೊಳಿಸಲು ಪ್ರತಿಯೊಬ್ಬರೂ ಪಕ್ಷಾತೀತವಾಗಿ ಮುಂದಾಗಬೇಕಿದೆ ಎಂದರು.


ಪ್ರಧಾನಿ ನರೇಂದ್ರ ಮೋದಿ ಅವರು 9 ವರ್ಷಗಳ ಅಧಿಕಾರ ಪೂರೈಸಿದ್ದಾರೆ. ಮುಂದಿನ ವರ್ಷದ ಆಷಾಢ ಮಾಸ ಬರುವ ವೇಳೆಗೆ 3ನೇ ಬಾರಿ ನರೇಂದ್ರ ಮೋದಿ ಪ್ರಧಾನಿ ಆಗಬೇಕು ಎಂಬುದು ನನ್ನ ಕೋರಿಕೆಯಾಗಿದೆ. ದೇಶದ ರಕ್ಷಣೆ, ಅಭಿವೃದ್ಧಿಗಾಗಿ, ಇಡೀ ಪ್ರಪಂಚದಲ್ಲಿ ಭಾರತದ ಧ್ವಜವನ್ನು ಎತ್ತಿ ಹಿಡಿಯಲು ಮೋದಿ ಮತ್ತೊಮ್ಮೆ ಪ್ರಧಾನಿ ಆಗಬೇಕು ಎಂದು ಪ್ರಾರ್ಥಿಸಿ ಚಾಮುಂಡಿಬೆಟ್ಟ ಮೆಟ್ಟಿಲು ಹತ್ತುವೆ ಎಂದರು.


ರಾಜ್ಯದಲ್ಲಿ ಇತ್ತೀಚೆಗೆ ಹಲವಾರು ದುರ್ಘಟನೆಗಳು ನಡೆದಿರುವುದು ಮನಸ್ಸಿಗೆ ನೋವುಂಟು ಮಾಡಿದೆ. ಜೈನ ಮುನಿ ಹತ್ಯೆ, ತಿ.ನರಸೀಪುರದಲ್ಲಿ ಹಿಂದು ಕಾರ್ಯಕರ್ತ ಕೊಲೆಯಾಗಿದೆ. ಮನುಷ್ಯರ ಜೀವ ಬಲಿ ತೆಗೆದುಕೊಳ್ಳುವ ದುಷ್ಟ ಶಕ್ತಿಗಳು ತಲೆ ಎತ್ತುತ್ತಿವೆ. ತಾಯಿ ಚಾಮುಂಡೇಶ್ವರಿ ಇಂತಹ ದುಷ್ಟ ಶಕ್ತಿಗಳನ್ನು ಸಂಹಾರ ಮಾಡಬೇಕು ಎಂದು ಪ್ರಾರ್ಥಿಸಿದರು.


ತಿ.ನರಸೀಪುರದಲ್ಲಿ ಹತ್ಯೆಯಾದ ಹುಡುಗ ಹನುಮ ಜಯಂತಿ ಆಚರಣೆಯ ನೇತೃತ್ವವನ್ನು ವಹಿಸಿಕೊಂಡಿದ್ದ. ಕೇಸರಿ ಧ್ವಜ ಹಾರಿಸಿ ಹಿಂದುತ್ವದ ಕೆಲಸ ಮಾಡಿದ್ದ. ಆತನ ಹತ್ಯೆಯಾದ ಬಳಿಕ ಆ ಕುಟುಂಬದಲ್ಲಿ ಆತನ ತಾಯಿ, ಹೆಂಡತಿ, ಮಗಳು ಉಳಿದಿದ್ದಾರೆ. ಅವರಿಗೆ ರಕ್ಷಣೆ ನೀಡುವವರು ಯಾರು ಎಂದು ಪ್ರಶ್ನಿಸಿದರು.


ಕಾಂಗ್ರೆಸ್ ನಾಯಕರ ಜತೆಯಲ್ಲಿರುವವರು ವೇಣುಗೋಪಾಲ ನಾಯಕ್‌ನನ್ನು ಸಂಧಾನಕ್ಕೆ ಕರೆದು ಹತ್ಯೆ ಮಾಡಿದ್ದಾರೆ. ಇದರಿಂದ ಅವರಿಗೆ ಏನು ಲಾಭ ಸಿಕ್ಕಿತು? ಶಾಸಕರು, ಮಂತ್ರಿಗಳು, ನಾಯಕರು ಬರುತ್ತಾರೆ. ಆದರೆ, ಆ ಕುಟುಂಬದ ದುಃಖ ಕೇಳುವವರು ಯಾರು? ಎಂದರು.


ಸಿದ್ದರಾಮಯ್ಯ ಮುಖ್ಯಮಂತ್ರಿಯಾದರೆ ಒಂದು ಕೋಮಿನ ಜನರನ್ನು ಓಲೈಕೆ ಮಾಡುವ ಜತೆಗೆ ಅವರಿಗೆ ಶಕ್ತಿ ತುಂಬುವ ಕೆಲಸ ಮಾಡುತ್ತಾರೆಂದು ನಾವು ಹೇಳಿದ್ದೆವು. ಈಗ ಅದೇ ಕೆಲಸ ಆಗುತ್ತಿದೆ. ಆದರೂ ನಾವು ಎಲ್ಲವನ್ನೂ ಧೈರ್ಯದಿಂದ ಎದುರಿಸುತ್ತೇವೆ. ವೇಣುಗೋಪಾಲ ಕುಟುಂಬಕ್ಕೆ ಶಕ್ತಿ ತುಂಬುವ ಕೆಲಸ ಮಾಡುತ್ತೇವೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net