

ವಿಜಯವಾಣಿ ಸುದ್ದಿಜಾಲ ನೆಲಮಂಗಲ
ಜಿಲ್ಲಾದ್ಯಂತ ಬಾರಿ ಪ್ರಮಾಣದಲ್ಲಿ ಮಳೆಯಾಗುತ್ತಿದ್ದು, ಪ್ರತಿಯೊಬ್ಬ ಅಧಿಕಾರಿಗಳು ಕೇಂದ್ರ ಸ್ಥಾನದಲ್ಲಿದ್ದು ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಮುನ್ನೆಚ್ಚರಿಕೆ ವಹಿಸಬೇಕು ಎಂದು ಜಿಲ್ಲಾ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ.ಎನ್.ಅನುರಾಧಾ ತಿಳಿಸಿದರು.
ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಗುರುವಾರ ಅಯೋಜಿಸಿದ್ದ ತಾಲೂಕುಮಟ್ಟದ ಅಧಿಕಾರಿಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದರು. ಜಿಲ್ಲಾದ್ಯಂತ ವಾರದಿಂದ ಬಾರಿ ಪ್ರಮಾಣದ ಮಳೆಯಾಗುತ್ತಿದ್ದು, ಕೆಲ ಮನೆಗಳಿಗೆ ನೀರು ನುಗ್ಗಿ ಆಸ್ತಿ-ಪಾಸ್ತಿ ನಷ್ಟವಾಗಿದೆ. ಸಂಕಷ್ಟದಲ್ಲಿರುವ ವ್ಯಕ್ತಿಗಳಿಗೆ ಸ್ಪಂದಿಸುವ ಕಾರ್ಯ ಪ್ರತಿಯೊಬ್ಬ ಅಧಿಕಾರಿಯ ಕರ್ತವ್ಯವಾಗಿದೆ. ಈ ನಿಟ್ಟಿನಲ್ಲಿ ಕೇಂದ್ರ ಸ್ಥಾನದಲ್ಲಿದ್ದು, ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಮುನ್ನೆಚ್ಚರಿಕೆ ವಹಿಸಬೇಕಿದೆ ಎಂದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಶಿಕ್ಷಣ ಇಲಾಖೆ ವ್ಯಾಪ್ತಿಯಲ್ಲಿ ಬರುವ ಅಂಗನವಾಡಿ, ಶಾಲಾ ಮಕ್ಕಳ ಬಗ್ಗೆ ಹೆಚ್ಚಿನ ನಿಗಾವಹಿಸಬೇಕು. ಜತೆಗೆ ತಗ್ಗು ಪ್ರದೇಶದಲ್ಲಿ ಹಾಗೂ ರಾಜಗಾಲುವೆ ಹಾಗೂ ಕೆರೆ ಪಕ್ಕದಲ್ಲಿ ವಾಸ ಮಾಡುವವರ ಬಗ್ಗೆ ಹೆಚ್ಚಿನ ಗಮನ ಹರಿಸಬೇಕು. ಜಿಲ್ಲೆಯಲ್ಲಿ ಯಾವುದೇ ತೊಂದರೆಯಾಗದಂತೆ ಪ್ರತಿಯೊಬ್ಬ ಅಧಿಕಾರಿಗಳು ಕರ್ತವ್ಯ ನಿರ್ವಹಿಸಬೇಕು ಎಂದರು.
ಜಿಪಂ ಕಾರ್ಯದರ್ಶಿ ರಮೇಶ್, ಜಿಲ್ಲಾ ಲೆಕ್ಕ ಪರಿಶೋಧಕ ರಾಮಕೃಷ್ಣ, ತಾಪಂ ಇಒ ಲಕ್ಷ್ಮೀನಾರಾಯಣ್, ವ್ಯವಸ್ಥಾಪಕ ಗಂಗರಂಗಯ್ಯ, ಬಿಇಒ ರಮೇಶ್, ತಾಲೂಕು ಅರೋಗ್ಯಾಧಿಕಾರಿ ಡಾ.ಯೋಗೀಶ್, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕಿ ಎಂ.ವಾಣಿ, ಶಿಶು ಯೋಜನಾಧಿಕಾರಿ ನಾಗೇಶ್, ಕಾರ್ಮಿಕ ನಿರೀಕ್ಷಕಿ ನಾಗರತ್ನಾ, ಮೀನುಗಾರಿಕೆ ಇಲಾಖೆ ಸಹಾಯಕ ನಿರ್ದೇಶಕಿ ಅಮೃತಾ, ಆಕ್ಷರ ದಾಸೋಹ ಸಹಾಯಕ ನಿರ್ದೇಶಕ ಶಿವಕುಮಾರ್, ಪಿಡಿಒ ಶೋಭರಾಣಿ, ಅಭಿಲಾಷ್, ರೇಖಾ, ಪ್ರಶಾಂತ್, ಮಂಜುನಾಥ್ ಇದ್ದರು.
ವಿಶೇಷ ಕಾಳಜಿ ವಹಿಸಿ: ಗ್ರಾಮೀಣ ಭಾಗದ ಸಾರ್ವಜನಿಕರಿಗೆ ಸರ್ಕಾರ ಕೋಟ್ಯಂತರ ರೂ.ಅನುದಾನ ಒದಗಿಸುತ್ತಿದೆ. ಆದರೆ, ಯೋಜನೆಗಳು ಸಮರ್ಪಕ ರೀತಿಯಲ್ಲಿ ಅನುಷ್ಠಾನಗೊಳ್ಳುತ್ತಿಲ್ಲ. ಈ ಬಗ್ಗೆ ತಾಪಂ ಕಾರ್ಯನಿರ್ವಾಹಕ ಅಧಿಕಾರಿಗಳು ವಿಶೇಷ ಕಾಳಜಿ ವಹಿಸಿ, ಜವಾಬ್ದಾರಿಯಿಂದ ಯೋಜನೆಗಳು ಫಲಪ್ರದವಾಗುವಂತೆ ನೋಡಿಕೊಳ್ಳಬೇಕು. ಪ್ರತಿಯೊಂದು ಗ್ರಾಮ ಪಂಚಾಯಿತಿಗೂ ಭೇಟಿ ನೀಡಿ, ಯೋಜನೆಗಳು ಹಾಗೂ ಕಾಮಗಾರಿಗಳನ್ನು ಪರಿಶೀಲಿಸಬೇಕು ಎಂದು ಕೆ.ಎನ್.ಅನುರಾಧಾ ತಿಳಿಸಿದರು. ಬೇಜವಾಬ್ದಾರಿ ತೋರಿದ ಪಿಡಿಒ ಮೇಲೆ ಸೂಕ್ತ ಕ್ರಮಕೈಗೊಳ್ಳಬೇಕು. ಜತೆಗೆ ತಾಲೂಕಿನ ಕೆಲವಡೆ ಶೌಚಗೃಹ ನಿರ್ಮಾಣ ಕಾರ್ಯ ಹಾಗೂ ತಾಲೂಕಿನಲ್ಲಿ ಕಡ್ಡಾಯವಾಗಿ ಶಾಲೆಯಲ್ಲಿ ಶೌಚಗೃಹ ನಿರ್ಮಾಣ ಕಾರ್ಯಕ್ಕೆ ಮುಂದಾಗಬೇಕು. ಶಾಲೆ ಆವರಣದಲ್ಲಿ ಮಕ್ಕಳ ಸುರಕ್ಷೆಗಾಗಿ ಕಾಂಪೌಂಡ್ ನಿರ್ಮಾಣಕ್ಕೆ ಅನುದಾನ ನೀಡಿದ್ದು, ಸಮರ್ಪಕ ಬಳಕೆಯಾಗಿಲ್ಲ. ಅದಷ್ಟು ಬೇಗ ಪಿಡಿಒಗಳು ಕಾಮಗಾರಿ ಆರಂಭಿಸಬೇಕು ಎಂದರು.
ಸ್ವಚ್ಛ ಭಾರತ್ ಮಿಷನ್: ಇತ್ತೀಚೆಗೆ ತಾಲೂಕಿನಲ್ಲಿ ಲೋಕಾಯುಕ್ತ ಅಧಿಕಾರಿಗಳು ಭೇಟಿ ನೀಡುತ್ತಿದ್ದು, ಕಸದ ಸಮಸ್ಯೆ ಬಗೆಹರಿಸುವಂತೆ ನಿರ್ದೇಶನ ನೀಡಿದ್ದಾರೆ. ಆದ್ದರಿಂದ ಪಿಡಿಒಗಳು ತಮ್ಮ ವ್ಯಾಪ್ತಿಯಲ್ಲಿ ಕಸ ಸಮಸ್ಯೆ ಬಗೆಹರಿಸಬೇಕು. ತಪ್ಪಿತಸ್ಥರಿಗೆ ದಂಡ ವಿಧಿಸಿ, ಸ್ಥಳೀಯ ಪೊಲೀಸ್ ಠಾಣೆಗೆ ದೂರು ನೀಡಿ, ಎ್ಐಆರ್ ದಾಖಲಿಸುವಂತೆ ಜಿಪಂ ಸಿಇಒ ಅನುರಾಧಾ ಪಿಡಿಒಗಳಿಗೆ ನಿರ್ದೇಶನ ನೀಡಿದರು.
150 ಗ್ರಾಮಗಳಲ್ಲಿ ಕಾಮಗಾರಿ ಪ್ರಗತಿ: ತಾಲೂಕಿನ 311 ಗ್ರಾಮಗಳಲ್ಲಿ ಜಲ ಜೀವನ್ ಮಿಷನ್ ಯೋಜನೆಗೆ ಟೆಂಡರ್ ಆಗಿದ್ದು, 125 ಗ್ರಾಮಗಳಲ್ಲಿ ಮುಕ್ತಾಯಗೊಂಡಿದೆ. 150 ಗ್ರಾಮಗಳಲ್ಲಿ ಕಾಮಗಾರಿ ಪ್ರಗತಿಯಲ್ಲಿದೆ. ತಾಲೂಕಿನ ಇಸ್ಮಾಂಪುರ ಸೇರಿ ಕೆಲ ಗ್ರಾಮದಲ್ಲಿ ಕಾಮಗಾರಿ ಆರಂಭಗೊಂಡಿಲ್ಲ. ಅದಷ್ಟು ಶೀಘ್ರ ಆರಂಭ ಮಾಡಲಾಗುವುದು. ಜತೆಗೆ ಜಲ ಜೀವನ್ ಮಿಷನ್‌ಗೆ ಸಂಬಂಧಿಸಿದಂತೆ ತಾಲೂಕಿನಲ್ಲಿ 211 ಓವರ್ ಹೆಡ್‌ಟ್ಯಾಕ್ ನಿರ್ಮಾಣಕ್ಕೆ ಟೆಂಡರ್ ಆಗಿದ್ದು, 100ಕ್ಕೂ ಹೆಚ್ಚು ಟ್ಯಾಂಕ್ ನಿರ್ಮಾಣ ಮಾಡಲಾಗಿದೆ. 25ಕ್ಕೂ ಹೆಚ್ಚು ಕಾಮಗಾರಿ ಪ್ರಗತಿಯಲ್ಲಿದ್ದು, ಸುಮಾರು 70ಕ್ಕೂ ಹೆಚ್ಚು ಟ್ಯಾಂಕ್ ನಿವೇಶನ ಗುರುತಿಸಿಕೊಡಬೇಕಿದೆ. ಜತೆಗೆ ಬೆಸ್ಕಾಂಗೆ ವಿದ್ಯುತ್ ಸಂಪರ್ಕ ಕಲ್ಪಿಸುವಂತೆ ಮನವಿ ಮಾಡಿದ್ದು, ಬಿಲ್ ಪ್ರಕ್ರಿಯೆ ಹಂತದಲ್ಲಿ ಅದಷ್ಟು ಶೀಘ್ರ ವಿದ್ಯುತ್ ಸಂಪರ್ಕ ಕಲ್ಪಿಸಲಾವುದು ಎಂದು ಕುಡಿಯುವ ನೀರು ನೈರ್ಮಲ್ಯ ಇಲಾಖೆ ಮುಖ್ಯ ಕಾರ್ಯಾಲಯ ಅಭಿಯಂತರ ದೇವರಾಜು ಮಾಹಿತಿ ನೀಡಿದರು.
ಜಲಜೀವನ್ ಮಿಷನ್ ಕೇಂದ್ರ ಸರ್ಕಾರದ ಮಹತ್ವದ ಯೋಜನೆಯಾಗಿದ್ದು, ಅದಷ್ಟು ಶೀಘ್ರ ಕಾಮಗಾರಿ ಪೂರ್ಣಗೊಳಿಸುವ ಕಾರ್ಯ ಮಾಡಬೇಕು. ಪಿಡಿಒ ಹಾಗೂ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಸಹಕಾರ ನೀಡಬೇಕು. ಈ ಕುರಿತು ಸಂಬಂಧಪಟ್ಟ ಇಒ ಮೇಲ್ವಿಚಾರಣೆ ನಡೆಸಬೇಕು ಎಂದು ಸಿಇಒ ಅನುರಾಧಾ ತಿಳಿಸಿದರು.
ಪಿಡಿಒಗಳಿಗೆ ತರಾಟೆ: ಸರ್ಕಾರ ಗ್ರಾಮೀಣ ಜನರಿಗೆ ಸೌಲಭ್ಯವನ್ನು ಕಲ್ಪಿಸಿಕೊಡುವುದಕ್ಕಾಗಿ ಕೋಟ್ಯಂತರ ಅನುದಾನ ಒದಗಿಸುತ್ತಿದೆ. ಆದರೆ, ನೀವೆಲ್ಲ(ಪಿಡಿಒ)ಗಳು ಏನು ಮಾಡ್ತಿದ್ದೀರಾ? ಏಕೆ ಹೀಗೆ ಮಾಡ್ತಾ ಇದ್ದೀರಿ? ಹಣವಿದೆ, ಇಂಜಿನಿಯರ್ ಸಮಸ್ಯೆ ಇಲ್ಲ. ಇಷ್ಟೆಲ್ಲ ಇದ್ದರೂ ಕೆಲಸ ಏಕೆ ಪ್ರಾರಂಭಿಸಿಲ್ಲ ಎಂದು ಪಿಡಿಒಗಳಿಗೆ ಜಿಪಂ ಸಿಇಒ ತರಾಟೆಗೆ ತೆಗೆದುಕೊಂಡರು.