ಮಳವಳ್ಳಿ ಸರ್ವಾಂಗೀಣ ಅಭಿವೃದ್ಧಿಗೆ ಒತ್ತು

30mlv1
Published on

ಮಳವಳ್ಳಿ: ತಾಲೂಕಿನ ಸರ್ವಾಂಗೀಣ ಅಭಿವೃದ್ಧಿಗೆ ಒತ್ತು ನೀಡುವುದರ ಜತೆಗೆ ಯುವಕರ ನಿರುದ್ಯೋಗ ಸಮಸ್ಯೆ ನಿವಾರಣೆಗಾಗಿ ವಿವಿಧ ಕಾರ್ಖಾನೆಗಳನ್ನು ತೆರೆಯಲು ಉದ್ಯಮಿಗಳಿಗೆ ಆಹ್ವಾನ ನೀಡಲಾಗುತ್ತಿದೆ ಎಂದು ಶಾಸಕ ಪಿ.ಎಂ.ನರೇಂದ್ರಸ್ವಾಮಿ ತಿಳಿಸಿದರು.

ಪಟ್ಟಣ ಸೇರಿದಂತೆ ತಾಲೂಕಿನ ವಿವಿಧೆಡೆ ಬುಧವಾರ ಅಭಿವೃದ್ಧಿ ಕಾಮಗಾರಿಗೆ ಶಂಕುಸ್ಥಾಪನೆ ಹಾಗೂ ಉದ್ಘಾಟನೆ ಮಾಡಿದ ನಂತರ ಮಾತನಾಡಿದ ಅವರು, ಈಗಾಗಲೇ ಕ್ಷೇತ್ರದಲ್ಲಿ ಬಹಳಷ್ಟು ಅಭಿವೃದ್ಧಿ ಕಾರ್ಯಗಳನ್ನು ನಡೆಸಲಾಗಿದ್ದು, ಮುಂದಿನ ದಿನಗಳಲ್ಲೂ ಈ ನಾಗಲೋಟ ಮುಂದುವರಿಯಲಿದೆ. ಉದ್ಯೋಗ ಸೃಷ್ಟಿಗಾಗಿ ತಾಲೂಕಿನ ವಿವಿಧೆಡೆಗಳಲ್ಲಿ ವಿವಿಧ ಉದ್ಯಮಗಳ ಪ್ರಾರಂಭಕ್ಕೆ ಸಹಕಾರ ನೀಡಲಾಗುತ್ತಿದೆ. ಮೈಸೂರು ಮುಖ್ಯ ರಸ್ತೆಯ ಸುತ್ತಲಿನ ಪ್ರದೇಶದಲ್ಲಿ ಗಾರ್ಮೆಂಟ್ ಕಾರ್ಖಾನೆ ಇನ್ನೆರಡು ತಿಂಗಳಲ್ಲಿ ಕಾರ್ಯಾರಂಭಗೊಳ್ಳಲಿದೆ ಎಂದು ಹೇಳಿದರು.

ಪ್ರತಿ ವರ್ಷದಂತೆ ಪ್ರಸ್ತುತ ವರ್ಷವೂ ವಿಜೃಂಭಣೆಯಿಂದ ಗಗನಚುಕ್ಕಿ ಜಲಪಾತೋತ್ಸವ ಕಾರ್ಯಕ್ರಮ ನಡೆಸಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಮುಖ್ಯಮಂತ್ರಿಯಿಂದ ಉದ್ಘಾಟನೆಗೆ ದಿನಾಂಕ ನಿಗದಿಪಡಿಸಿಕೊಂಡು ಕಾರ್ಯಕ್ರಮ ಆಯೋಜಿಸಲಾಗುವುದು ಎಂದು ತಿಳಿಸಿದರು. ಇದರ ಜತೆಗೆ ಸೆಪ್ಟೆಂಬರ್ ಅಥವಾ ಅಕ್ಟೋಬರ್ ತಿಂಗಳಲ್ಲಿ ಮುಖ್ಯಮಂತ್ರಿ ಮತ್ತು ಉಪ ಮುಖ್ಯಮಂತ್ರಿ ಸೇರಿದಂತೆ ಇನ್ನಿತರ ಸಚಿವರನ್ನು ಆಹ್ವಾನಿಸಿ ಪೂರಿಗಾಲಿ ಹನಿ ನೀರಾವರಿ ಯೋಜನೆ ಸೇರಿದಂತೆ ಹಲವಾರು ಅಭಿವೃದ್ಧಿ ಯೋಜನೆಗಳನ್ನು ಉದ್ಘಾಟಿಸುವ ಬೃಹತ್ ಸಮಾರಂಭವನ್ನು ಮಳವಳ್ಳಿ ಪಟ್ಟಣದಲ್ಲಿ ನಡೆಸಲಾಗುವುದು ಎಂದು ಮಾಹಿತಿ ನೀಡಿದರು.

ಇದಕ್ಕೂ ಮೊದಲು ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಆವರಣದಲ್ಲಿ 7.20 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣಗೊಳ್ಳಲಿರುವ ನೂತನ ಕಾಲೇಜು ಕಟ್ಟಡ ನಿರ್ಮಾಣಕ್ಕೆ ಶಂಕುಸ್ಥಾಪನೆ, ಮಾಗನೂರು ಬಳಿ 25 ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣ ಗೊಂಡಿರುವ 11 ಕೆವಿ ವಿದ್ಯುತ್ ವಿತರಣಾ ಕೇಂದ್ರಕ್ಕೆ ಚಾಲನೆ ಹಾಗೂ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜು ಆವರಣದಲ್ಲಿ 4 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣಗೊಳ್ಳಲಿರುವ ಹೆಚ್ಚು ವರಿ ನೂತನ ಕಟ್ಟಡ ನಿರ್ಮಾಣಕ್ಕೆ ಭೂಮಿ ಪೂಜೆಯನ್ನು ಶಾಸಕ ಪಿ.ಎಂ.ನರೇಂದ್ರಸ್ವಾಮಿ ನೆರವೇರಿಸಿದರು.

ಪುರಸಭಾಧ್ಯಕ್ಷ ಪುಟ್ಟಸ್ವಾಮಿ, ಸದಸ್ಯ ನೂರುಲ್ಲಾ, ಬಸವರಾಜು, ಅಯೂಬ್ ಪಾಷಾ, ರಾಜಶೇಖರ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಅಧ್ಯಕ್ಷ ದೊಡ್ಡಯ್ಯ, ಸಿ. ಪಿ. ರಾಜು, ಮನ್‌ಮುಲ್ ನಿರ್ದೇಶಕ ವಿಶ್ವಾಸ್, ಮುಖಂಡರಾದ ದೇವರಾಜು, ಚಿಕ್ಕಲಿಂಗಯ್ಯ, ದಿಲೀಪ್ ಕುಮಾರ್ ಸೇರಿದಂತೆ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net