

ಬೆಳಗಾವಿ: ನಗರ ಸೇರಿ ಜಿಲ್ಲೆಯಲ್ಲಿ ಕಳೆದ 3-4 ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ಜನ ಜೀವನ ಅಸ್ತವ್ಯಸ್ತವಾಗಿದ್ದು, ಕಟಾವಿಗೆ ಬಂದಿದ್ದ ಬೆಳೆ ಹಾನಿಯಾಗಿದೆ.
ಜಿಲ್ಲೆಯ ಖಾನಾಪುರ, ಗೋಕಾಕ ಅಥಣಿ, ರಾಯಬಾಗ, ಚಿಕ್ಕೋಡಿ, ಸವದತ್ತಿ, ಬೈಲಹೊಂಗಲ, ರಾಮದುರ್ಗ, ಬೆಳಗಾವಿ ತಾಲೂಕುಗಳಲ್ಲಿ ಭತ್ತ, ಮೆಕ್ಕೆಜೋಳ ಹಾಗೂ ಹತ್ತಿ ಬೆಳೆ ಹಾನಿಗೊಳಗಾಗಿದೆ. ಬೆಳಗಾವಿ, ಖಾನಾಪುರ ಕಿತ್ತೂರು ತಾಲೂಕಿನಲ್ಲಿ ಭತ್ತದ ಬೆಳೆಗೆ ಹಾನಿಯಾಗಿದೆ.
ಗೋಕಾಕ, ಅಥಣಿ ರಾಯಬಾಗ, ಚಿಕ್ಕೋಡಿ ತಾಲೂಕಿನಲ್ಲಿ ಮೆಕ್ಕೆಜೋಳ ಹಾನಿಗೊಳಗಾಗಿದೆ. ಸವದತ್ತಿ, ಬೈಲಹೊಂಗಲ, ರಾಮದುರ್ಗ ತಾಲೂಕಿನಲ್ಲಿ ಹತ್ತಿ ಬೆಳೆಗೆ ಹಾನಿಯಾಗಿದೆ. ಕಟಾವಿಗೆ ಬಂದಿದ್ದ ಬೆಳೆಗಳೆಲ್ಲ ಜಲಾವೃತ್ತಗೊಂಡಿದ್ದು, ರೈತರು ಭೀತಿಗೊಳಗಾಗಿದ್ದಾರೆ.
ಇನ್ನೇನು ಕಟಾವು ಮಾಡಬೇಕಿದ್ದ ಈರುಳ್ಳಿ ಬೆಳೆಗೂ ಮಳೆಯಿಂದ ಹಾನಿಯಾಗಿದ್ದು, ರೈತರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ತೋಟಗಾರಿಕೆ ಬೆಳೆಗಳು ಹಾನಿಯಾಗಿದ್ದು, ಅಧಿಕಾರಿಗಳು ನಷ್ಟದ ಪ್ರಮಾಣ ಲೆಕ್ಕ ಹಾಕುತ್ತಿದ್ದಾರೆ.