ಮಳಿಗೆ ಬಹಿರಂಗ ಹರಾಜಿನಲ್ಲಿ ಅವ್ಯವಹಾರ

23kglphoto2...
ಕೊಳ್ಳೇಗಾಲ ಬಸ್ ಟರ್ಮಿನಲ್ ಸ್ಥಳಕ್ಕೆ ಗುರುವಾರ ನಗರಸಭಾಧ್ಯಕ್ಷೆ ಹಾಗೂ ಸದಸ್ಯರು ಪೌರಾಯುಕ್ತರ ಜತೆಗೂಡಿ ಭೇಟಿ ನೀಡಿ ಕೆಎಸ್‌ಆರ್‌ಟಿಸಿ ಜೂನಿಯರ್ ಇಂಜಿನಿಯರ್‌ಗೆ ತರಾಟೆ ತೆಗೆದುಕೊಂಡರು.
Published on

ಕೊಳ್ಳೇಗಾಲ: ಪಟ್ಟಣದ ಹೈಟೆಕ್ ಬಸ್ ಟರ್ಮಿನಲ್ ಮಳಿಗೆಗಳ ಬಹಿರಂಗ ಹರಾಜು ಪ್ರಕ್ರಿಯೆ ನಿಯಮಾನುಸರ ನಡೆದಿಲ್ಲ. ಅವ್ಯವಹಾರದ ಶಂಕೆ ವ್ಯಕ್ತವಾಗಿದೆ ಎಂದು ನಗರಸಭೆ ಅಧ್ಯಕ್ಷರು ಹಾಗೂ ಸದಸ್ಯರು ಆರೋಪಿಸಿದ್ದು, ಗುರುವಾರ ನಗರ ಸಭೆ ಕಚೇರಿಯಲ್ಲಿ ಪೌರಾಯುಕ್ತರ ವಿರುದ್ಧ ಕೆಂಡಾಮಂಡಲವಾದ ಅಧ್ಯಕ್ಷರು, ಹಾಗೂ ಸದಸ್ಯರು, ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

ಬಸ್ ಟರ್ಮಿನಲ್ ಕಟ್ಟಡದ ವಾಣಿಜ್ಯ ಸಂಕೀರ್ಣದಲ್ಲಿ 3 ಮಳಿಗೆಗಳನ್ನು ಬಹಿರಂಗ ಹರಾಜು ಮಾಡದೇ, ಕೌನ್ಸಿಲ್ ಬಾಡಿಯ ಅನುಮತಿ ಅಥವಾ ಅಧ್ಯಕ್ಷರಾದಿಯಾಗಿ ಸದಸ್ಯರೊಂದಿಗೆ ಚರ್ಚಿಸದೇ, 2022 ಅ.25 ರಂದು ನಗರಸಭಾ ಪೌರಾಯುಕ್ತ ಎಸ್.ನಂಜುಂಡಸ್ವಾಮಿ ಅವರು, ನಗರಸಭೆಯ ಕೆಎಸ್‌ಆರ್‌ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿ ಶ್ರೀನಿವಾಸ್ ಅವರಿಗೆ ಪತ್ರ ಬರೆದಿದ್ದಾರೆ ಎಂದು ಅಧ್ಯಕ್ಷೆ ಸಿ.ಎನ್.ರೇಖಾ ರಮೇಶ್, ಸದಸ್ಯ ಜಿ.ಪಿ.ಶಿವಕುಮಾರ್ ಅಸಮಾಧಾನ ಹೊರ ಹಾಕಿದರು.

ಇದಕ್ಕೆ ಪ್ರತಿಕ್ರಿಯಿಸಿದ ಪೌರಾಯುಕ್ತರು, ನ್ಯಾಯಾಲಯದ ಮೇಟ್ಟಿಲೇರಿರುವ ಐಡಿಎಸ್‌ಎಂಟಿ ಮಳಿಗೆ ಬಾಡಿಗೆದಾರನ್ನು ಸಮಾಧಾನಪಡಿಸಿ ದಾವೆ ವಾಪಸ್ ತೆಗೆಸಲು ಇದ್ದ ಇದೊಂದು ಮಾರ್ಗವನ್ನು ಬಳಸಿಕೊಂಡು ಕೆಎಸ್‌ಆರ್‌ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿಗೆ ಪತ್ರ ಬರೆದಿದ್ದೇನೆ. ಇದು ತಪ್ಪು ಎಂಬುದಾದರೆ, ನೀವು ನಮ್ಮ ಮೇಲಿನ ಅಧಿಕಾರಿಗಳಿಗೆ ದೂರು ನೀಡಿ. ಈ ವಿಚಾರದಲ್ಲಿ ನನಗೆ ಅಧಿಕಾರ ಇರುವುದರಿಂದಲೇ ಹೀಗೆ ಮಾಡಿದ್ದೇನೆ ಎಂದರು.

ಈ ಮಾತಿಗೆ ಸದಸ್ಯರಾದ ಬಸ್ತೀಪುರ ಶಾಂತರಾಜು, ಎ.ಪಿ.ಶಂಕರ್, ಸುಮಾ ಸುಬ್ಬಣ್ಣ, ಜಯಮರಿ, ಜಯರಾಜ್, ಜಿ.ಎಂ.ಸುರೇಶ್, ರಾಘವೇಂದ್ರ, ವಿ.ಧರಣೇಶ್, ಮಾಜಿ ಸದಸ್ಯರಾದ ಅಕ್ಮಲ್‌ಪಾಷ, ಮುಡಿಗುಂಡ ಶಾಂತರಾಜು ಕೆಂಡಮಂಡಲಾಗಿ ಆಯುಕ್ತರನ್ನು ನೀವು ಬೋರ್ಡ್ ಗಮನಕ್ಕೆ ತಾರದೇ ಪತ್ರ ಬರೆದಿರುವುದು ತಪ್ಪು ಎಂದು ಅಕ್ರೋಶ ವ್ಯಕ್ತಪಡಿಸಿದರು.

ನಗರಸಭೆಗೆ ಸೇರಿದ 2.06 ಎಕರೆ ವಿಸ್ತೀರ್ಣದಲ್ಲಿದ್ದ ಹಿಂದಿನ ಬಸ್ ನಿಲ್ದಾಣದ ಸ್ಥಳದಲ್ಲಿ 1.30 ಎಕರೆ ಸ್ಥಳವನ್ನು ಬಸ್ ಟರ್ಮಿನಲ್ ನಿರ್ಮಿಸಲು ಕೆಎಸ್‌ಆರ್‌ಟಿಸಿಗೆ ನೀಡಲಾಗಿದೆ. ಉಳಿದ 76 ಸೆಂಟ್ ಸ್ಥಳವನ್ನು ನಾವೇ ಉಳಿಸಿಕೊಂಡಿದ್ದೇವೆ. ಈ ಸ್ಥಳದಲ್ಲಿ ಐಡಿಎಸ್‌ಟಿಎಂಟಿ ಮಳಿಗೆ ಹಾಗೂ ನಿವೇಶನವಿದೆ. ವಾಸ್ತವ ಹೀಗಿದ್ದರೂ ಕೆಎಸ್‌ಆರ್‌ಟಿಸಿ ಅಧಿಕಾರಿಗಳು ತಮಗೆ ನೀಡಿದ ಸ್ಥಳದ ಗಡಿ ಮೀರಿ ನಗರಸಭೆಗೆ ಸೇರಿದ 40*15 ಚದುರ ಮೀಟರ್ ಸ್ಥಳವನ್ನು ಬಸ್ ನಿಲ್ಲುವ ಸ್ಥಳಕ್ಕೆ ಬಳಸಿಕೊಳ್ಳುವ ಉದ್ದೇಶದಿಂದ ಕಾಂಕ್ರಿಟ್ ಕಾಮಗಾರಿ ಮಾಡುತ್ತಿದ್ದರೂ ತಡೆಯದೆ ಸುಮ್ಮುನಿರುವುದೇಕೆ ಎಂದು ಪೌರಾಯುಕ್ತರನ್ನು ನಗರಸಭಾ ಸದಸ್ಯರು ಪ್ರಶ್ನಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಪೌರಾಯುಕ್ತರು, ಸ್ಥಳಕ್ಕೆ ನಗರಸಭೆ ಎಇಇ ಸುರೇಶ್ ಕುಮಾರ್ ಅವರನ್ನು ಕರೆಯಿಸಿ ವಿವರಣೆ ಕೊಡಿಸಿದರು. ಇದಕ್ಕೊಪ್ಪದ ಸದಸ್ಯರು ಅಧ್ಯಕ್ಷರೊಡಗೂಡಿ ಕಾಮಗಾರಿ ಸ್ಥಳಕ್ಕೆ ಅಧಿಕಾರಿಗಳೊಂದಿಗೆ ತೆರಳಿ ಪರಿಶೀಲಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net