

ಮಳವಳ್ಳಿ : ಪಟ್ಟಣ ಸೇರಿದಂತೆ ತಾಲೂಕಿನ ಹಲವು ಗ್ರಾಮಗಳಲ್ಲಿ ವಿವಿಧ ಸಂಘಟನೆಗಳ ಸಹಯೊಗದಲ್ಲಿ ಸೋಮವಾರ ವಿಶ್ವ ಪರಿಸರ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.
ಪಟ್ಟಣದ ನ್ಯಾಯಾಲಯದ ಆವರಣದಲ್ಲಿ ಅರಣ್ಯ ಇಲಾಖೆ, ತಾಲೂಕು ಕಾನೂನು ಸೇವಾ ಸಮಿತಿ ಹಾಗೂ ವಕೀಲರ ಸಂಘದ ವತಿಯಿಂದ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಹಿರಿಯ ಸಿವಿಲ್ ನ್ಯಾಯಾಧೀಶ ಮಾದೇಶ್ ಅವರು ಗಿಡಗಳನ್ನು ನೆಟ್ಟು ನೀರೆರೆದರು. ಜೀವ ಸಂಕುಲದ ಉಳಿವಿಗಾಗಿ ಗಿಡಗಳನ್ನು ನೆಟ್ಟು ಪೋಷಿಸುವುದರ ಜತೆಗೆ ಮರಗಳ ಹನನವನ್ನು ನಿಲ್ಲಿಸುವ ಮೂಲಕ ಪರಿಸರ ಸಂರಕ್ಷಣೆ ಮಾಡಿಕೊಳ್ಳುವುದು ಪ್ರಸ್ತುತ ದಿನಮಾನಗಳಲ್ಲಿ ಅನಿವಾರ್ಯವಾಗಿದೆ. ಪ್ರತಿಯೊಬ್ಬ ನಾಗರಿಕರು ಜವಾಬ್ದಾರಿಯುತರಾಗಿ ಪರಿಸರವನ್ನು ಕಾಪಾಡಿಕೊಳ್ಳುವಂತೆ ಕರೆ ನೀಡಿದರು.
ನ್ಯಾಯಾಧೀಶರಾದ ಮಮತಾ ಶಿವಪೂಜೆ, ಸಚಿನ್‌ಶಿವಪೂಜೆ, ಅರಣ್ಯಾಧಿಕಾರಿಗಳಾದ ಕನ್ನಿಕಾ, ಎನ್.ಪಿ.ಮಹದೇವು, ಶಿವರಾಜು, ವಕೀಲರ ಸಂಘದ ಅಧ್ಯಕ್ಷ ಎಂ.ಸುಂದರ್, ಸರ್ಕಾರಿ ಅಭಿಯೋಜಕರಾದ ಪೂರ್ಣಿಮಾ, ಶ್ರೀಕಂಠಸ್ವಾಮಿ ಇದ್ದರು.
ಪುರಸಭೆ ವತಿಯಿಂದ ಸಾರ್ವಜನಿಕ ರುದ್ರಭೂಮಿಯಲ್ಲಿ ಪುರಸಭೆ ಉಪಾಧ್ಯಕ್ಷ ಪ್ರಶಾಂತ್ ಗಿಡಗಳನ್ನು ನೆಟ್ಟು ನೀರೆರೆದರು. ಮುಖ್ಯಾಧಿಕಾರಿ ಮಹದೇವು, ಸದಸ್ಯ ಟಿ.ನಂದಕುಮಾರ್, ಮಾಜಿ ಅಧ್ಯಕ್ಷ ದೊಡ್ಡಯ ಪರಿಸರ ಜಾಗೃತಿ ಬಗ್ಗೆ ಮಾತನಾಡಿದರು. ಸದಸ್ಯರಾದ ಪುಟ್ಟಸ್ವಾಮಿ, ನೂರುಲ್ಲಾ, ಸಿದ್ದರಾಜು, ಪ್ರಮಿಳಾ, ಮುಖಂಡ ನಾಗರಾಜು ಸೇರಿದಂತೆ ಅಧಿಕಾರಿಗಳಿದ್ದರು.
ತಾಲೂಕು ಸಾರ್ವಜನಿಕ ಕ್ರೀಡಾಂಗಣದಲ್ಲಿ ಬಿದರ ಹೊಸಹಳ್ಳಿಯಲ್ಲಿರುವ ಆರ್ಯಭಟ ಶಾಲೆಯ ವಿದ್ಯಾರ್ಥಿಗಳು ಪ್ಲಾಸ್ಟಿಕ್ ಬಳಕೆಯಿಂದ ಪರಿಸರದ ಮೇಲಾಗುತ್ತಿರುವು ದುಶ್ಪರಿಣಾಮಗಳ ಕುರಿತು ಕಿರು ನಾಟಕ ಪ್ರದರ್ಶನಮಾಡಿ ಗಮನ ಸೆಳೆದರು. ನಂತರ ಶಾಲಾ ಆಡಳಿತ ಮಂಡಳಿ ವತಿಯಿಂದ ಕ್ರೀಡಾಂಗಣದ ಆವರಣದಲ್ಲಿ ಗಿಡಗಳನ್ನು ನೆಡಲಾಯಿತು. ಇದೇ ಸಂದರ್ಭದಲ್ಲಿ ಪರಿಸರ ಪ್ರೇಮಿ ಸಾಲುಮರ ನಾಗರಾಜು ರವರನ್ನು ಗೌರವಿಸಲಾಯಿತು. ಆರ್ಯಭಟ ಶಾಲೆ ವ್ಯವಸ್ಥಾಪ ರವೀಶ್, ನಿರ್ದೇಶಕ ಅರುಣ್ ಕುಮಾರ್, ಹಲೋ ಕಿಡ್ಸ್ ಮಾಂಟೆಸರಿ ವ್ಯವಸ್ಥಾಪಕ ಆನಂದ್, ಅರಣ್ಯ ಇಲಾಖೆ ಅಧಿಕಾರಿಗಳಾದ ಕನ್ನಿಕಾ, ಶಿವರಾಜು, ರಮೇಶ್ ಇದ್ದರು.