

ಹಿರೀಸಾವೆ: ಹೋಬಳಿಯ ಡಿ.ತುಮಕೂರು ಗ್ರಾಮದಲ್ಲಿ ಗುರುವಾರ ಸಂಜೆ ಸುರಿದ ಮಳೆಗೆ ಮನೆಯೊಂದರ ಗೋಡೆ ಕುಸಿದಿದೆ.
ಕಳೆದ ಎರಡು ವಾರದಿಂದ ವ್ಯಾಪ್ತಿಯಲ್ಲಿ 2-3 ಬಾರಿ ಮಳೆ ಸುರಿದಿದೆ. ಗುರುವಾರ ಸಂಜೆ ಸುಮಾರು 4 ಗಂಟೆಯಲ್ಲಿ ಮಳೆ ಪ್ರಾರಂಭಗೊಂಡು 6 ಗಂಟೆ ವರೆಗೂ ಧಾರಾಕಾರವಾಗಿ ಸುರಿಯಿತು.
ಇದರಿಂದ ರೇಣುಕಮ್ಮ ಅವರ ಮನೆಯ ಒಂದು ಬದಿಯ ಗೋಡೆ ಕುಸಿದು ಬಿದ್ದಿದೆ. ಮಳೆ ಸುರಿಯುತಿದ್ದರಿಂದ ರೇಣುಕಮ್ಮ ಅಡುಗೆ ಕೋಣೆಯೊಳಗೆ ಕೆಲಸದಲ್ಲಿ ನಿರತರಾಗಿದ್ದರೂ ಯಾವುದೇ ಹಾನಿ ಸಂಭವಿಸಿಲ್ಲ.
ಕೆಲ ವರ್ಷಗಳ ಹಿಂದೆ ಈಕೆಯ ಪತಿ ಕೆಂಪೇಗೌಡ ನಿಧನರಾಗಿದ್ದಾರೆ. ರೇಣುಕಮ್ಮ ಒಬ್ಬರೇ ಮನೆಯಲ್ಲಿ ವಾಸವಿದ್ದಾರೆ. ಸದ್ಯ ಮನೆ ಗೋಡೆ ಕುಸಿತದಿಂದ ಈಕೆ ಸಂಕಷ್ಟಕ್ಕೆ ಸಿಲುಕಿದ್ದಾರೆ. ದಿಡಗ ಗ್ರಾಪಂ ಅಧಿಕಾರಿಗಳು ಹಾಗೂ ಸದಸ್ಯರು ಸ್ಥಳಕ್ಕೆ ಶುಕ್ರವಾರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಅಗತ್ಯ ಪರಿಹಾರ ಕಲ್ಪಿಸಿಕೊಡಬೇಕೆಂದು ಅಧಿಕಾರಿಗಳಿಗೆ ರೇಣುಕಮ್ಮ ಮನವಿ ಮಾಡಿದ್ದಾರೆ.