

ಮಳವಳ್ಳಿ: ಸಮರ್ಪಕ ಚರಂಡಿ (ಯುಜಿಡಿ) ಸೌಲಭ್ಯ ಕಲ್ಪಿಸದೆ ಹಾಗೂ ಅನೈರ್ಮಲ್ಯ ಅಶುಚಿತ್ವ ತಾಂಡವವಾಡುತ್ತಿದ್ದರೂ ಸೂಕ್ತ ಕ್ರಮ ವಹಿಸದ ಪುರಸಭೆ ಸದಸ್ಯರು ಹಾಗೂ ಆಡಳಿತ ಅಧಿಕಾರಿಗಳ ವಿರುದ್ಧ ಕರ್ನಾಟಕ ಪ್ರಾಂತ ರೈತ ಸಂಘದ ಸಹಯೋಗದಲ್ಲಿ ವಾರ್ಡ್ ನಿವಾಸಿಗಳು ಶುಕ್ರವಾರ ಪ್ರತಿಭಟನೆ ನಡೆಸಿದರು.
ಸಂಘಟನೆಯ ಸದಸ್ಯರೊಡನೆ ಪಟ್ಟಣದ 7ನೇ ವಾರ್ಡಿನ ನೂರಾರು ಸಂಖ್ಯೆಯ ನಿವಾಸಿಗಳು ಪುರಸಭೆ ಮುಂದೆ ಜಮಾವಣೆಗೊಂಡು ಹೋರಾಟಕ್ಕೆ ಕುಳಿತರು. ಐಟಿಐ ಕಾಲೇಜು ಹಿಂಭಾಗದ ತಮ್ಮ ಬಡಾವಣೆಗೆ ಸಮರ್ಪಕ ಚರಂಡಿ, ಯುಜಿಡಿ ಸೌಲಭ್ಯ ಕಲ್ಪಿಸದಿರುವುದರಿಂದ ಮಳೆ ಸುರಿದ ಸಂದರ್ಭದಲ್ಲಿ ಚರಂಡಿ ನೀರು ರಸ್ತೆಯ ಮೇಲೆಲ್ಲ ಹರಿದು ಮನೆಗಳ ಒಳಗೆ ನುಗ್ಗುತ್ತಿದೆ. ಇದರಿಂದ ಸುತ್ತಲಿನ ಪರಿಸರ ಮಾಲಿನ್ಯವಾಗಿರುವುದರ ಜತೆಗೆ ನಿವಾಸಿಗಳು ಕಲುಷಿತ ವಾತಾವರಣದಲ್ಲಿ ಸಾಂಕ್ರಾಮಿಕ ರೋಗ ಹರಡುವ ಭೀತಿಯಿಂದ ಬದುಕುವಂತಾಗಿದೆ.
ಖಾಸಗಿ ವ್ಯಕ್ತಿಗಳು ಯುಜಿಡಿ ಪೈಪ್‌ಲೈನ್‌ನಲ್ಲಿ ಸುಗಮವಾಗಿ ಕೊಳಚೆ ನೀರು ಹೋದಂತೆ ಬಂದ್ ಮಾಡಿಕೊಂಡಿದ್ದಾರೆ. ಕೂಡಲೇ ಅವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು. ಚರಂಡಿ ವ್ಯವಸ್ಥೆ ಮತ್ತು ಸ್ವಚ್ಛತೆಗೆೆ ಹೆಚ್ಚಿನ ಆದ್ಯತೆ ನೀಡುವಂತೆ ಹಲವು ಬಾರಿ ಮನವಿ ಮಾಡಿದರೂ ಅಧಿಕಾರಿ ವರ್ಗ ಬೇಜವಾಬ್ದಾರಿ ತೋರುತ್ತಿದ್ದಾರೆ. ಸ್ಥಳಕ್ಕೆ ತಹಸೀಲ್ದಾರ್ ಆಗಮಿಸಿ ಸೂಕ್ತ ಭರವಸೆ ನೀಡುವವರೆಗೂ ಹೋರಾಟ ಮಾಡುವುದಾಗಿ ಪಟ್ಟುಹಿಡಿದು ಕುಳಿತರು.
ಸ್ಥಳಕ್ಕೆ ತಹಸೀಲ್ದಾರ್ ಲೋಕೇಶ್ ಆಗಮಿಸಿ ಮನವಿ ಸ್ವೀಕರಿಸಿ ಮಾತನಾಡಿ, ಒಂದು ವಾರದೊಳಗೆ ಸಮಸ್ಯೆ ಬಗೆಹರಿಸುವಾದಾಗಿ ಭರವಸೆ ನೀಡಿದ ನಂತರ ಪ್ರತಿಭಟನೆ ಕೈಬಿಡಲಾಯಿತು. ಸಂಘಟನೆ ಅದ್ಯಕ್ಷ ಭರತ್‌ರಾಜ್, ಸಂಘಟನೆ ತಾಲೂಕು ಕಾರ್ಯದರ್ಶಿ ಲಿಂಗರಾಜಮೂರ್ತಿ, ಉಪಾಧ್ಯಕ್ಷ ಶಿವಕುಮಾರ್, ಚಿಕ್ಕಸ್ವಾಮಿ ಗುರುಸ್ವಾಮಿ, ಸತೀಶ್, ಚಿಕ್ಕಮೊಗಣ್ಣ, ನಂದೀಶ್,ನವೀನ್, ಜಗದೀಶ್, ಕರಿಯಪ್ಪ, ಕುಮಾರ್, ಮುಖ್ಯ ಅಧಿಕಾರಿ ಮಹಾದೇವು, ಆರೋಗ್ಯ ನೀರಿಕ್ಷಕ ಪ್ರಕಾಶ ಇದ್ದರು.