ಮಳೆ ಅಬ್ಬರಕ್ಕೆ ಅಡಕೆ ತೋಟ ಜಲಾವೃತ

BIRUR rain-1
ಬೀರೂರು-ಅಜ್ಜಂಪುರ ರಸ್ತೆ ಬದಿಯ ಅಡಕೆ ತೋಟ ಜಲಾವೃತವಾಗಿರುವುದು.
Published on

ಬೀರೂರು: ಹೋಬಳಿಯಾದ್ಯಂತ ಮಳೆ ಆರ್ಭಟಿಸಿತು. ಪಟ್ಟಣದ ಅಜ್ಜಂಪುರ ರಸ್ತೆಯ ಕಾಲುವೆ ಭರ್ತಿಯಾಗಿ ಪಕ್ಕದ ಅಡಕೆ ತೋಟ ಜಲಾವೃತಗೊಂಡಿದೆ.

ಗಾಳಿಹಳ್ಳಿ ಕೆರೆ ಭರ್ತಿಯಾದ ಹಿನ್ನೆಲೆಯಲ್ಲಿ ಕೋಡಿಬಿದ್ದ ನೀರು ದೊಡ್ಡ ಕಾಲುವೆಯಿಂದ ಭಾರಿ ಪ್ರಮಾಣದಲ್ಲಿ ಹರಿಯುತ್ತಿದೆ. ಅಲ್ಲಿಂದ ರಹೀಂಸಾಬ್ ಲೇಔಟ್ ಮೂಲಕ ಸಂಪೂರ್ಣ ಭರ್ತಿಯಾಗಿ ಒಳಚರಂಡಿ ಮೂಲಕ ದೊಡ್ಡ ಕಾಲುವೆಗೆ ಹರಿಯುತ್ತಿದೆ. ಬೈಪಾಸ್ ರಸ್ತೆ ನಿರ್ಮಾಣ ಸಂದರ್ಭದಲ್ಲಿ ಇದ್ದ ದೊಡ್ಡ ಕಾಲುವೆಯನ್ನು ಮುಚ್ಚಿ ಸಣ್ಣ ಡಕ್ ನಿರ್ಮಾಣ ಮಾಡಲಾಗಿತ್ತು. ಆಗಲೂ ರಸ್ತೆ ಮೇಲೆ ನೀರು ಹರಿದು ಪತ್ರಿಕೆಗಳ ವರದಿಗಳ ಪರಿಣಾಮ ಶಾಸಕ ಮತ್ತು ಸಂಸದರು ಸ್ಥಳಕ್ಕೆ ಭೇಟಿ ನೀಡಿ ಹೆದ್ದಾರಿ ವಿಭಾಗದ ಇಂಜಿನಿಯರ್, ತಹಸೀಲ್ದಾರ್ ಮತ್ತು ಸಂಬಂಧಪಟ್ಟ ಇಲಾಖೆಯವರನ್ನು ಸ್ಥಳಕ್ಕೆ ಕರೆಸಿಕೊಂಡು ಶೀಘ್ರವಾಗಿ ಸಮಸ್ಯೆ ಬಗೆಹರಿಸಿಕೊಡುವಂತೆ ಸೂಚಿಸಿದ್ದರು. ಅದರಂತೆ ಹೆದ್ದಾರಿ ಪ್ರಾಧಿಕಾರದವರು ಬೈಪಾಸ್ ರಸ್ತೆಗೆ ನಿರ್ಮಿಸಿದ್ದ ಸೇತುವೆ ಕೆಳಭಾಗದಲ್ಲಿ ಸಣ್ಣ ಚರಂಡಿ ನಿರ್ಮಿಸಿ ನೀರು ಹರಿದುಹೋಗಲು ಅನುವು ಮಾಡಿಕೊಟ್ಟಿದ್ದರು.

ಒಂದು ವಾರದಿಂದ ಬೀರೂರು ಹೋಬಳಿ ಮತ್ತು ಪಟ್ಟಣದಲ್ಲಿ ವಿಪರೀತ ಮಳೆಯಾಗುತ್ತಿರುವುದರಿಂದ ಗಾಳಿಹಳ್ಳಿ ಕೆರೆ ನೀರು ಹೆಚ್ಚಿನ ಪ್ರಮಾಣದಲ್ಲಿ ಹರಿದು ಬರುತ್ತಿದ್ದು, ಅವೈಜ್ಞಾನಿಕ ಡಕ್ ನಿರ್ಮಾಣ ಮತ್ತು ನೀರು ದೊಡ್ಡ ಚರಂಡಿಯಿಂದ ಮುಂದೆ ಹರಿದು ಹೋಗಲು ಸೂಕ್ತ ವ್ಯವಸ್ಥೆ ಇಲ್ಲದ ಕಾರಣದಿಂದ ತುಂಬಿ ಹರಿದು ಅಕ್ಕಪಕ್ಕದ ತೋಟ, ಜಮೀನು ಹಾಗೂ ಯುಜಿಡಿಯ ಟ್ರೀಟ್‌ಮೆಂಟ್ ಪ್ಲಾಂಟ್‌ಗಳನ್ನು ಆವರಿಸಿಕೊಂಡು ಹರಿಯುತ್ತಿದೆ. ಪರಿಣಾಮವಾಗಿ ಅಕ್ಕಪಕ್ಕದ ತೋಟ ಮತ್ತು ಜಮೀನುಗಳಲ್ಲಿ ನೀರು ತುಂಬಿದ್ದು, ಮಾಲೀಕರು ತೋಟಕ್ಕೆ ತೆರಳದಂತಾಗಿದೆ.

ಈ ಕುರಿತು ಮಾಹಿತಿ ನೀಡಿದ ಈರೋಜಿ ರಾವ್, ಬೈಪಾಸ್ ರಸ್ತೆ ನಿರ್ಮಾಣದಲ್ಲಿ ಆಗಿರುವ ಅವೈಜ್ಞಾನಿಕ ಕಾಮಗಾರಿಯಿಂದ ನನ್ನ ತೋಟದಲ್ಲಿ ನೀರು ಸಂಗ್ರಹವಾಗಿದೆ. ಅಡಕೆ ಸಲಿನ ಕೊಯ್ಲು ಆಗಬೇಕಿತ್ತು. ಆದರೆ ಈ ರೀತಿ ನೀರು ಹರಿಯುತ್ತಿರುವುದರಿಂದ ಕೊಯ್ಲಿಗೆ ಅಡ್ಡಿಯಾಗಿದೆ. ತೇವಾಂಶ ಹೆಚ್ಚಳದಿಂದ ಅಡಕೆ ಮರಗಳಿಗೆ ಹಾನಿಯಾಗಲಿದೆ. ಈ ಹಿಂದೆಯೇ ಪುರಸಭೆ, ತಹಸೀಲ್ದಾರ್, ಉಪವಿಭಾಗಾಧಿಕಾರಿ ಹಾಗೂ ಜಿಲ್ಲಾಧಿಕಾರಿಗೂ ಮನವಿ ನೀಡಿದರೂ ಪ್ರಯೋಜನವಾಗಿಲ್ಲ ಎಂದು ದೂರಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net