ಮಳವಳ್ಳಿಯಲ್ಲಿ ಸಿಡಿ ಹಬ್ಬದ ಸಂಭ್ರಮ

IMG-20230204-WA0032
ಮಳವಳ್ಳಿ ಪಟ್ಟಣದಲ್ಲಿ ರಾತ್ರಿ ಪ್ರಾರಂಭವಾಗಿ ಶನಿವಾರ ಬೆಳಗ್ಗೆ ಪಟ್ಟಲದಮ್ಮ ದೇವಸ್ಥಾನದ ಆವರಣಕ್ಕೆ ಆಗಮಿಸಿದ ಸಿಡೀರಣ್ಣನನ್ನು ಹೊತ್ತು ಬಂದ ಸಿಡಿ ಬಂಡಿಗೆ ಭಕ್ತ ಸಮೂಹ ಹಣ್ಣ, ದವನ ಎಸೆದು ಭಕ್ತಿ ಸಮರ್ಪಿಸಿದರು.
Published on

ಮಳವಳ್ಳಿ: ಪಟ್ಟಣದಲ್ಲಿ ಸಿಡಿ ಹಬ್ಬವನ್ನು ಶುಕ್ರವಾರ ಮತ್ತು ಶನಿವಾರ ವಿಜೃಂಭಣೆಯಿಂದ ಆಚರಿಸಲಾಯಿತು. ಪಟ್ಟಲದಮ್ಮ ಹಬ್ಬದ ಅಂಗವಾಗಿ ಶುಕ್ರವಾರ ಬೆಳಗ್ಗಿನಿಂದಲೇ ದೇವಾಲಯದಲ್ಲಿ ಚಿಕ್ಕಮ್ಮ, ದೊಡ್ಡಮ್ಮ ತಾಯಿ ದೇವತೆಗಳ ಮೂಲವಿಗ್ರಹಗಳಿಗೆ ವಿವಿಧ ಫಲಪುಷ್ಪ, ರಸಾಯನದ ಅಭಿಷೇಕದ ಜತೆಗೆ ನೈವೇದ್ಯ, ಮಂಗಳಾರತಿ ನೆರವೇರಿಸಲಾಯಿತು. ವಿವಿಧ ಬಡಾವಣೆಗಳಿಂದ ಮಹಿಳೆಯರು ತಂಬಿಟ್ಟಿನ ಆರತಿಯನ್ನು ಹೊತ್ತು ತಂದು ದೇವಿಗೆ ಸಲ್ಲಿಸಿದರು.
ಸಂಜೆ ಸುತ್ತಮುತ್ತಲ ಹಲವು ಗ್ರಾಮಗಳ ಹಾಗೂ ಪಟ್ಟಣದ ರೈತರು ಪಟ್ಟಲದಮ್ಮ ದೇವಸ್ಥಾನದ ಆವಣದಲ್ಲಿ ನಡೆಯುವ ಕೊಂಡೋತ್ಸವಕ್ಕೆ ವಿವಿಧ ಮರಗಳ ಕೊಂಬೆಗಳನ್ನು ಕಡಿದು ಎತ್ತು ಮತ್ತು ಹಸುಗಳಿಗೆ ನೊಗೆಯಲ್ಲಿ ಕಟ್ಟಿಕೊಂಡು ಮೆರವಣಿಗೆ ಮೂಲಕ ದೇವಾಲಯದ ಮುಂದೆ ತಂದು ಹಾಕಿದರು. ಸಾಂಪ್ರದಾಯಿಕವಾಗಿ ಕೊಂಡದ ಗುಳಿಯಲ್ಲಿ ಸೌದೆ ಜೋಡಣೆ ಮಾಡಿ ಮಧ್ಯರಾತ್ರಿ ವೇಳೆಗೆ ಪೂಜೆ ಸಲ್ಲಿಸಿ ಬೆಂಕಿ ಹಚ್ಚಲಾಯಿತು.
ದೀಪಾಲಂಕಾರ: ಪಟ್ಟಣದ ಪ್ರಮುಖ ಬೀದಿಗಳಾದ ಪೇಟೆಬೀದಿ, ಗಂಗಮತ ಬೀದಿ, ಕಾಳಮ್ಮ ಬೀದಿ, ತ್ಯಾಗರಾಜ ರಸ್ತೆ, ಮಡಿವಾಳ ಬೀದಿ, ಅಶೋಕ ನಗರ, ಕೀರ್ತಿನಗರ, ಸಿದ್ಧಾರ್ಥ ನಗರ, ಬಸವಲಿಂಗಪ್ಪನಗರ ಸೇರಿದಂತೆ ಹಲವು ಬಡಾವಣೆ, ಮೈಸೂರು, ಕೊಳ್ಳೆಗಾಲ ರಸ್ತೆಗಳಲ್ಲಿ ವಿದ್ಯುತ್ ದೀಪಗಳಿಂದ ಅಲಂಕಾರ ಮಾಡಲಾಗಿತ್ತು.
ಶುಕ್ರವಾರ ರಾತ್ರಿ ಒಂದೊಂದು ಕೋಮಿನ ಜನರು ಘಟದ ಉತ್ಸವಗಳನ್ನು ತಾಯಿಗೆ ಹೊತ್ತು ತರುವ ಮೆರವಣಿಗೆಗೆ ಶಾಸಕ ಡಾ.ಕೆ.ಅನ್ನದಾನಿ ಪೂಜೆ ಸಲ್ಲಿಸಿ ಚಾಲನೆ ನೀಡಿದರು. ಸಂಪ್ರದಾಯದಂತೆ ನಿಗದಿತವಾಗಿ ಪ್ರತ್ಯೇಕವಾಗಿ ಘಟಗಳ ಮೆರವಣಿಗಗಳು ಬೆಳಗಿನವರೆಗೂ ಸಾಗಿ ಪಟ್ಟಲದಮ್ಮನಿಗೆ ಸೇವೆ ಸಲ್ಲಿಸಿದರು. ಈ ವೇಳೆ ಹರಕೆ ಹೊತ್ತ ಭಕ್ತರು ಹಾಲರವಿ ಹೊತ್ತು ಬಾಯಿ ಬೀಗ ಹಾಕಿಸಿ ಹರಕೆ ತೀರಿಸಲು ತೆರಳಿದರು.
ಸಿ.ಡಿ. ಬಂಡಿಗೆ ಚಾಲನೆ:
ಕೋಟೆ ಆಂಜನೇಯ ಬೀದಿಯ ಪಟೇಲರ ಮನೆಯ ಮುಂದೆ ಸಿಡಿ ಬಂಡಿಗೆ ಅಲಂಕಾರ ಮಾಡಿ ಪೂಜೆ ಸಲ್ಲಿಸಲಾಯಿತು. ನಂತರ ಬ್ರಾಹ್ಮಣರ ಬೀದಿಯಲ್ಲಿರುವ ಸಾರಂಗಪಾಣಿ ದೇವಸ್ಥಾನದ ದೊಡ್ಡ ತವರ ಮರದಲ್ಲಿ ತಯಾರಿಸಿರುವ ಸಿಡಿಬಂಡಿಯ ಕಂಬದ ತುದಿಗೆ ಅಲಕೃತಗೊಳಿಸಿದ ಸಿಡಿರಣ್ಣನನ್ನು ಕಟ್ಟಿ ಪೂಜಾವಿಧಿ ವಿಧಾನಗಳನ್ನು ನೆರವೇರಿಸಿ ಸಿಡಿಗೆ ಚಾಲನೆ ನೀಡಲಾಯಿತು. ಅಲ್ಲಿಂದ ಸಿಡೀರಣ್ಣನನ್ನು ಹೊತ್ತ ಸಿಡಿಬಂಡಿಯನ್ನು ನೂರಾರು ಸಂಖ್ಯೆಯಲ್ಲಿ ಭಕ್ತರು ಘೋಷಣೆಗಳನ್ನು ಕೂಗುತ್ತಾ ಎಳೆದರು.
ಗಂಗಾಧರಸ್ವಾಮಿ ದೇವಸ್ಥಾನದಿಂದ ಹೊರಟು ತ್ಯಾಗರಾಜ ರಸ್ತೆ, ಕಾಳಮ್ಮನ ಗುಡಿ ಬೀದಿ, ಮೈಸೂರು ರಸ್ತೆಯಿಂದ ಮುಂದೆ ಸಾಗಿ ಪೇಟೆ ಬೀದಿಗೆ ತೆರಳಿ ರಾಮ ಮಂದಿರ ಬಳಿ ಮೂರು ಸುತ್ತು ಹಾಕಿಸಿ ಗಂಗಾಮತ ಬಡಾವಣೆ ರಸ್ತೆಯಲ್ಲಿ ಸಂಚರಿಸಿ ಕುಪ್ಪಸ್ವಾಮಿ ಸರ್ಕಲ್ಗೆ ಆಗಮಿಸಿ ಅಲ್ಲಿಂದ ಸುಲ್ತಾನ್ ರಸ್ತೆ ಬದಿಯಲ್ಲಿರುವ ದೊಡ್ಡಕೆರೆ ಸಮೀಪದ ಪಟ್ಟಲದಮ್ಮ ದೇವಸ್ಥಾನದ ಆವರಣಕ್ಕೆ ಶನಿವಾರ ಬೆಳಗ್ಗೆ 10 ಗಂಟೆ ಸಮಯಕ್ಕೆ ಸಿಡಿಬಂಡಿಯನ್ನು ಎಳೆತಂದರು. ಭಕ್ತರು ಹರ್ಷೋದ್ಗಾರದಿಂದ ಸಿಡಿರಣ್ಣನಿರುವ ಬಂಡಿಯನ್ನು ಮೂರು ಸುತ್ತು ಹಾಕಿಸಿ ಸಮಾಪ್ತಿಗೊಳಿಸಲಾಯಿತು. ಈ ವೇಳೆ, ಭಕ್ತರು, ನವದಂಪತಿ ಸಿಡಿರಣ್ಣನಿಗೆ ಹಣ್ಣು-ದವನ ಸಮರ್ಪಿಸಿದರು. ಸಿಡಿ ಸಂಪನ್ನಗೊಳ್ಳುತ್ತಿದ್ದಂತೆ ದೇವಸ್ಥಾನದ ಎದುರು ಕೊಂಡೋತ್ಸವಕ್ಕೆ ಚಾಲನೆ ನೀಡಲಾಯಿತು. ಈ ವೇಳೆ ಪಟ್ಟಲದಮ್ಮದೇವಿಯ ಅರ್ಚಕ ಕೊಂಡ ಹಾಯ್ದರು. ಹರಕೆ ಹೊತ್ತವರು ಕೊಂಡ ಹಾಯ್ದರು. ಶಾಸಕ ಡಾ.ಕೆ.ಅನ್ನದಾನಿ, ಮಾಜಿ ಶಾಸಕರಾದ ಬಿ.ಸೋಮಶೇಖರ್, ನರೇಂದ್ರಸ್ವಾಮಿ ಪೂಜೆ ಸಲ್ಲಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net