ಮೈಸೂರು: ಹಗರಣಗಳಲ್ಲಿಯೇ ಮುಳುಗೇಳುತ್ತಿರುವ ಬಿಜೆಪಿ ನಾಯಕರು, ಭೀಕರ ಮಳೆಯಿಂದ ಅಗಿರುವ ತೊಂದರೆ ಪರಿಹರಿಸದೆ ಕಾಂಗ್ರೆಸ್ ಇದಕ್ಕೆಲ್ಲಾ ಕಾರಣ ಎನ್ನುವ ಹಾಸ್ಯಾಸ್ಪದ, ಮೂರ್ಖತನದ ನಡುವಳಿಕೆ ತೋರುತ್ತಿದ್ದಾರೆ ಎಂದು ಕೆಪಿಸಿಸಿ ವಕ್ತಾರ ಎಚ್.ಎ.ವೆಂಕಟೇಶ್ ಟೀಕಿಸಿದ್ದಾರೆ.
ಬೆಲೆ ಏರಿಕೆ, ನಿರುದ್ಯೋಗ ಸೇರಿದಂತೆ ಇನ್ನಿತರೆ ಸಮಸ್ಯೆಯಿಂದ ಜನರು ಈಗಾಗಲೇ ತತ್ತರಿಸಿದ್ದಾರೆ. ಹಗರಣದಲ್ಲಿಯೇ ಬಿಜೆಪಿ ನಾಯಕರು ಮುಳುಗಿದ್ದು, ಜನರು ಬೇಸತ್ತಿದ್ದಾರೆ. ಆಗಾಗಿ ಜನರ ಗಮನ ಬೇರೆಡೆ ಸೆಳೆಯಲು ಕಸರತ್ತು ಶುರುಮಾಡಿದ್ದಾರೆ. ಭೀಕರ ಮಳೆಯಿಂದ ಬೆಂಗಳೂರು ಸೇರಿದಂತೆ ನಾಡಿನ ಜನರನ್ನು ರಕ್ಷಿಸುವ ಶಕ್ತಿ ಬಿಜೆಪಿ ನಾಯಕರಿಗಿಲ್ಲ ಎಂದು ಹೇಳಿಕೆಯಲ್ಲಿ ಆರೋಪಿಸಿದ್ದಾರೆ.
ರಾಜ್ಯ ಈಗಿರುವ ಸಂಕಷ್ಟದ ದಿನಗಳಲ್ಲಿ ಬೇಕಾಗಿರುವುದು ಹಗರಣದ ತನಿಖೆ ಎಂದು ದಾರಿತಪ್ಪಿಸುವ ಹೇಳಿಕೆಯಲ್ಲ. ಇದಕ್ಕೆ ಬದಲಾಗಿ- ನಾಲ್ಕು ವರ್ಷಗಳ ಹಿಂದೆ ಸಿದ್ದರಾಮಯ್ಯ ಅವರು ನೀಡಿದ ಸಮರ್ಥ ಹಾಗೂ ಜನಪರ ಆಡಳಿತದ ವೈಖರಿಯನ್ನು ಈ ಸರ್ಕಾರ ಅನುಸರಿಸಬೇಕಾಗಿದೆ. ಅವರ ಮಾದರಿ ಮುಂದಿಟ್ಟುಕೊಂಡು ನೊಂದವರಿಗೆ ನೆರವಾಗಬೇಕಿದೆ ಎಂದು ಒತ್ತಾಯಿಸಿದ್ದಾರೆ.
ಆದರೆ ಬಿಜೆಪಿಯ ಜನವಿರೋಧಿ ನಾಯಕರಿಗೆ ಇಂತಹ ಒಳ್ಳೆತನ ಅಪಥ್ಯ. ಇಲ್ಲದ ಹಗರಣಗಳನ್ನು ಹುಡುಕುವ ಚಟ ಇವರಿಗೆ ಅಂಟಿಕೊಂಡಿದೆ. ಇದರ ಪರಿಣಾಮವಾಗಿ ಇವರು ಜನರ ಮುಂದೆ ಮತ್ತೊಮ್ಮೆ ವ್ಯಂಗ್ಯದ ವಸ್ತುಗಳಾಗುವುದರಲ್ಲಿ ಯಾವುದೇ ಸಂಶಯವಿಲ್ಲ ಎಂದು ಟೀಕಿಸಿದ್ದಾರೆ.