ಮಳೆ ಕಡಿಮೆಯಾದರೂ ನಿಲ್ಲದ ಹಾನಿ

D12MDG1P1 web
Published on

ಮೂಡಿಗೆರೆ: ಹತ್ತು ದಿನದಿಂದ ನಿರಂತರವಾಗಿ ಸುರಿಯುತ್ತಿದ್ದ ಮಳೆ ಶುಕ್ರವಾರ ಮಧ್ಯಾಹ್ನ ಬಿಡುವು ನೀಡಿತು. ಆದರೆ ಗಾಳಿ ಕಡಿಮೆಯಾಗಿಲ್ಲ. ಮನೆಗಳು, ಭೂ ಕುಸಿತ ಮುಂದುವರಿದಿದೆ. ಮೂಡಿಗೆರೆ ಗೆಂಡೇಹಳ್ಳಿ ಮುಖ್ಯರಸ್ತೆಗೆ ಶುಕ್ರವಾರ ಭಾರಿ ಗಾತ್ರದ ಮರ ಬಿದ್ದು ಸಂಚಾರಕ್ಕೆ ಅಡ್ಡಿಯುಂಟಾಗಿತ್ತು. ಧರ್ಮಸ್ಥಳ ವಿಪತ್ತು ನಿರ್ವಹಣಾ ತಂಡದವರು ಮರ ಕತ್ತರಿಸಿ ತೆರವುಗೊಳಿಸಿದ್ದಾರೆ. ಮಾಕೋನಹಳ್ಳಿ ಬಳಿ ಗೆಂಡೇಹಳ್ಳಿ ರಸ್ತೆಗೆ ಬಿದ್ದ ಮರವನ್ನೂ ತೆರವುಗೊಳಿಸಿದರು. ಸಂತೆಯಲ್ಲಿ ಮಧ್ಯಾಹ್ನದವರೆಗೂ ಗ್ರಾಹಕರೇ ಇರಲಿಲ್ಲ. ಮಳೆ ನಿಂತಾಗ ನಿಧಾನವಾಗಿ ಒಂದಷ್ಟು ಜನ ಖರೀದಿಗಾಗಿ ಸೇರಿದ್ದರಿಂದ ವಹಿವಾಟು ತಕ್ಕಮಟ್ಟಿಗೆ ನಡೆಯಿತು. ಕಾಫಿ ತೋಟದಲ್ಲಿ ನಿರಂತರವಾಗಿ ಮರಗಳು ಬೀಳುತ್ತಿರುವ ಕಾರಣ ಕಾರ್ವಿುಕರಿಗೆ ಕೆಲಸವಿಲ್ಲದೆ ಮನೆಯಲ್ಲೇ ಉಳಿದಿದ್ದಾರೆ. ಕೂಲಿಯಿಂದಲೇ ಜೀವನ ನಡೆಸಬೇಕಾದ ಕೆಲ ಕುಟುಂಬಗಳು ಆಹಾರ ಧಾನ್ಯದ ಕಿಟ್​ಗಾಗಿ ಕಾಯುತ್ತಿದ್ದಾರೆ.

ಮಾಜಿ ಸಚಿವರಾದ ಮೋಟಮ್ಮ, ಬಿ.ಬಿ.ನಿಂಗಯ್ಯ ಕೆಲ ಗ್ರಾಮಗಳಲ್ಲಿ ಪ್ರತ್ಯೇಕವಾಗಿ ಆಹಾರದ ಕಿಟ್ ವಿತರಿಸುತ್ತಿದ್ದಾರೆ. ಮನೆ ಕಳೆದುಕೊಂಡ ನಿರಾಶ್ರಿತರಿಗೆ ವೈಯಕ್ತಿಕವಾಗಿ ಧನಸಹಾಯ ಮಾಡುತ್ತಿದ್ದಾರೆ.

ಗುರುವಾರ ರಾತ್ರಿ ಧಾರಾಕಾರ ಮಳೆಗೆ ಕುನ್ನಳ್ಳಿ ಗ್ರಾಮದ ನೀಲಯ್ಯ, ಕೋಳೂರಿನ ದೊಡ್ಡಯ್ಯ, ದೇವವೃಂದ ಗ್ರಾಮದ ಸವಿತಾ, ಗೋಪಮ್ಮ, ತ್ರಿಪುರಾ ಗ್ರಾಮದ ಜಯಂತಿ, ಮೇಗೂರು ಗ್ರಾಮದ ಗಂಗಮ್ಮ, ರತ್ನಮ್ಮ, ಹಳೆಕೆರೆ ಗ್ರಾಮದ ಮುರುಡಯ್ಯ, ಉದುಸೆ ಗ್ರಾಮದ ಅರೇಳ್ಳಿ ಕಾಲನಿಯ ಸಿದ್ದಯ್ಯ ಹಾಗೂ ಸುಮಿತ್ರಮ್ಮ ಎಂಬುವರ ಮನೆಗಳು ಹಾನಿಗೀಡಾಗಿವೆ. ಫಲ್ಗುಣಿ ಗ್ರಾಪಂ ಮಾಜಿ ಅಧ್ಯಕ್ಷ ಎ.ಸಿ.ಅಯ್ಯೂಬ್ ಹಾಜಿ ಅವರ ಚಕ್ಕಮಕ್ಕಿಯಲ್ಲಿರುವ ವಾಣಿಜ್ಯ ಕಟ್ಟಡ ಕುಸಿದಿದೆ.

ಭೂಕುಸಿತ ಹಾಗೂ ಅಲ್ಲಲ್ಲಿ ಮರಗಳು ಬಿದ್ದು ತಾಲೂಕಿನಲ್ಲಿ 70ಕ್ಕೂ ಹೆಚ್ಚು ವಿದ್ಯುತ್ ಕಂಬಗಳು ಧರೆಗುರುಳಿವೆ. ಹೊಯ್ಸಳಲು, ಚಂದ್ರಾಪುರ, ಕಮ್ಮರಗೋಡು, ಮರೆಬೈಲು, ಜಿ.ಹೊಸಳ್ಳಿ, ಕಸ್ಕೆಬೈಲು, ಉದುಸೆ, ಕಿರುಗುಂದ, ಹಂತೂರು ಮತ್ತಿತರ ಗ್ರಾಮಗಳಲ್ಲಿ ವಿದ್ಯುತ್ ಕಾಣದೆ ವಾರ ಕಳೆದಿದೆ. ಕುಡಿಯುವ ನೀರಿಗೆ ಹಾಹಾಕಾರ ಉಂಟಾಗಿದೆ. ಮಳೆ ನೀರನ್ನೇ ಬಳಸುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net